ಹೊಸದಿಲ್ಲಿ: ಅಡುಗೆ ಅನಿಲ ಸಿಲಿಂಡರ್ ದರ ಗುರುವಾರದಿಂದ 10 ರೂ. ಕಡಿಮೆಯಾಗಲಿದೆ. ರಾಜ್ಯ ರಾಜಧಾನಿಯಲ್ಲಿ 14 ಕೆ.ಜಿ. ಸಿಲಿಂಡರ್ 812 ರೂ.ಗಳಿಗೆ ಲಭ್ಯವಾಗಲಿದೆ. ಹೊಸದಿಲ್ಲಿ, ಮುಂಬಯಿಗಳಲ್ಲಿ 809 ರೂ. ದರ ಇರಲಿದೆ. ಮಂಗಳವಾರ ಪ್ರತೀ ಲೀಟರ್ ಪೆಟ್ರೋಲ್, ಡೀಸೆಲ್‌ನಲ್ಲಿ ಕ್ರಮವಾಗಿ 22 ಪೈಸೆ, 23 ಪೈಸೆ ಇಳಿಕೆಯಾದ ಬೆನ್ನಿಗೆ ಎಲ್‌ಪಿಜಿ ದರವೂ ಇಳಿದಿರುವುದು ಬಳಕೆದಾರರಿಗೆ ನೆಮ್ಮದಿ ನೀಡಲಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆಗಳೂ ಇಳಿಕೆ ಕಾಣಲಿವೆ ಎಂದು ಕೇಂದ್ರ ಸರಕಾರದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಪಾನ್-ಆಧಾರ್ ಲಿಂಕ್ ಗಡುವು ವಿಸ್ತರಣೆ :
ಪಾನ್ -ಆಧಾರ್ ಲಿಂಕ್ ಮಾಡುವ ಅವಧಿಯನ್ನು ಕೇಂದ್ರ ಸರಕಾರ ಜೂ. 30ರ ವರೆಗೆ ವಿಸ್ತರಿಸಿದೆ. ಈ ಬಗ್ಗೆ ಆದಾಯ ತೆರಿಗೆ ಇಲಾಖೆ ಬುಧವಾರ ಟ್ವೀಟ್ ಮಾಡಿದೆ. ಇವೆರಡನ್ನು ಲಿಂಕ್ ಮಾಡಲು ಎ. 1 ಕೊನೆಯ ದಿನವಾಗಿತ್ತು. ಇವುಗಳನ್ನು ಲಿಂಕ್ ಮಾಡಲು ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್‌ನಲ್ಲಿ ತಾಂತ್ರಿಕ ತೊಂದರೆ ಉಂಟಾಗುತ್ತಿರುವ ಬಗ್ಗೆ ಸಾವಿರಾರು ಮಂದಿ ಆಕ್ಷೇಪಿಸಿದ್ದರು.