Advertisement

ವೈದ್ಯ ಶಿಕ್ಷಣದಲ್ಲಿ ಆರ್ಥಿಕ ದುರ್ಬಲರಿಗೆ 10% ಮೀಸಲು, ರಾಜ್ಯದಲ್ಲೂ ಜಾರಿಗೆ ನಿರ್ಧಾರ

09:19 PM Aug 08, 2021 | Team Udayavani |

ಬೆಂಗಳೂರು: ವೈದ್ಯಕೀಯ ಶಿಕ್ಷಣದಲ್ಲಿ ಆರ್ಥಿಕವಾಗಿ ದುರ್ಬಲರಾಗಿರುವವರಿಗೆ ಶೇ10ರಷ್ಟು ಮೀಸಲು ನೀಡುವ ಮಹತ್ವದ ನಿರ್ಧಾರವನ್ನು ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರಕಾರ ಕೈಗೊಂಡಿದ್ದು, ರಾಜ್ಯದಲ್ಲೂ ಅದನ್ನು ಜಾರಿಗೆ ತರಲು ಸರಕಾರ ನಿರ್ಧಾರ ಮಾಡಿದೆ ಎಂದು ಉನ್ನತ ಶಿಕ್ಷಣ, ಐಟಿ-ಬಿಟಿ, ವಿಜ್ಞಾನ-ತಂತ್ರಜ್ಞಾನ ಹಾಗೂ ಕೌಶಲ್ಯಾಭಿವೃದ್ಧಿ ಖಾತೆ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

Advertisement

ಮಲ್ಲೇಶ್ವರದಲ್ಲಿಂದು ʼಮಲ್ಲೇಶ್ವರ ಬ್ರಾಹ್ಮಣ ಮಹಾಸಭಾʼ ಹಾಗೂ ʼಉಭಯ ವೇದಾಂತ ಪ್ರವರ್ತನಾ ಸಭಾʼ ಸಹಯೋಗದಲ್ಲಿ ಬ್ರಾಹ್ಮಣ ಸಮುದಾಯದವರಿಗೆ ಆಹಾರ ಕಿಟ್ ವಿತರಣೆ ಮಾಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕಳೆದ ಸಂಪುಟ ಸಭೆಯಲ್ಲಿ ಈ ಬಗ್ಗೆ ಸರಕಾರ ನಿರ್ಣಯ ಕೈಗೊಂಡಿದ್ದು, ಕೆಲ ದಿನಗಳಲ್ಲಿಯೇ ಆದೇಶ ಹೊರಬೀಳಲಿದೆ. ಅತ್ಯಂತ ದೂರದೃಷ್ಟಿ ಹಾಗೂ ವೈದ್ಯಕೀಯ ಶಿಕ್ಷಣದಲ್ಲಿ ಎಲ್ಲರಿಗೂ ಸಮಾನ ಅವಕಾಶ ಸಿಗಬೇಕು ಎನ್ನುವ ಉದ್ದೇಶದಿಂದ ಕೇಂದ್ರ ಸರಕಾರ ಆರ್ಥಿಕ ದುರ್ಬಲರ ನೆರವಿಗೆ ಧಾವಿಸಿದೆ. ಬ್ರಾಹ್ಮಣ ಸಮುದಾಯದಲ್ಲಿರುವ ಆರ್ಥಿಕ ದುರ್ಬಲರಿಗೂ ಇದರ ಲಾಭ ಧಕ್ಕಲಿದೆ. ಈ ಮೂಲಕ ಕೇಂದ್ರ ಮತ್ತು ರಾಜ್ಯ ಸರಕಾರಗಳು ಜಾರಿಗೆ ತಂದಿರುವ ಎಲ್ಲ ಯೋಜನೆಗಳ ಪ್ರಯೋಜನವನ್ನು ಬ್ರಾಹ್ಮಣರಲ್ಲಿರುವ ಆರ್ಥಿಕ ದುರ್ಬಲ ಕುಟುಂಬಗಳು ಪಡೆದುಕೊಳ್ಳಬೇಕು ಎಂದು ಅವರು ಸಲಹೆ ಮಾಡಿದರು.

ಆರ್ಥಿಕ ದುರ್ಬಲರಿಗೆ 10% ಮೀಸಲು ನೀಡುವುದಕ್ಕೆ ಕಾಂಗ್ರೆಸ್ ಸೇರಿ ಅನೇಕ ಪ್ರತಿಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದವು. ಆದರೆ, ವೈಜ್ಞಾನಿಕವಾಗಿ ಹಾಗೂ ನ್ಯಾಯಯುತವಾಗಿ ಆರ್ಥಿಕ ದುರ್ಬಲರಿಗೆ ಇಷ್ಟು ಮೀಸಲು ನೀಡಲೇಬೇಕೆಂದು ಮೋದಿ ಅವರು ನಿಶ್ಚಿಯಿಸಿದ್ದರು. ಆ ಬಗ್ಗೆ ಕೇಂದ್ರದ ಆದೇಶವೂ ಹೊರಬಿದ್ದಿದೆ ಎಂದು ಡಾ.ಅಶ್ವತ್ಥನಾರಾಯಣ ನುಡಿದರು.

ಈಗಾಗಲೇ ರಾಜ್ಯಾದ್ಯಂತ 70,000 ಕ್ಕೂ ಹೆಚ್ಚು ಬ್ರಾಹ್ಮಣ ಸಮುದಾಯದವರಿಗೆ ಮನೆ ಬಾಗಿಲಿಗೆ ಫುಡ್ ಕಿಟ್ ತಲುಪಿಸುವ ಕೆಲಸ ಮಾಡಲಾಗಿದೆ. ಅದರ ನೇತೃತ್ವದ ವಹಿಸಿದ್ದ ಬ್ರಾಹ್ಮಣ ಅಭಿವೃದ್ಧಿ ಮಂಡಲಿ ಆಧ್ಯಕ್ಷ ಸಚ್ಚಿದಾನಂದ ಮೂರ್ತಿ ಅವರ ಬಗ್ಗೆ ಡಾ.ಅಶ್ವತ್ಥನಾರಾಯಣ ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

ಬ್ರಾಹ್ಮಣ ಸಮುದಾಯದ ಪ್ರಕಾಶ್ ಅಯ್ಯಾಂಗಾರ್, ಪ್ರಶಾಂತ್ ಮುಂತಾದವರು ಹಾಜರಿದ್ದರು. ಈ ಸಂದರ್ಭದಲ್ಲಿ 150 ಆಹಾರ ಕಿಟ್ʼಗಳನ್ನು ವಿತರಣೆ ಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next