Advertisement

ಬಿಎಸ್‌ವೈಗೆ ಫೇಸ್‌ಬುಕ್‌ ಮೂಲಕ ಸಿಎಂ ಹತ್ತು ಪ್ರಶ್ನೆ

06:35 AM Apr 13, 2018 | Team Udayavani |

ಬೆಂಗಳೂರು:ಕರ್ನಾಟಕವನ್ನು ಅತ್ಯಂತ ಭ್ರಷ್ಟ  ರಾಜ್ಯವಾಗಿಸಿದ, ಬೆಂಗಳೂರನ್ನು ಗಾಬೇìಜ್‌ ಸಿಟಿ ಎಂದು ಕುಖ್ಯಾತಿ ಗಳಿಸುವಂತೆ ಮಾಡಿದ ಹಾಗೂ ರೈತರ ಮೇಲೆ ಗೋಲಿಬಾರ್‌ಗೆ ಆದೇಶ ನೀಡಿದವರು, ದೊಡ್ಡ ದೊಡ್ಡ ಮಾತುಗಳನ್ನಾಡುತ್ತಿರುವುದು ವಿಪರ್ಯಾಸ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಆಧಾರ ರಹಿತ ಆರೋಪಗಳ ಹೊರತಾಗಿ ರಾಜ್ಯದ 6.5 ಕೋಟಿ ಜನತೆಗೆ ನೀಡಲು ನಿಮ್ಮ ಬಳಿ ಏನಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ  ಫೇಸ್‌ಬುಕ್‌ ಮೂಲಕ ಹತ್ತು ಪ್ರಶ್ನೆಗಳನ್ನು ಕೇಳಿದ್ದಾರೆ. ನೀವು ಅಭಿವೃದ್ಧಿ ಬಗ್ಗೆ ಚರ್ಚಿಸಲು ಸಿದ್ದರಿರುವುದಾದರೆ, ಈ ಪ್ರಶ್ನೆಗಳಿಗೆ ಉತ್ತರಿಸಿ ಎಂದು ಸವಾಲು ಹಾಕಿದ್ದಾರೆ.

1) ಕನ್ನಡಿಗರ ಆಕಾಂಕ್ಷೆಯಂತೆ ನಾಡಿಗೆ ತನ್ನದೇ ಆದ ಪ್ರಮುಖ ಗುರುತು ನೀಡುವ ನಾಡ ಧ್ವಜ ಹೊಂದಲು ನೀವು ಬೆಂಬಲಿಸುವಿರಾ ?
2) ಸ್ವತಂತ್ರ ಧರ್ಮಕ್ಕಾಗಿ ಬಸವೇಶ್ವರ ಅನುಯಾಯಿಗಳ ಆಕಾಂಕ್ಷೆಗಳನ್ನು ನೀವು ಬೆಂಬಲಿಸುತ್ತೀರಾ ?
3) ಮಹದಾಯಿ ಸಮಸ್ಯೆಯನ್ನು ಶೀಘ್ರ ಪರಿಹರಿಸಲು ಪ್ರಧಾನ ಮಂತ್ರಿಯವರ ಮಧ್ಯಸ್ಥಿಕೆಯನ್ನು ನೀವು ಬೆಂಬಲಿಸುತ್ತೀರಾ ?
4) ಕೇಂದ್ರ ಸರ್ಕಾರವು ವಾಣಿಜ್ಯ ಬ್ಯಾಂಕುಗಳಲ್ಲಿರುವ ರಾಜ್ಯದ ರೈತರ ಸಾಲ ಮನ್ನಾ ಮಾಡಬೇಕು ಎನ್ನುವುದನ್ನು ನೀವು ಬೆಂಬಲಿಸುತ್ತೀರಾ ?
5) ಮಹಾರಾಷ್ಟ್ರದ ಯಾವತ್ಮಲ್‌ನಲ್ಲಿ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದು, ಅದಕ್ಕೆ ಪ್ರಧಾನಮಂತ್ರಿಯೇ ಹೊಣೆ ಎಂದು ಹೇಳಿದ್ದಾನೆ. ಇದರ ಬಗ್ಗೆ ಬಿಜೆಪಿ ಸರ್ಕಾರ ಏನು ಮಾಡುತ್ತಿದೆ ?  ರೈತರ ಆತ್ಮಹತ್ಯೆಗಳಿಗೆ ನೀವು ನಮ್ಮತ್ತ ಬೆರಳು ತೋರಿದಿರಿ, ಈಗ  ನಿಮ್ಮ ನಿಲುವೇನು?
6) ನೀವು ನೂರಾರು ಎಕರೆ ಬಿಡಿಎ ಭೂಮಿಯನ್ನು ಡಿನೋಟಿಫೈ ಮಾಡಿದ್ದರಿಂದ ಹಲವಾರು ಮಂದಿ ಮನೆಗಳನ್ನು ಕಳೆದುಕೊಂಡಿದ್ದಾರೆ. ನೀವು ಏಕೆ ಹಾಗೆ ಮಾಡಿದ್ದು ? ಬೆಂಗಳೂರಿನವರು ಮತ್ತೆ ನಿಮ್ಮನ್ನು ಹೇಗೆ ನಂಬುತ್ತಾರೆ ?
7) ರೆಡ್ಡಿ ಸಹೋದರರು 25 ಸಾವಿರ ಕೋಟಿ ರೂ. ಖನಿಜ ಸಂಪತ್ತು ಲೂಟಿ ಮಾಡಲು ನೀವು ಬಿಟ್ಟಿದ್ದು ಏಕೆ ? ಆ ಸಂದರ್ಭದಲ್ಲಿ ನೀವೇಕೆ ಅಸಹಾಯಕರಾಗಿದ್ದಿರಿ ?
8) ನಾವು ಅನ್ನಭಾಗ್ಯ ಯೋಜನೆಯಡಿ ಸುಮಾರು 4 ಕೋಟಿಗೂ ಅಧಿಕ ಜನರಿಗೆ ಮಾಸಿಕ 7 ಕೆ.ಜಿ.  ಉಚಿತ ಅಕ್ಕಿ ಹಾಗೂ 1 ಕೋಟಿ ಮಕ್ಕಳಿಗೆ ಹಾಲು ನೀಡುತ್ತಿದ್ದೇವೆ. ನೀವು ಇದಕ್ಕಿಂತ ಭಿನ್ನವಾಗಿ ಏನು ಮಾಡುತ್ತೀರಿ ?
9) ಬಿಜೆಪಿಯ ಮೂರು ಮುಖ್ಯಮಂತ್ರಿಗಳು 5 ವರ್ಷದಲ್ಲಿ 6 ಕಿ.ಮೀ. ಮೆಟ್ರೋ ಮಾರ್ಗವನ್ನು ನಿರ್ಮಿಸಿದ್ದರು. ನಾವು 5 ವರ್ಷಗಳಲ್ಲಿ 36 ಕಿ.ಮೀ. ಮೆಟ್ರೋ ಮಾರ್ಗವನ್ನು ನಿರ್ಮಿಸಿದ್ದೇವೆ. 2ನೇ ಹಂತವನ್ನು ನಿರ್ಮಿಸುತ್ತಿದ್ದೇವೆ. ಮೆಟ್ರೋ 3ನೇ ಹಂತವನ್ನು ಸಿದ್ದಪಡಿಸುತ್ತಿದ್ದೇವೆ. ನಿಮ್ಮದೇನು ಕೊಡುಗೆ ಇದರಲ್ಲಿ?
10) ನಾವು ಭಾರತ ಸರ್ಕಾರದಿಂದ ಉಪ ನಗರ ರೈಲು ಯೋಜನೆಗೆ ಅನುದಾನ ದೊರೆಯುವಂತೆ ಮಾಡಿದ್ದೇವೆ. ಎಲೆಕ್ಟ್ರಿಕ್‌ ಬಸ್‌ಗಳನ್ನು ಜಾರಿಗೊಳಿಸುತ್ತಿದ್ದೇವೆ. ಬಿಎಂಟಿಸಿ ಬಸ್‌ಗಳನ್ನು ಹೆಚ್ಚಿಸುತ್ತೇವೆ. ಸಂಚಾರ ದಟ್ಟಣೆ ನಿವಾರಣೆಗೆ ನಿಮ್ಮ ಪ್ರಕಾರ ಪರಿಹಾರವೇನು ?
ಈ ಪ್ರಶ್ನೆಗಳಿಗೆ ಉತ್ತರಿಸಿ. ಚುನಾವಣೆಯಲ್ಲಿ  ಮತದಾರರೊಂದಿಗೆ ನಿಮ್ಮ ದೂರ ದೃಷ್ಠಿಯ ಬಗ್ಗೆ ಮಾತನಾಡಿ, ಅದರ ಬದಲು ಆಧಾರ ರಹಿತ ಆರೋಪ ಮಾಡುವುದನ್ನು ನಿಲ್ಲಿಸಿ ಎಂದು ಮುಖ್ಯಮಂತ್ರಿವರು ಸಾಮಾಜಿಕ ಜಾಲ ತಾಣದ ಮೂಲಕ ಸಲಹೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next