Advertisement

ಶೇ.10 ಮತದಾನ ಪ್ರಮಾಣ ಹೆಚ್ಚಳ ಗುರಿ

07:10 AM Mar 18, 2018 | |

ಉಡುಪಿ: ಈ ಬಾರಿ ಉಡುಪಿ ಜಿಲ್ಲೆಯಲ್ಲಿಯೂ ಮತದಾನ ಪ್ರಮಾಣವನ್ನು ಶೇ.10ರಷ್ಟು  ಹೆಚ್ಚಿಸುವ ಗುರಿ ಹೊಂದಲಾಗಿದೆ. ಈ ನಿಟ್ಟಿನಲ್ಲಿ  ಮತದಾರರ ಜಾಗೃತಿ ಅಭಿಯಾನ “ಸ್ವೀಪ್‌’ ಸಮಿತಿ ಕೂಡ ಕಾರ್ಯೋನ್ಮುಖವಾಗಿದೆ ಎಂದು ಚುನಾವಣಾ ಆಯೋಗದಿಂದ ನಿಯೋಜನೆಗೊಂಡಿರುವ ರಾಜ್ಯ ಸಂಪನ್ಮೂಲ ವ್ಯಕ್ತಿ ಅಶೋಕ್‌ ಕಾಮತ್‌ ಅವರು ತಿಳಿಸಿದ್ದಾರೆ.

Advertisement

ಮಾ. 17ರಂದು ಉಡುಪಿ ಜಿಲ್ಲಾಡಳಿತ ಮತ್ತು ಸ್ವೀಪ್‌ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಅಟಲ್‌ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ “ಚುನಾವಣೆ-ಮಾಧ್ಯಮ ಕಾರ್ಯಾ ಗಾರ’ದಲ್ಲಿ ಅವರು ಮಾತನಾಡಿದರು. ಸರಕಾರಿ ನೌಕರರು ಕೂಡ ಶೇ.100 ರಷ್ಟು ಮತದಾನ ಮಾಡುವ ನಿಟ್ಟಿನಲ್ಲಿ ಪ್ರಯತ್ನ ನಡೆಸಲಾಗುತ್ತಿದೆ. ಚುನಾವಣೆಗೆ ಸಂಬಂಧಿಸಿದ ದೂರುಗಳನ್ನು ಗಂಟೆಗಳ ಕಾಲಮಿತಿಯಲ್ಲಿ, ಅಂದರೆ ಅತ್ಯಂತ ತುರ್ತಾಗಿ ವಿಲೇವಾರಿ ಮಾಡಲು ಆಯೋಗ ಸಿದ್ಧತೆ ನಡೆಸಿದೆ ಎಂದು ಅವರು ತಿಳಿಸಿದರು. 

ಕಿಟ್‌ ಬಿಡುಗಡೆ
ಮತದಾನ ಜಾಗೃತಿ ಅಭಿಯಾನದ ಪ್ರಚಾರ ಸಾಮಗ್ರಿಗಳನ್ನು ಹೊಂದಿರುವ ಕಿಟ್‌ಗಳನ್ನು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್‌ ಅವರು ಬಿಡುಗಡೆಗೊಳಿಸಿದರು. 

ಮತದಾನ ಪ್ರಕ್ರಿಯೆ, ವಿವಿ ಪ್ಯಾಟ್‌, ಸಹಾಯವಾಣಿ ಮೊದಲಾದ ಮಾಹಿತಿಗಳು ಈ ಕಿಟ್‌ನಲ್ಲಿವೆ. ಇಂತಹ 400ರಷ್ಟು ಕಿಟ್‌ಗಳನ್ನು ಸಿದ್ಧಪಡಿಸಲಾಗಿದೆ. ಇದನ್ನು ಗ್ರಾ.ಪಂ. ಹಾಗೂ ಇತರ ಅಧಿಕಾರಿಗಳಿಗೆ ವಿತರಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು. 

ಸಿಇಒ ಮತ್ತು ಸ್ವೀಪ್‌ ಸಮಿತಿ ಅಧ್ಯಕ್ಷ ಶಿವಾನಂದ ಕಾಪಶಿ, ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ್‌, ಐಎಎಸ್‌ ಪ್ರೊಬೆಷನರಿ ಅಧಿಕಾರಿ ಪೂರ್ವಿತಾ, ಮೀಡಿಯ ಸರ್ಟಿಫಿಕೇಟ್‌ ಆ್ಯಂಡ್‌ ಮಾನಿಟರಿ ಸಮಿತಿಯ ನಯನಾ ಉಪಸ್ಥಿತರಿದ್ದರು.ಇನ್ನೋರ್ವ ರಾಜ್ಯ ಸಂಪನ್ಮೂಲ ವ್ಯಕ್ತಿ ಪ್ರಕಾಶ್‌ ಅವರು ಮಾತನಾಡಿ, ಮಾಧ್ಯಮಗಳ ಮೇಲೆ ನಿಗಾ ಇರಿಸಲು ಮೀಡಿಯಾ ಸರ್ಟಿಫಿಕೇಟ್‌ ಆ್ಯಂಡ್‌ ಮಾನಿಟರಿಂಗ್‌ ಕಮಿಟಿಯನ್ನು ರಚಿಸ ಲಾಗುತ್ತದೆ. ಸೋಷಿಯಲ್‌ ಮೀಡಿಯಾ ಗಳಾದ ಫೇಸ್‌ಬುಕ್‌, ವಾಟ್ಸಪ್‌ ಮೊದಲಾದವುಗಳಲ್ಲಿ ಅಭ್ಯರ್ಥಿಗಳ ಪರ ನಡೆಸುವ ಪ್ರಚಾರದ ಬಗ್ಗೆಯೂ ನಿಗಾ ವಹಿಸಲಾಗುವುದು. ಇದಕ್ಕಾಗಿ ಐಟಿ ವಿಭಾಗವನ್ನು ತೆರೆಯಲಾಗುತ್ತದೆ ಎಂದು ತಿಳಿಸಿದರು.

Advertisement

ಅಶಕ್ತರಿಗೆ ವಾಹನ ವ್ಯವಸ್ಥೆ 
ವಿಕಲಚೇತನರು ಸೇರಿದಂತೆ ಅಶಕ್ತರಿಗೆ ಜಿಲ್ಲಾಡಳಿತ ವತಿಯಿಂದಲೇ ಉಚಿತ ವಾಹನ ವ್ಯವಸ್ಥೆ ಮಾಡಲಾಗುವುದು. ಸಾರ್ವಜನಿಕ ವಾಹನಗಳೇ ಲಭ್ಯವಿರದ ಪ್ರದೇಶಗಳಲ್ಲಿ ಇತರ ಸಾರ್ವಜನಿಕರಿಗೂ ವಾಹನ ವ್ಯವಸ್ಥೆ ಮಾಡಲು ಜಿಲ್ಲಾಡಳಿತ ಚಿಂತನೆ ನಡೆಸಿದೆ. ಆದರೆ ಇತರ ಸಾರ್ವಜನಿಕರಿಗೆ ಉಚಿತ ಇರುವುದಿಲ್ಲ. ವಿಶೇಷಚೇತನರು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ಮತದಾನ ಕೇಂದ್ರದಲ್ಲಿನ ಸೌಲಭ್ಯ, ಮತದಾನ ಕೇಂದ್ರಕ್ಕೆ ಬರುವ ವ್ಯವಸ್ಥೆಯ ಕುರಿತು 0820-2574811ಕ್ಕೆ ಕರೆ ಮಾಡಿ ಮಾಹಿತಿ, ಸೌಲಭ್ಯ ಪಡೆಯಬಹುದು. ಅಶಕ್ತರ  ಸಹಾಯಕ್ಕಾಗಿ ಸ್ವಯಂಸೇವಕರನ್ನು ಕೂಡ ನೇಮಿಸಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್‌ ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next