Advertisement

ಆ್ಯಪ್‌ ಆಟೋಗಳಿಗೆ ಶೇ.10 ಹೆಚ್ಚು ದರ ನಿಗದಿ

11:56 AM Nov 26, 2022 | Team Udayavani |

ಬೆಂಗಳೂರು: ಅಳೆದು-ತೂಗಿ ಕೊನೆಗೂ ಸಾರಿಗೆ ಇಲಾಖೆ ಆ್ಯಪ್‌ ಆಧಾರಿತ ಸೇವೆ ಸಲ್ಲಿಸುವ ಆಟೋಗಳಿಗೆ ದರ ನಿಗದಿಪಡಿಸಿದ್ದು, ಅದರಂತೆ ಈಗಿರುವ ಆಟೋ ಪ್ರಯಾಣ ದರಗಳ ಮೇಲೆ ಸೇವಾ ಶುಲ್ಕ ಮತ್ತು ಸರಕು ಸೇವಾ ತೆರಿಗೆ (ಜಿಎಸ್‌ಟಿ) ಸೇರಿ ಶೇ.10ರಷ್ಟು ಹೆಚ್ಚಳ ಮಾಡಿ ಸಾರಿಗೆ ಇಲಾಖೆ ಶುಕ್ರವಾರ ಆದೇಶ ಹೊರಡಿಸಿದೆ. ಇದರೊಂದಿಗೆ ಗೊಂದಲಕ್ಕೆ ತೆರೆಬಿದ್ದಂತಾಗಿದೆ.

Advertisement

ಆದೇಶದಂತೆ ಅಗ್ರಿಗೇಟರ್‌ಗಳ ಮೂಲಕ ಸೇವೆ ಸಲ್ಲಿಸುತ್ತಿರುವ ಆಟೋಗಳಿಗೆ ನಿಗದಿಪಡಿಸಿರುವ ಶೇ.10ರಷ್ಟು ಹೆಚ್ಚುವರಿ ಪ್ರಯಾಣ ದರದಲ್ಲಿ ಶೇ.5ರಷ್ಟು ಸೇವಾ ಶುಲ್ಕ ಹಾಗೂ ಜಿಎಸ್‌ಟಿ ಶೇ. 5ರಷ್ಟು ಸೇರಿದೆ. ಹಾಗಾಗಿ, ಸಾಮಾನ್ಯ ಆಟೋಗಳ ಕನಿಷ್ಠ ಪ್ರಯಾಣ ದರ 30 ರೂ. ಆಗಿದ್ದರೆ, ಆ್ಯಪ್‌ ಆಧಾರಿತ ಆಟೋಗಳ ಕನಿಷ್ಠ ಪ್ರಯಾಣ ದರ 33 ರೂ. ಆಗಲಿದೆ. ಮುಂಬರುವ ದಿನಗಳಲ್ಲಿ ರಾಜ್ಯದ ಎಲ್ಲ ಪ್ರಾದೇಶಿಕ ಸಾರಿಗೆ ಪ್ರಾಧಿಕಾರಗಳು ಕಾಲಕಾಲಕ್ಕೆ ನಿಗದಿಪಡಿಸುವ ಆಟೋಗಳ ಪ್ರಯಾಣ ದರದ ಮೇಲೆ ಈ ಶೇ. 10ರಷ್ಟು ದರ ಸೇರಿಸಿ ವಿಧಿಸಲು ಅವಕಾಶ ಇರುತ್ತದೆ. ಮೋಟಾರು ವಾಹನಗಳ ಅಧಿನಿಯಮ 1988ರ ಕಲಂ 67ರಡಿ ಸಾರಿಗೆ ಇಲಾಖೆ ಈ ಆದೇಶ ಹೊರಡಿಸಿದೆ.

ಆದರೆ, ಆಟೋ ಅಗ್ರಿಗೇಟರ್‌ ಸೇವೆ ಒದಗಿಸಲು ಚಾಲ್ತಿ ಯಲ್ಲಿರುವ ಪರವಾನಗಿ ಹೊಂದಿರುವ ಸಂಸ್ಥೆಗಳು ಮಾತ್ರ ಈ ದರ ವಿಧಿಸಲು ಅವಕಾಶ ಕಲ್ಪಿಸಲಾಗಿದೆ ಎಂಬ ನಿರ್ದೇಶನವನ್ನೂ ನೀಡಲಾಗಿದೆ.

“ಸಾರಿಗೆ ಇಲಾಖೆ ಹೊರಡಿಸಿರುವ ಆದೇಶ ಸ್ವಾಗತಾರ್ಹ. ಇದರಿಂದ ಬೇಕಾಬಿಟ್ಟಿ ದರ ನಿಗದಿಗೆ ಕಡಿವಾಣ ಬೀಳಲಿದೆ. ಇದನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವುದು ಕೂಡ ಅಷ್ಟೇ ಮುಖ್ಯ. ಇಲ್ಲವಾದರೆ, ಆದೇಶ ಕೇವಲ ಪೇಪರ್‌ನಲ್ಲಿ ಉಳಿಯುತ್ತದೆ’ ಎಂದು ಆದರ್ಶ ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘದ ಅಧ್ಯಕ್ಷ ಎಂ. ಮಂಜುನಾಥ್‌ ತಿಳಿಸುತ್ತಾರೆ.

ಹಿನ್ನೆಲೆ ಏನು?: ಆ್ಯಪ್‌ ಆಧಾರಿತ ಆಟೋಗಳು ಬೇಕಾಬಿಟ್ಟಿ ದರ ವಿಧಿಸಲಾಗುತ್ತಿದ್ದು, ಪ್ರಯಾ ಣಿಕರಿಗೆ ಹೊರೆಯಾಗಿ ಪರಿಣಮಿಸಿದೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆಯು ಅಗ್ರಿಗೇಟರ್‌ ಕಂಪನಿಗಳ “ದುಬಾರಿ ಪ್ರಯಾಣ’ಕ್ಕೆ ಬ್ರೇಕ್‌ ಹಾಕಲು ಮುಂದಾಗಿತ್ತು. ಆಗ, ಕಂಪನಿಗಳು ಕೋರ್ಟ್‌ ಮೊರೆಹೋಗಿದ್ದವು. ನ್ಯಾಯಾಲಯವು ಇಲಾಖೆ ಮತ್ತು ಕಂಪನಿಗಳು ಚರ್ಚಿಸಿ, ಸೂಕ್ತ ನಿರ್ಣಯಕ್ಕೆ ಬರುವಂತೆ ಸೂಚಿಸಿತ್ತು. ತದನಂತರ ಇಲಾಖೆ ಅಧಿಕಾರಿಗಳು ಆಟೋ ಚಾಲಕರ ಸಂಘ ಗಳು, ಅಗ್ರಿಗೇಟರ್‌ ಕಂಪನಿಗಳು, ಸಾರ್ವಜನಿಕ ರೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿದ್ದವು.

Advertisement

ಪರವಾನಗಿಯೇ ಇಲ್ಲ! : ಪ್ರಸ್ತುತ ಅಗ್ರಿಗೇಟರ್‌ ಸೇವೆ ಸಲ್ಲಿಸುತ್ತಿರುವ ಓಲಾ, ಉಬರ್‌ ಕಂಪನಿಗಳ ಪರವಾನಗಿ ಅವಧಿ ಮುಗಿದು ವರ್ಷವೇ ಕಳೆದಿದೆ. ನವೀಕರಣದ ಗೋಜಿಗೂ ಹೋಗಿಲ್ಲ. ಇನ್ನು ರ್ಯಾಪಿಡೊ ಪರವಾನಗಿಯನ್ನೂ ಪಡೆದಿಲ್ಲ. ಹೀಗಿರುವಾಗ, ಸಾರಿಗೆ ಇಲಾ ಖೆಯ ಈ ಆದೇಶ ಹೇಗೆ ಅನ್ವಯ ಆಗುತ್ತದೆ? ಒಂದು ವೇಳೆ ಅನ್ವಯಿಸಿದರೆ, ಆಗಲೂ ನಿಯಮಬಾಹಿರ ಆಗುವುದಿಲ್ಲವೇ’ ಎಂದು ಕರ್ನಾಟಕ ಸ್ಟೇಟ್‌ ಟೂರಿಸ್ಟ್‌ ಆಪರೇಟರ್ ಅಸೋಸಿಯೇಷನ್‌ ಅಧ್ಯಕ್ಷ ರಾಧಾಕೃಷ್ಣ ಹೊಳ್ಳ ಪ್ರಶ್ನಿಸುತ್ತಾರೆ. ತೆರಿಗೆ ವಿಧಿಸಲು ಅಗ್ರಿಗೇಟರ್‌ಗಳು ತಾವು ನೀಡಲಿರುವ ಆಟೋ ಸೇವೆಗಳ ಬಗ್ಗೆ ಇ-ಕಾಮರ್ಸ್‌ ನಿಯಮದಡಿ ಮತ್ತು ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ. ಒಂದು ವೇಳೆ ಹೀಗೆ ಇ-ಕಾಮರ್ಸ್‌ ಅಡಿ ಆಟೋಗಳು ನೋಂದಣಿಗೊಂಡರೆ, ಪ್ರಾದೇಶಿಕ ಸಾರಿಗೆ ಪ್ರಾಧಿಕಾರ (ಆರ್‌ಟಿಎ)ದ ವ್ಯಾಪ್ತಿಯಿಂದ ಹೊರಹೋಗುತ್ತವೆ. ಆಗ, ಕ್ಯಾಬ್‌ಗಳಂತೆ ಇವುಗಳಿಗೂ ನಿಯಂತ್ರಣ ಇರುವುದಿಲ್ಲ. ಇದಕ್ಕೆ ಆರ್‌ ಟಿಎ ಅವಕಾಶ ಮಾಡಿಕೊಡುತ್ತದೆಯೇ ಎಂದೂ ಅವರು ಕೇಳುತ್ತಾರೆ.

ದರ ನಿಗದಿ ಹೇಗೆ? : ಇ- ಕಾಮರ್ಸ್‌ ಅಡಿ ನೋಂದಣಿ ಮಾಡಿಕೊಂಡು ಸೇವೆ ಸಲ್ಲಿಸುವ ವಾಹ ನಗಳಿಗೆ ಅಗ್ರಿಗೇಟರ್‌ ನಿಯಮದಡಿ ಶೇ.5ರಷ್ಟು ಜಿಎಸ್‌ಟಿ ವಿಧಿಸಲು ಅವ ಕಾಶ ಇದೆ. ಇನ್ನು ಸೇವಾ ಶುಲ್ಕವನ್ನೂ ಸೇರಿಸಿದರೆ ಶೇ.10ರಷ್ಟು ಆಗುತ್ತದೆ. ಅದರಂತೆ ಪ್ರಸ್ತುತ ಆಟೋಗಳ ಕನಿಷ್ಠ ದರ 30 ರೂ. ಇದ್ದರೆ, ಆ್ಯಪ್‌ ಆಧಾರಿತ ಆಟೋಗಳಲ್ಲಿ 33 ರೂ. ಆಗುತ್ತದೆ. ನಂತರದ ಪ್ರತಿ ಕಿ.ಮೀ.ಗೆ 15 ರೂ. ಜತೆಗೆ ಶೇ.10ರಷ್ಟು ಹೆಚ್ಚುವರಿ ದರ ಸೇರುತ್ತದೆ. ಉದಾಹರಣೆಗೆ ಸಾಮಾನ್ಯ ಆಟೋಗಳಲ್ಲಿ 45 ರೂ. ಪ್ರಯಾಣ ದರವಾದರೆ, ಆ್ಯಪ್‌ ಆಧಾರಿತ ಆಟೋಗಳಲ್ಲಿ 50-52 ರೂ. ಆಗುತ್ತದೆ. ಅದೇ ರೀತಿ, 100 ರೂ.ಆಗಿದ್ದರೆ, ಓಲಾ, ಉಬರ್‌ ಆಟೋಗಳಲ್ಲಿ 110-115 ರೂ. ಆಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next