Advertisement

ಮಂತ್ರಾಲಯ ಮಠದಿಂದ ಸಿಎಂ ನಿಧಿಗೆ 10 ಲಕ್ಷ ರೂ.

11:36 PM Aug 11, 2019 | Lakshmi GovindaRaj |

ರಾಯಚೂರು: ಭೀಕರ ಪ್ರವಾಹಕ್ಕೆ ಸಿಲುಕಿ ನಲುಗಿ ಹೋಗಿರುವ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಪರಿಹಾರ ಕಾರ್ಯ ಕೈಗೊಳ್ಳಲು ಮುಖ್ಯಮಂತ್ರಿ ಪರಿಹಾರ ನಿಧಿಗೆ 10ಲಕ್ಷ ರೂ. ನೀಡುತ್ತಿರುವುದಾಗಿ ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಘೋಷಿಸಿದರು.

Advertisement

ಶ್ರೀಮಠದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೆ ಅನೇಕ ಬಾರಿ ಪ್ರವಾಹ ಸಂಭವಿಸಿದಾಗ ಶ್ರೀಮಠ ಕೈಲಾದ ನೆರವು ನೀಡುತ್ತಲೇ ಬಂದಿದೆ. ಕಳೆದ ವರ್ಷ ಕೊಡಗು ಪ್ರವಾಹ ವೇಳೆಯೂ ಮಠವು ನೆರವಿಗೆ ಧಾವಿಸಿತ್ತು. ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳು ನೆರೆ ಹಾವಳಿಗೆ ನಲುಗಿ ಹೋಗಿವೆ. ಆದರೆ, ಸಂತ್ರಸ್ತರು ಧೃತಿಗೆಡುವ ಅಗತ್ಯವಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನೆರವಿಗೆ ಧಾವಿಸುವ ವಿಶ್ವಾಸವಿದೆ. ಅದರ ಜತೆಗೆ ಶ್ರೀಮಠದ ಕಾರ್ಯಕರ್ತರು ಕೂಡ ಅಗತ್ಯ ಸೇವೆ ನೀಡುತ್ತಿದ್ದಾರೆ ಎಂದರು.

ಬೆಳಗಾವಿ, ಬಾಗಲಕೋಟೆ, ವಿಜಯಪುರ, ರಾಯಚೂರು, ಯಾದಗಿರಿ ಸೇರಿ ಅನೇಕ ಜಿಲ್ಲೆಗಳು ನೆರೆಗೆ ತುತ್ತಾಗಿವೆ. ಈಗಾಗಲೇ ಶಾಖಾಮಠಗಳ ಮೂಲಕ ಸಂತ್ರಸ್ತರಿಗೆ ಊಟ, ದಿನಸಿ ವಸ್ತುಗಳು, ಔಷಧ, ಬಟ್ಟೆ, ಹಾಸಿಗೆಗಳನ್ನು ನೀಡಲಾಗುತ್ತಿದೆ. ಚಾತುರ್ಮಾಸ್ಯ, ಆರಾಧನೆ ಹಾಗೂ ಏಕಕಾಲಕ್ಕೆ ನೆರೆ ಬಂದ ಕಾರಣ ಖುದ್ದು ಭೇಟಿ ನೀಡಲಾಗುತ್ತಿಲ್ಲ. ಸೆಪ್ಟೆಂಬರ್‌ನಲ್ಲಿ ಎಲ್ಲ ಕಡೆ ಸಂಚರಿಸಿ ಸಂತ್ರಸ್ತರ ಯೋಗಕ್ಷೇಮ ವಿಚಾರಿಸುವುದಾಗಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next