ಬೆಂಗಳೂರು: ರಾಜ್ಯದಲ್ಲಿ ಕಳೆದ ಏಳು ವರ್ಷಗಳಲ್ಲಿ 1,782 ಸರ್ಕಾರಿ ಶಾಲೆಗಳು ಮುಚ್ಚಿದ್ದು, 3,186 ಖಾಸಗಿ ಶಾಲೆಗಳಿಗೆ ಅನುಮತಿ ನೀಡಿದ ಪರಿಣಾಮ ಹತ್ತು ಲಕ್ಷ ವಿದ್ಯಾರ್ಥಿಗಳು ಸರ್ಕಾರಿ ಶಾಲೆ ತೊರೆದು ಖಾಸಗಿ ಶಾಲೆ ಸೇರಿದ್ದಾರೆ. ರಾಜ್ಯ ಸರ್ಕಾರ ನಡೆಸಿರುವ ಸಮೀಕ್ಷೆಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ಸರ್ಕಾರಿ ಶಾಲೆಗಳು, ಅನುದಾನಿತ ಹಾಗೂ ಖಾಸಗಿ ಶಾಲೆಗಳಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಸಂಖ್ಯೆ ಹಾಗೂ ವಿದ್ಯಾರ್ಥಿಗಳ ಪ್ರವೇಶಾತಿ ಕುರಿತು ಸಮೀಕ್ಷೆಯಲ್ಲಿ ಸರ್ಕಾರಿ ಶಾಲೆ ಬಿಡುವ ವಿದ್ಯಾರ್ಥಿಗಳ ಸಂಖ್ಯೆ ಪ್ರತಿವರ್ಷ ಹೆಚ್ಚಾಗುತ್ತಿರುವುದು ತಿಳಿದುಬಂದಿದೆ.
ರಾಜ್ಯದಲ್ಲಿ ಮಕ್ಕಳ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ಜಾರಿಗೆ ಬಂದ ಮೇಲೆ 2010-11ರಿಂದ 2016-17 ರ ವರೆಗೆ 1782 ಸರ್ಕಾರಿ ಶಾಲೆಗಳಿಗೆ ಬೀಗ ಹಾಕಲಾಗಿದ್ದು, ಅದಕ್ಕೆ ಪರ್ಯಾಯವಾಗಿ 3,186 ಖಾಸಗಿ ಶಾಲೆಗಳಿಗೆ ಅನುಮತಿ ನೀಡಲಾಗಿದೆ. ಖಾಸಗಿ ಶಾಲೆಗಳಿಗೆ ಹತ್ತು ಲಕ್ಷ ವಿದ್ಯಾರ್ಥಿಗಳು ಸೇರಿದ್ದು, ಆ ಎಲ್ಲ ವಿದ್ಯಾರ್ಥಿಗಳು ಸರ್ಕಾರಿ ಶಾಲೆ ಬಿಟ್ಟು ಖಾಸಗಿ ಶಾಲೆಗೆ ಸೇರಿದ್ದಾರೆ. 2010-11 ರಲ್ಲಿ 45,677 ರಷ್ಟಿದ್ದ ಸರ್ಕಾರಿ ಪ್ರಾಥಮಿಕ ಶಾಲೆಗಳ ಸಂಖ್ಯೆ 43,895ಕ್ಕೆ ಇಳಿಕೆಯಾಗಿದೆ. ಇದೇ ಅವಧಿಯಲ್ಲಿ 10,252 ರಷ್ಟಿದ್ದ ಖಾಸಗಿ ಶಾಲೆಗಳ ಸಂಖ್ಯೆ 13,438 ಕ್ಕೆ ಏರಿಕೆಯಾಗಿದೆ. ಸರ್ಕಾರಿ ಅನುದಾನಿತ ಶಾಲೆಗಳ ಹೆಚ್ಚಳವಾಗಿದ್ದು, ಅನುದಾನಿತ ಶಾಲೆಗಳಿಗೆ ವಿದ್ಯಾರ್ಥಿಗಳ ಪ್ರವೇಶಾತಿ ಕಡಿಮೆಯಾಗಿದೆ.
ಬೇಕಾ ಬಿಟ್ಟಿ ಅನುಮತಿ?: ಸರ್ಕಾರಿ ಶಾಲೆಗಳಿರುವ ಪ್ರದೇಶದ ಒಂದು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಖಾಸಗಿ ಶಾಲೆಗೆ ಅನುಮತಿ ನೀಡಬಾರದು ಎಂಬ ನಿಯಮ ಇದ್ದರೂ, ಸರ್ಕಾರ ಖಾಸಗಿ ಶಾಲೆಗಳಿಗೆ ಬೇಕಾ ಬಿಟ್ಟಿ ಅನುಮತಿ ನೀಡಿದ್ದು ಬೆಳಕಿಗೆ ಬಂದಿದೆ. ಈ ವರ್ಷವೂ ಕೂಡ ರಾಜ್ಯ ಸರ್ಕಾರ ಕನಿಷ್ಠ 14 ಸಾವಿರ ಸರ್ಕಾರಿ ಶಾಲೆಗಳನ್ನು ಮುಚ್ಚುವ ಸಿದ್ದತೆ ಮಾಡಿಕೊಳ್ಳುತ್ತಿದೆ. 1ರಿಂದ 10 ಮಕ್ಕಳಿರುವ ಸುಮಾರು 3 ಸಾವಿರ ಹಾಗೂ 10-30 ಮಕ್ಕಳಿರುವ 11 ಸಾವಿರ ಶಾಲೆಗಳನ್ನು ವಿಲೀನದ ಹೆಸರಿನಲ್ಲಿ ಸರ್ಕಾರ ಬೀಗ ಹಾಕುವ ಕಾರ್ಯಕ್ಕೆ ಮುಂದಾಗಿದೆ.
ವಿದ್ಯಾರ್ಥಿಗಳ ಪ್ರವೇಶ ಇಳಿಮುಖ: ಕಳೆದ ಏಳು ವರ್ಷಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಸುಮಾರು 8 ಲಕ್ಷ ವಿದ್ಯಾರ್ಥಿಗಳ ಪ್ರವೇಶ ಕಡಿಮೆಯಾಗಿದ್ದು, ಸರ್ಕಾರಿ ಅನುದಾನಿತ ಶಾಲೆಗಳಲ್ಲಿಯೂ 1ಲಕ್ಷ ವಿದ್ಯಾರ್ಥಿಗಳ ಪ್ರವೇಶ ಕಡಿಮೆಯಾಗಿದೆ. ಆದರೆ, ಖಾಸಗಿ ಶಾಲೆಗಳಲ್ಲಿ 10 ಲಕ್ಷ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರವೇಶ ಪಡೆದಿರುವುದು ಸರ್ಕಾರವೇ ನಡೆಸಿರುವ ಸಮೀಕ್ಷೆಯಲ್ಲಿ ಬಹಿರಂಗಗೊಂಡಿದೆ. ಸರ್ಕಾರಿ ಶಾಲೆಗಳಲ್ಲಿ ವಿಷಯವಾರು ಶಿಕ್ಷಕರ ಕೊರತೆ ಇರುವುದು, ಖಾಲಿ ಹುದ್ದೆಗಳನ್ನು ಭರ್ತಿ ಮಾಡದೇ ಇರುವುದು ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖವಾಗಲು ಕಾರಣ ಎಂದು ಹೇಳಲಾಗುತ್ತಿದೆ. ಶಿಕ್ಷಕರ ನೇಮಕದ ವಿಷಯದಲ್ಲಿಯೂ ವ್ಯತ್ಯಾಸವಾಗಿದ್ದು, 2010- 11 ರಲ್ಲಿ 2,02,483 ಹುದ್ದೆಗಳು ಸೃಷ್ಠಿಸಲಾಗಿ ದ್ದು, 1,89,451 ಶಿಕ್ಷಕರ ಹುದ್ದೆ ಭರ್ತಿ ಮಾಡಲಾಗಿದೆ. ಆಶ್ಚರ್ಯಕರ ಸಂಗತಿ ಎಂದರೆ, 2016-17 ಕ್ಕೆ ಸರ್ಕಾರ ಸೃಷ್ಠಿಸಿದ್ದ ಹುದ್ದೆಗಳನ್ನೇ ಕಡಿತ ಮಾಡಿದ್ದು, 7765 ಹುದ್ದೆಗಳನ್ನು ಸದ್ದಿದಲ್ಲದೇ ರದ್ದುಗೊಳಿಸಲಾಗಿದೆ.
ದುಸ್ಥಿತಿಯಲ್ಲಿ ಕಟ್ಟಡಗಳು: ರಾಜ್ಯದಲ್ಲಿರುವ 2 ಲಕ್ಷ 11 ಸಾವಿರ 98 ಪ್ರಾಥಮಿಕ ಶಾಲಾ ಕಟ್ಟಡಗಳಲ್ಲಿ ಸುಮಾರು 73 ಸಾವಿರದ 129 ಶಾಲೆಗಳು ದುಸ್ಥಿತಿಯಲ್ಲಿದ್ದು, 1 ಲಕ್ಷ 37 ಸಾವಿರ ಶಾಲೆಗಳು ಮಾತ್ರ ಸುಸ್ಥಿತಿಯಲ್ಲಿವೆ ಎಂಬುದು ಸಮೀಕ್ಷೆಯಲ್ಲಿ ತಿಳಿದು ಬಂದಿದೆ.
ಸರ್ಕಾರಿ ಶಾಲೆಯ 1ಕಿ.ಮೀ. ವ್ಯಾಪ್ತಿಯಲ್ಲಿ ಖಾಸಗಿ ಶಾಲೆಗೆ ಅವಕಾಶ ನೀಡಬಾರದು. ಈ ಬಗ್ಗೆ ಸರ್ಕಾರ ವರದಿ ಪಡೆಯಲಿ.
● ಎಸ್.ಜಿ. ಸಿದ್ದರಾಮಯ್ಯ, ಸಾಹಿತಿ
ಸರ್ಕಾರಿ ಶಾಲೆಗಳಲ್ಲಿ ವಿಷಯವಾರು ಶಿಕ್ಷಕರ ನೇಮಕ ಮಾಡದೇ ಇರುವುದರಿಂದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿದೆ. ಹೀಗಾಗಿ ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ.
● ಡಾ. ನಿರಂಜನಾರಾಧ್ಯ, ಶಿಕ್ಷಣ ತಜ್ಞ
ಶಂಕರ ಪಾಗೋಜಿ