ಸೇಂಟ್ ಪೀಟರ್ಬರ್ಗ್: ರಷ್ಯಾದ ಸೇಂಟ್ ಪೀಟರ್ ಬರ್ಗ್‌ನ ಮೆಟ್ರೋ ರೈಲು ಸುರಂಗವೊಂದರಲ್ಲಿ ಸಂಭವಿಸಿದ ಸ್ಫೋಟದಲ್ಲಿ 10 ಪ್ರಯಾಣಿಕರು ಮೃತಪಟ್ಟು, 50 ಮಂದಿ ಗಾಯಗೊಂಡ ಘಟನೆ ಸೋಮವಾರ ನಡೆದಿದೆ. ಸೆನ್ನಾಯ ಪ್ಲೋಷಾಡ್ ಮತ್ತು ಟೆಕ್ನಾಲಜಿಚೆಸ್ಕೈ ಇನ್ಸ್ ಟಿಟ್ಯೂಟ್ ನಿಲ್ದಾಣಗಳ ನಡುವೆ ಸ್ಫೋಟ ಸಂಭವಿಸಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ರಷ್ಯಾದ ರಾಷ್ಟ್ರೀಯ ಉಗ್ರ ನಿಗ್ರಹ ಸಮಿತಿ, “ರೈಲು ಈ ಎರಡು ನಿಲ್ದಾಣಗಳ ನಡುವೆ ಸಂಚರಿಸುವಾಗ ಗುರುತು ಹಿಡಿಯಲಾಗದಂತಹ ಒಂದು ಸ್ಫೋಟಕ ಸಾಧನ ರೈಲಿನೊಳಗೆ ಬಂದಿರುವ ಸಾಧ್ಯತೆ ಇದೆ,’ ಎಂದು ಅನುಮಾನ ವ್ಯಕ್ತಪಡಿಸಿದೆ.
ಸಂತ್ರಸ್ತರ ಕುಟುಂಬಗಳಿಗೆ ಸಾಂತ್ವನ ಹೇಳಿರುವ ಅಧ್ಯಕ್ಷ ವ್ಲಾದಿಮಿರ್ ಪುಟಿನ್, “ಇದು ಭಯೋತ್ಪಾದಕ ದಾಳಿಯೋ ಅಥವಾ ಬೇರೆ ಕಾರಣಗಳಿಂದ ಸಂಭವಿಸಿರುವ ಸ್ಫೋಟವೇ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುವುದು,’ ಎಂದಿದ್ದಾರೆ.
ಘಟನೆ ಹಿನ್ನೆಲೆಯಲ್ಲಿ ರಷ್ಯಾದ ಉತ್ತರ ಭಾಗದ ಹಲವು ನಿಲ್ದಾಣಗಳನ್ನು ಮುಚ್ಚಲಾಗಿದೆ. ಸ್ಫೋಟ ಸಂಭವಿಸುತ್ತಿದ್ದಂತೆ ರೈಲಿನ ಬಾಗಿಲ ಬಳಿ ಬಂದು ನಿಂತ ಪ್ರಯಾಣಿಕರು ಸಹಾಯಕ್ಕಾಗಿ ಮೊರೆಯಿಡುವ ಜತೆಗೆ ಆ್ಯಂಬುಲೆನ್ಸ್‌ಗೆ ಕರೆ ಮಾಡುವುದು ಕಂಡುಬಂದಿದೆ. ಇತ್ತ ರಷ್ಯಾದ ನಾಗರಿಕರು ಘಟನೆಗೆ ಸಂಬಂಧಿಸಿದ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದು, ಮೃತರ ದೇಹಗಳು ಹಾಗೂ ಗಾಯಾಳುಗಳು ನೆಲದ ಮೇಲೆ ಬಿದ್ದಿರುವ ಚಿತ್ರ ಹಾಗೂ ವಿಡಿಯೋಗಳು ಅಂತರ್ಜಾಲದಲ್ಲಿ ಹರಿದಾಡುತ್ತಿವೆ.
ನಿಲ್ದಾಣದಲ್ಲಿ ಸ್ಫೋಟಕ ಪತ್ತೆ: ಮೆಟ್ರೋ ಸುರಂಗದಲ್ಲಿ ಸ್ಫೋಟ ಸಂಭವಿಸಿದ ಕೆಲ ಹೊತ್ತಿನಲ್ಲೇ ಸೇಂಟ್ ಪೀಟರ್ ಬರ್ಗ್‌ನ ವೋಸ್ಟಾನಿಯಾ ಸ್ಕ್ವೇರ್ ಮೆಟ್ರೋ ನಿಲ್ದಾಣದಲ್ಲಿ ಸ್ಫೋಟಕ ಪತ್ತೆಯಾಗಿದೆ. ಭಯೋತ್ಪಾದಕ ದಾಳಿ ನಡೆದಿರುವ ಅನುಮಾನಗಳನ್ನು ಈ ಬೆಳವಣಿಗೆ ಮತ್ತಷ್ಟು ಬಲಪಡಿಸಿದೆ. ರಷ್ಯಾದ ಉಗ್ರ ನಿಗ್ರಹ ಸಮಿತಿ ಈ ವಿಷಯವನ್ನು ದೃಢಪಡಿಸಿದ್ದು, “ಮೆಟ್ರೋ ನಿಲ್ದಾಣದಲ್ಲಿ ದೊರೆತ ಸ್ಫೋಟಕ ಸಾಧನವನ್ನು ನಿಷ್ಕ್ರಿಯಗೊಳಿಸಲಾಗಿದೆ,’ ಎಂದು ತಿಳಿಸಿದೆ.
ಪ್ರಧಾನಿ ಮೋದಿ ಸಂತಾಪ: ರಷ್ಯಾದ ಸ್ಫೋಟದಲ್ಲಿ 10 ಮಂದಿ ಮೃತಪಟ್ಟಿರುವುದಕ್ಕೆ ಪ್ರಧಾನಿ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ. ಘಟನೆಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಟ್ವಿಟರ್ ಮೂಲಕ ಮೋದಿ ಸಾಂತ್ವನ ಹೇಳಿದ್ದಾರೆ.
ದೆಹಲಿಯಲ್ಲಿ ಬಿಗಿ ಭದ್ರತೆ: ಸೇಂಟ್ ಪೀಟರ್ಬರ್ಗ್ ಸ್ಫೋಟದಿಂದ ಎಚ್ಚೆತ್ತುಕೊಂಡಿರುವ ಸರಕಾರ, ರಾಜಧಾನಿ ದೆಹಲಿ ನಗರದ ಎಲ್ಲ ಮೆಟ್ರೋ ನಿಲ್ದಾಣಗಳಿಗೆ ಬಿಗಿ ಭದ್ರತೆ ಕಲ್ಪಿಸುವ ಮೂಲಕ ಕಟ್ಟೆಚ್ಚರ ವಹಿಸಿದೆ. ನಿತ್ಯ 26 ಲಕ್ಷಕ್ಕೂ ಹೆಚ್ಚು ಮಂದಿ ಸಂಚರಿಸುವ ಬೃಹತ್ ರೈಲು ಜಾಲದ 150 ನಿಲ್ದಾಣಗಳ ವ್ಯಾಪ್ತಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಇದರೊಂದಿಗೆ ನಿಲ್ದಾಣ ಪ್ರವೇಶಿಸುವ ಎಲ್ಲ ಪ್ರಯಾಣಿಕರ ಸಂಪೂರ್ಣ ತಪಾಸಣೆ ನಡೆಸುವಂತೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆ ನಿಲ್ದಾಣಗಳ ಭದ್ರತಾ ಸಿಬ್ಬಂದಿಗೆ ಸೂಚಿಸಿದೆ. ಈ ನಿಟ್ಟಿನಲ್ಲಿ 4,500 ಸಿಐಎಸ್‌ಎಫ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.