ಬೆಂಗಳೂರು: ಇಂದಿನಿಂದ 10 ದಿನಗಳ ಕಾಲ ರಾಜ್ಯ ವಿಧಾನ ಮಂಡಲದ ಜಂಟಿ ಅಧಿವೇಶನ ಆರಂಭವಾಗಲಿದೆ. ಇಂದು (ಸೋಮವಾರ) ಬೆಳಿಗ್ಗೆ ರಾಜ್ಯಪಾಲ ಥಾವರ್ ಚಂದ್ ಗೆಲ್ಹೋತ್ ಅವರು ಎರಡೂ ಸದನಗಳನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ನಂತರ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಾಗುವುದು.
ಮಂಗಳವಾರದಿಂದ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ಚರ್ಚೆ ಆರಂಭವಾಗಲಿದ್ದು, ಅದರ ಜೊತೆಗೆ ರಾಜ್ಯದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಬೆಳವಣಿಗೆಗಳು ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವಿನ ವಾಕ್ಸಮರಕ್ಕೆ ವೇದಿಕೆಯಾಗುವ ಸಾಧ್ಯತೆ ಇದೆ.
ಪ್ರಮುಖವಾಗಿ ಶಾಲಾ ಕಾಲೇಜುಗಳಲ್ಲಿ ಮುಸ್ಲಿàಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವುದು ಹಾಗೂ ಹಿಂದು ವಿದ್ಯಾರ್ಥಿಗಳು ಕೇಸರಿ ಶಾಲ್ ಧರಿಸುವುದು ಕುರಿತಂತೆ ನಡೆಯುತ್ತಿರುವ ಸಂಘರ್ಷ ಎರಡೂ ಸದನಗಳಲ್ಲಿ ದೊಡ್ಡ ಸದ್ದು ಮಾಡುವ ಸಾಧ್ಯತೆ ಇದೆ. ಪ್ರತಿಪಕ್ಷ ಕಾಂಗ್ರೆಸ್ ಬಹಿರಂಗವಾಗಿಯೇ ಹಿಜಾಬ್ ಧಾರಣೆಯ ಪರವಾಗಿ ವಕಾಲತ್ತು ವಹಿಸುತ್ತಿದ್ದು, ಸದನದಲ್ಲಿಯೂ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ನಡೆಸಲು ತೀರ್ಮಾನಿಸಿದೆ.
ಹಿಜಾಬ್ ವಿಚಾರದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ, ಭಗವಾ ಧ್ವಜವೇ ಮುಂದಿನ ದಿನಗಳಲ್ಲಿ ರಾಷ್ಟ್ರಧ್ವಜವಾಗಬೇಕೆಂಬ ಹೇಳಿಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಇದೇ ವಿಷಯವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಈಶ್ವರಪ್ಪ ವಿರುದ್ಧ ಸದನದಲ್ಲಿ ಹೋರಾಟ ನಡೆಸಿ ಅವರ ರಾಜೀನಾಮೆ ಕೇಳುವ ಸಾಧ್ಯತೆ ಇದೆ. ಇನ್ನು ಬಿಟ್ ಕಾಯಿನ್ ವಿಚಾರ, 40% ಲಂಚದ ಆರೋಪ, ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಿರುವ ಜಿಎಸ್‌ಟಿ ಪರಿಹಾರ, ಮೇಕೆದಾಟು, ಮಹದಾಯಿ, ಕೃಷ್ಣಾ ನದಿಗಳ ವಿವಾದ ಸೇರಿದಂತೆ ಹಲವು ವಿಚಾರಗಳನ್ನು ಕಾಂಗ್ರೆಸ್ ಸದನದಲ್ಲಿ ಪ್ರಸ್ತಾಪಿಸಲು ಸಿದ್ದತೆ ಮಾಡಿಕೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಹಿಜಾಬ್ ವಿಚಾರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿರುವುದರಿಂದ ಆಡಳಿತ ಪಕ್ಷ ಬಿಜೆಪಿ ಕೂಡ ತನ್ನ ನಿಲುವನ್ನು ಸಮರ್ಥಿಸಿಕೊಳ್ಳಲು ಸಿದ್ದವಾಗಿದೆ ಎನ್ನಲಾಗಿದ್ದು, ಸರ್ಕಾರ ಈಗಾಗಲೇ ಹೈಕೋರ್ಟ್ ನೀಡಿರುವ ಮಧ್ಯಂತರ ಆದೇಶ ಪಾಲನೆ ಮಾಡುತ್ತಿದ್ದು, ಅದರಂತೆ ಎಲ್ಲರೂ ನಡೆಯಬೇಕು ಎಂದು ತನ್ನ ನಡೆಯನ್ನು ಸಮರ್ಥಿಸಿಕೊಳ್ಳಲು ಮುಂದಾಗಿದೆ. ಆದರೂ. ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿರುವುದರಿಂದ ಈ ಸಂದರ್ಭದಲ್ಲಿ ಸದನದಲ್ಲಿ ಚರ್ಚಿಸುವುದು ಸರಿಯಲ್ಲ ಎಂಬ ವಾದ ಮುಂದಿಟ್ಟು ಸರ್ಕಾರ ಚರ್ಚೆಗೆ ಅವಕಾಶ ನಿರಾಕರಿಸುವ ಬಗ್ಗೆಯೂ ಸರ್ಕಾರ ಚಿಂತನೆ ನಡೆಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಇದರ ಜೊತೆಗೆ ಸರ್ಕಾರ 2011ರ ಕೆಪಿಎಸ್‌ಸಿ 3 62 ಹುದ್ದೆಗಳ ನೇಮಕವನ್ನು ಸಕ್ರಮಗೊಳಿಸಲು ವಿಶೇಷ ವಿಧೇಯಕ ಮಂಡನೆ ಮಾಡಲು ನಿರ್ಧರಿಸಿದ್ದು, ಈ ಬಗ್ಗೆಯೂ ಸಾಕಷ್ಟು ಚರ್ಚೆ ನಡೆಯುವ ಸಾಧ್ಯತೆ ಇದೆ.
ಪರಿಷತ್ತಿನಲ್ಲಿ ಮತಾಂತರ ಸದ್ದು ?
ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಕೋಲಾಹಲ ಸೃಷ್ಟಿಸಿದ್ದ ಮತಾಂತರ ನಿಷೇಧ ಕಾಯ್ದೆಯನ್ನು ರಾಜ್ಯ ಸರ್ಕಾರ ಈ ಅಧಿವೇಶನದಲ್ಲಿ ವಿಧಾನ ಪರಿಷತ್ತಿನಲ್ಲಿ ಮಂಡಿಸಿ ಅಂಗೀಕಾರ ಪಡೆಯಲು ಮುಂದಾಗಿದೆ. ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಈ ವಿಧೇಯಕವನ್ನು ಬಹಿರಂಗವಾಗಿಯೇ ವಿರೋಧಿಸುತ್ತಿವೆ. ಪ್ರಸ್ತುತ ವಿಧಾನ ಪರಿಷತ್ತಿನಲ್ಲಿ ಬಿಜೆಪಿಗೆ ಬಹುಮತಕ್ಕೆ ಒಂದು ಸ್ಥಾನ ಮಾತ್ರ ಕೊರತೆ ಇದೆ. ಇತ್ತೀಚೆಗೆ ಚುನಾಯಿತರಾಗಿರುವ ಪಕ್ಷೇತರ ಶಾಸಕ ಲಖನ್ ಜಾರಕಿಹೊಳಿ ಬೆಂಬಲ ಪಡೆದು ಮತಾಂತರ ನಿಷೇಧ ವಿಧೇಯಕ ಅಂಗೀಕಾರ ಮಾಡಿಕೊಳ್ಳಲು ಬಿಜೆಪಿ ನಿರ್ಧರಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.