Advertisement

10 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ದಿ

01:38 PM Apr 13, 2022 | Team Udayavani |

ಹೊನ್ನಾಳಿ: ನಗರೋತ್ಥಾನ ಯೋಜನೆಯಡಿ 10 ಕೋಟಿ ರೂ. ವೆಚ್ಚದಲ್ಲಿ ದುರ್ಗಿಗುಡಿ ಬಡಾವಣೆಯ ಕೆಲವು ರಸ್ತೆಗಳು, ಮರಳ್ಳೋಣಿ- ಹಿರೇಕಲ್ಮಠ ರಸ್ತೆಗಳನ್ನು ಕಾಂಕ್ರಿಟ್‌ ರಸ್ತೆಗಳನ್ನಾಗಿಸಲಾಗುತ್ತಿದ್ದು, ಟೆಂಡರ್‌ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದರು.

Advertisement

ಸೋಮವಾರ ಎಪಿಎಂಸಿ ಸರ್ಕಲ್‌ನಿಂದ ಕೋರ್ಟ್‌ ಹಾಗೂ ಸಾರ್ವಜನಿಕ ಆಸ್ಪತ್ರೆವರೆಗೆ ಹಾದು ಹೋಗಿರುವ ತುಂಗಾ ಚಾನೆಲ್‌ ಮೇಲೆ ಸ್ಲ್ಯಾಬ್‌ ನಿರ್ಮಿಸುವ ಸಂಬಂಧ ಪರಿಶೀಲನೆ ನಡೆಸಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದ ಸಂದರ್ಭದಲ್ಲಿ ಅವರು ಮಾತನಾಡಿದರು.

ಈ ರಸ್ತೆಯಲ್ಲಿ ಸಾವಿರಾರು ಜನ ಸಾರ್ವಜನಿಕ ಆಸ್ಪತ್ರೆಗೆ, ಕೋರ್ಟ್‌ಗಳಿಗೆ ಹಾಗೂ ಕಾಲೇಜುಗಳಿಗೆ ಓಡಾಡುತ್ತಾರೆ. ಹೀಗಾಗಿ ಇಲ್ಲಿ ವಾಕಿಂಗ್‌ ಪಾಥ್‌ ನಿರ್ಮಿಸುವ ಯೋಜನೆಯೂ ಇದೆ ಎಂದರು.

ವಾಸವಿ ಮೆಡಿಕಲ್‌ ಶಾಪ್‌ ನ ಮಾಲೀಕರ ಮನೆಯ ಹಿಂಭಾಗದಿಂದ ವಡ್ಡಿನಕೆರೆ ಹಳ್ಳದವರೆಗೆ ಬರುವ ಮುಖ್ಯ ಕಾಲುವೆ ನಿರ್ಮಾಣಕ್ಕೆ 2.50 ಕೋಟಿ ರೂ. ಮಂಜೂರಾತಿ ಹಂತದಲ್ಲಿದೆ. ನಗರದ ಕೆನರಾ ಬ್ಯಾಂಕ್‌ನಿಂದ ತುಂಗಭದ್ರಾ ಬಡಾವಣೆವರೆಗೆ ಮತ್ತು ದುರ್ಗಾಂಬಿಕಾ ಸರ್ಕಲ್‌ನಿಂದ ಎ.ಕೆ. ಕಾಲೋನಿಯವರೆಗೂ ಅಲಂಕೃತ ಬೀದಿದೀಪಗಳ ಅಳವಡಿಕೆಗೆ 1 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ 5 ಲಕ್ಷ ಲೀಟರ್‌ ಸಾಮರ್ಥ್ಯದ 4 ಓವರ್‌ಹೆಡ್‌ ಟ್ಯಾಂಕ್‌ಗಳನ್ನು ತುರ್ತಾಗಿ ನಿರ್ಮಾಣ ಮಾಡುವಂತೆ ಎಂಜಿನಿಯರ್‌ ಗೆ ಸೂಚಿಸಲಾಗಿದೆ. ನೀರು ಸರಬರಾಜು ಮಾಡುವ ಸಂಬಂಧ 50 ಎಚ್‌ಪಿಯಿಂದ 120 ಎಚ್‌ಪಿವರೆಗೆ ಮೋಟಾರ್‌ಗಳನ್ನು ಮೇಲ್ದರ್ಜೆಗೇರಿಸಿ ಜಾಕ್‌ವೆಲ್‌ ನಲ್ಲಿರುವ 30 ಎಚ್‌ಪಿ ಪಂಪ್‌ಸೆಟ್‌ನ್ನು 60 ಎಚ್‌ಪಿ ಗೆ ಬದಲಾಯಿಸಲಾಗುವುದು ಎಂದು ತಿಳಿಸಿದರು.

29ಎಕರೆಯಲ್ಲಿ 1200 ನಿವೇಶನ

Advertisement

ಪಟ್ಟಣ ಸಮೀಪ ಈಗಾಗಲೇ 29 ಎಕರೆ ಜಮೀನು ಮಂಜೂರು ಮಾಡಿಸಿದ್ದು, ಅಲ್ಲಿ ಹೊನ್ನಾಳಿಯ ನಿವೇಶನ ರಹಿತರಿಗೆ ನಿವೇಶನ ಕೊಡಲಾಗುವುದು. 29 ಎಕರೆಯಲ್ಲಿ ಸುಮಾರು 1200 ನಿವೇಶನಗಳನ್ನು ಮಾಡಿ ವಿತರಿಸಲಾಗುವುದು ಎಂದು ರೇಣುಕಾಚಾರ್ಯ ತಿಳಿಸಿದರು.

ಹನುಮಸಾಗರ ಗ್ರಾಮದ ಸೇತುವೆಯಿಂದ ನಗರದ ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ ಚತುಷ್ಪಥ ನಿರ್ಮಾಣ ಸಂಬಂಧ ಈಗಾಗಲೇ ಸರ್ವೇ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಈ ಭಾಗದಲ್ಲಿ ಬರುವ ಪ್ರಜ್ಞಾವಂತ ವರ್ತಕರು ಸ್ವಇಚ್ಛೆಯಿಂದ ಜಾಗ ಬಿಟ್ಟುಕೊಡಬೇಕು. ಇದಕ್ಕೆ ಸೂಕ್ತ ಪರಿಹಾರ ನೀಡಲಾಗುವುದು. ಚತುಷ್ಪಥ ನಿರ್ಮಾಣದ ಜೊತೆಗೆ ಅಲಂಕೃತ ವಿದ್ಯುದ್ದೀಪಗಳನ್ನು ಅಳವಡಿಸಲು ಈಗಾಗಲೇ ಯೋಜನೆ ತಯಾರಿಸಲಾಗಿದೆ ಎಂದರು.

ಪುರಸಭೆ ಅಧ್ಯಕ್ಷ ಬಾಬು ಹೋಬಳದಾರ್‌, ಸದಸ್ಯರಾದ ರಂಗನಾಥ್‌, ಕೆ.ವಿ. ಶ್ರೀಧರ್‌, ಮುಖಂಡರಾದ ಕೋಳಿ ಸತೀಶ್‌, ಮಂಜುನಾಥ್‌, ಇಂಚರ ನವೀನ್‌, ಮಹೇಶ್‌ ಹುಡೇದ್‌, ರಾಜು ಹಿರೇಮಠ, ಚನ್ನಪ್ಪ ವಡ್ಡಿ, ಪೇಟೆ ಪ್ರಶಾಂತ್‌, ಕುಮಾರ್‌, ಮುಖ್ಯಾಧಿಕಾರಿ ಎಸ್‌.ಆರ್‌. ವೀರಭದ್ರಯ್ಯ, ಆರೋಗ್ಯ ನಿರೀಕ್ಷಕ ಹರ್ಷವರ್ಧನ್‌ ಇದ್ದರು.

ಹೊನ್ನಾಳಿ ಎಪಿಎಂಸಿಯಿಂದ ತುಂಗಭದ್ರಾ ನದಿಯವರೆಗೆ ರಸ್ತೆಯ ಎರಡೂ ಬದಿಯಲ್ಲಿ ತೆರವುಗೊಳಿಸಿದ್ದ ಸಸಿಗಳಿಗೆ ಬದಲಾಗಿ ಸುಂದರವಾದ ಸಸಿಗಳನ್ನು ನೆಡಲು ಕ್ರಮ ಕೈಗೊಳ್ಳಲಾಗುವುದು. 4 ಕಿಮೀ ಉದ್ದಕ್ಕೆ ಹೊಸದಾಗಿ ಪೈಪ್‌ಲೈನ್‌ ಅಳವಡಿಸಲಾಗುವುದು. ಹಿರೇಕಲ್ಮಠದ ಬಳಿ 5 ಲಕ್ಷ ಲೀಟರ್‌ ಸಾಮರ್ಥ್ಯದ ಜಲಸಂಗ್ರಹಾಗಾರ ನಿರ್ಮಿಸಲಾಗುತ್ತಿದೆ. ಕುಡಿಯುವ ನೀರಿನ ಕಾಮಗಾರಿಗೆ ವೇಗ ನೀಡುವಂತೆ ಎಂಜಿನಿಯರ್‌ಗಳಿಗೆ ಸೂಚಿಸಲಾಗಿದೆ. ಎಂ.ಪಿ. ರೇಣುಕಾಚಾರ್ಯ, ಸಿಎಂ ರಾಜಕೀಯ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next