Advertisement

ಬಾಳ್ಕಟ್ಟು ಅಪಾಯಕಾರಿ ತಿರುವು, ಶಿಥಿಲ ಸೇತುವೆಗೆ ಸಿಕ್ಕಿಲ್ಲ ಮುಕ್ತಿ

11:00 PM Oct 17, 2019 | Sriram |

ಸಿದ್ದಾಪುರ: ಶಿವಮೊಗ್ಗ ಜಿಲ್ಲೆಯನ್ನು ಉಡುಪಿ ಜಿಲ್ಲೆಗೆ ಬೆಸೆಯುವ ಪ್ರಮುಖ ಹೆದ್ದಾರಿಯಾಗಿರುವ ಕುಂದಾಪುರ- ಶಿವಮೊಗ್ಗ ರಾಜ್ಯ ಹೆದ್ದಾರಿಯ ಅಭಿವೃದ್ಧಿಗಾಗಿ ಸಿಆರ್‌ಎಫ್‌ ಫಂಡ್‌ನ‌ 10 ಕೋಟಿ ರೂ.ವೆಚ್ಚದಲ್ಲಿ ಕಾಮಗಾರಿ ಮುಗಿದಿದೆ. ಆದರೆ ಈ ಕಾಮಗಾರಿಯಲ್ಲಿ ಅಂಪಾರು- ಸಿದ್ದಾಪುರ ಮಧ್ಯೆ ಇರುವ ಬಾಳ್ಕಟ್ಟು ಬಳಿ ಅಪಾಯಕಾರಿ ತಿರುವು ಹಾಗೂ ಶಿಥಿಲಗೊಂಡ ಸೇತುವೆಗೆ ಮಾತ್ರ ಮುಕ್ತಿ ದೊರಕಿಲ್ಲ.

Advertisement

ಕುಂದಾಪುರ- ಶಿವಮೊಗ್ಗ ರಾಜ್ಯ ಹೆದ್ದಾರಿಯಾಗಿದ್ದರೂ ಹೆದ್ದಾರಿಯ ಅಭಿವೃದ್ಧಿಗಾಗಿ ರಾಷ್ಟ್ರೀಯ ಹೆದ್ದಾರಿ ಉಪ ವಿಭಾಗದವರಿಗೆ 2017-18ನೇ ಸಾಲಿನಲ್ಲಿ ರಸ್ತೆ ಯನ್ನು ಹಸ್ತಾಂತರಿಸಲಾಗಿದೆ. ಕುಂದಾಪುರ ವಡೇರಹೋಬಳಿಯಿಂದ ಉಡುಪಿ ಹಾಗೂ ಶಿವಮೊಗ್ಗ ಜಿಲ್ಲೆಯ ಗಡಿ ಭಾಗದವರೆಗೆ 45ಕಿ. ಮೀ.ಉದ್ದದ ರಸ್ತೆ ಕಾಮಗಾರಿಗೆ ಸಿಆರ್‌ಎಫ್‌ ಫಂಡ್‌ನ‌ಲ್ಲಿ ಹಣ ಮಂಜೂರಾಗಿತ್ತು.

ಈ ರಸ್ತೆ ಕೇವಲ ಎರಡು ಜಿಲ್ಲೆಯ ಮಧ್ಯೆ ಸಂಪರ್ಕ ಸೇತು ಮಾತ್ರವಾಗಿರದೆ ಬಳ್ಳಾರಿ-ದಾವಣಗೆರೆ ಮತ್ತಿತರ ಜಿಲ್ಲೆಯನ್ನು ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಪ್ರಮುಖ್ಯ ಹೆದ್ದಾರಿ ಕೂಡ ಆಗಿದೆ. ನಿತ್ಯ ಸಾವಿರಾರು ವಾಹನಗಳ ಸಂಚಾರ ಇದ್ದರೂ ಈ ತಿರುವುವನ್ನು ನೇರವಾಗಿಸುವ ಪ್ರಯತ್ನಕ್ಕೆ ಇಲಾಖೆ ಮುಂದಾಗಿಲ್ಲ. ಪರಿಣಾಮ ದಿನನಿತ್ಯ ಅಪಘಾತಗಳು ನಡೆಯುತ್ತಿವೆ ಎಂದು ಸ್ಥಳೀಯರು ದೂರಿದ್ದಾರೆ.

ಅಪಾಯಕಾರಿ ತಿರುವು
ಇದು ರಾಜ್ಯ ಹೆದ್ದಾರಿಯಾಗಿರುವುದರಿಂದ ವಾಹನ ದಟ್ಟಣೆ ಹೆಚ್ಚಾಗಿರುತ್ತದೆ. ಬಾಳ್ಕಟ್ಟು ತಿರುವು ಅಪಾಯಕಾರಿ ಯಾಗಿರುವುದರಿಂದ ಆಗಾಗ ಅಪಘಾತಗಳು ನಡೆಯುತ್ತಿವೆ. ಇಲಾಖೆ ರಸ್ತೆ ತಿರುವುವನ್ನು ಸರಿಪಡಿಸಿದಲ್ಲಿ ನಡೆಯುವ ಅಪಘಾತಗಳನ್ನು ತಪ್ಪಿಸಬಹುದು. ಈ ಬಗ್ಗೆ ಇಲಾಖೆ ಹಾಗೂ ಜನಪ್ರತಿನಿಧಿಗಳು ಗಮನಹರಿಸಬೇಕು.
-ಉದಯಕುಮಾರ ಶೆಟ್ಟಿ ಮೂಡುಬಗೆ,
ಸದಸ್ಯರು ಗ್ರಾ.ಪಂ. ಅಂಪಾರು 

ಹಣ ಮಂಜೂರಾಗಿಲ್ಲ
ರಾಷ್ಟ್ರೀಯ ಹೆದ್ದಾರಿ ಉಪ ವಿಭಾಗದವರಿಗೆ 2017-18ನೇ ಸಾಲಿನಲ್ಲಿ ಕಾಮಗಾರಿಗಾಗಿ ರಸ್ತೆಯನ್ನು ಹಸ್ತಾಂತರಿಸಲಾಗಿದೆ. ಅವರು ಕಾಮಗಾರಿ ಮುಗಿಸಿ, ಎರಡು ವರ್ಷ ಮೆಂಟೆನೆನ್ಸ್‌ ಮಾಡಿದ ಮೇಲೆ ಲೋಕೋಪಯೋಗಿ ಇಲಾಖೆಗೆ ಹಸ್ತಾಂತರಿಸುತ್ತಾರೆ. ಈ ಸ್ಥಳವು ಬ್ಲಾಕ್‌ ಸ್ಪಾಟ್‌ ಆಗಿರುವುದರಿಂದ ರಸ್ತೆ ನೇರವಾಗಿಸುವ ಬಗ್ಗೆ ಸರಕಾರಕ್ಕೆ ಪತ್ರ ಬರೆದಿದ್ದೇವೆ. ಸರಕಾರದಿಂದ ಹಣ ಮಂಜೂರಾಗಿಲ್ಲ. ಹಣ ಮಂಜೂರಾದ ಮೇಲೆ ಕಾಮಗಾರಿ ಆರಂಭಿಸುತ್ತೇವೆ.
-ದುರ್ಗಾದಾಸ್‌,
ಎಇಇ ಲೋಕೋಪಯೋಗಿ ಇಲಾಖೆ ಉಡುಪಿ ಜಿಲ್ಲೆ ಉಪ ವಿಭಾಗ

Advertisement
Advertisement

Udayavani is now on Telegram. Click here to join our channel and stay updated with the latest news.

Next