ಕುಷ್ಟಗಿ: ಕೊಪ್ಪಳ ಜಿಲ್ಲೆ ಬೂದಗುಂಪ್ ಕ್ರಾಸ್ ಬಳಿ 50 ಕೋಟಿ ರೂ. ವೆಚ್ಚದಲ್ಲಿ ಪ್ಲೆಕ್ಸಿಪ್ಯಾಕ್ ಡೈರಿ ನಿರ್ಮಾಣವಾಗಿದೆ. ಇದ್ಕಕೆ ಬ್ಯಾಂಕ್ ಸಾಲದ 10 ಕೋಟಿ ರೂ. ಬಡ್ಡಿ ಕಂತು ಕಟ್ಟುತ್ತಿರುವ ಹಿನ್ನೆಲೆಯಲ್ಲಿ ಒಕ್ಕೂಟಕ್ಕೆ ಆರ್ಥಿಕ ಹೊರೆಯಾಗುತ್ತಿದೆ. ಕಳೆದ ಬಜೆಟ್‌ನಲ್ಲಿ ಪ್ರತ್ಯೇಕವಾಗಿ ಹಾಸನ ಅನುದಾನ ಘೋಷಣೆ ಮಾಡಿದಂತೆ ನಮ್ಮ ಒಕ್ಕೂಟಕ್ಕೂ 10 ಕೋಟಿ ರೂ. ಅನುದಾನ ನೀಡಬೇಕೆಂದು ರಾಯಚೂರು, ಬಳ್ಳಾರಿ, ಕೊಪ್ಪಳ ಹಾಲು ಒಕ್ಕೂಟದ ಅಧ್ಯಕ್ಷ, ಹಗರಿಬೊಮ್ಮನಹಳ್ಳಿ ಶಾಸಕ ಎಸ್. ಭೀಮಾನಾಯ್ಕ ಒತ್ತಾಯಿಸಿದರು.
ಶನಿವಾರ ಇಲ್ಲಿನ ಶ್ರೀ ಬುತ್ತಿ ಬಸವೇಶ್ವರ ಸಭಾಮಂಟಪದಲ್ಲಿ ರಾಯಚೂರು, ಬಳ್ಳಾರಿ ಕೊಪ್ಪಳ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ನೇತೃತ್ವದಲ್ಲಿ ಎನ್‌ಡಿಪಿ-1, ವಿಬಿಎಂಎಸ್ ಯೋಜನೆ ಅಡಿ ಡೇರಿ ಜಾಗೃತಿ ಅಭಿಯಾನ ಹಾಗೂ ವಿಶ್ವ ಹಾಲು ದಿನಾಚರಣೆ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದರು.
ಈ ಮೂರು ಜಿಲ್ಲೆಗಳಲ್ಲಿ 110 ಕೋಟಿ ರೂ. ವೆಚ್ಚದಲ್ಲಿ ಮೇಘಾ ಡೈರಿ ನಿರ್ಮಿಸಲು ಉದ್ದೇಶಿಸಲಾಗಿದ್ದು, ಹಿಂದಿನ ಜಿಲ್ಲಾಧಿಕಾರಿ ರಾಮಪ್ರಸಾದ್ ಅವರು ಮೈನಿಂಗ್‌ಫಂಡ್‌ನಲ್ಲಿ 150 ಕೋಟಿ ರೂ. ನೀಡುವ ಪ್ರಸ್ತಾಪಿಸಿದ್ದರು. ಸದರಿ ಫಂಡ್ ಬಳಸಿಕೊಳ್ಳಲು ಬರುವುದಿಲ್ಲ. ಬೆಂಗಳೂರಿನ ಎನ್‌ಡಿಡಿಬಿಗೆ ಈ ಮೆಘಾ ಡೈರಿ ನಿರ್ಮಾಣದ ಪ್ರಸ್ತಾವನೆ ಸಲ್ಲಿಸಿದ್ದು ಇದಕ್ಕೆ ಸಮ್ಮತಿಸಿದ್ದಾರೆ. ಇದಕ್ಕೆ 25 ಎಕರೆ ಜಮೀನು ಖರೀದಿಸಿ ದಾಖಲೆ ಸಲ್ಲಿಸಿದರೆ ಸಾಲ ನೀಡಲು ತಾತ್ವಿಕವಾಗಿ ಒಪ್ಪಿದ್ದು ಇದಕ್ಕೂ ಸರ್ಕಾರವೇ 110 ಕೋಟಿ ರೂ. ನೀಡಬೇಕೆಂದು ಹಕ್ಕೋತ್ತಾಯ ಮಂಡಿಸಿದ ಅವರು, ಈ ಹಿನ್ನೆಲೆಯಲ್ಲಿ ರಾಯಚೂರು, ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲೆಯ ಶಾಸಕರು, ಪಕ್ಷಾತೀತವಾಗಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರ ಬಳಿ ನಿಯೋಗ ಕೊಂಡೊಯ್ಯಲಾಗುವುದು ಎಂದರು.
ಹಿರಿಯ ಶಾಸಕ ಅಮರೇಗೌಡ ಪಾಟೀಲ ಬಯ್ನಾಪೂರು ಅವರು, ಕುಷ್ಟಗಿ ತಾಲೂಕಿನ ಮೂರು ಹಾಲು ಉತ್ಪಾದಕರ ಸಹಕಾರ ಸಂಘಗಳ ಕಟ್ಟಡಕ್ಕೆ ತಲಾ 5ಲಕ್ಷ ರೂ. ಅನುದಾನ ಪ್ರಕಟಿಸಿದ್ದಾರೆ. ಅಂತೆಯೇ ಸಂಘಗಳ ಕಟ್ಟಡಕ್ಕೆ ಒಕ್ಕೂಟದಿಂದ ತಲಾ 3.50 ಲಕ್ಷ ರೂ. ಅನುದಾನವಿದ್ದು, ಈ ಮೂರು ಜಿಲ್ಲಾ ವ್ಯಾಪ್ತಿಯ ಶಾಸಕರಿಗೆ, ಶಾಸಕರ ಅನುದಾನದಲ್ಲಿ ಪ್ರತಿ ವರ್ಷ 5 ಸಂಘಗಳಿಗೆ ತಲಾ 5ಲಕ್ಷ ರೂ. ಅನುದಾನ ನೀಡುವಂತೆ ಪತ್ರ ಬರೆದು ವಿನಂತಿಸುತಿದ್ದು, ಹೀಗಾದರೆ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಸ್ವಂತ ಕಟ್ಟಡ ಹೊಂದಲು ಸಾಧ್ಯವಿದೆ ಎಂದರು.
ಸಮಾರಂಭ ಉದ್ಘಾಟಿಸಿದ ಶಾಸಕ ಅಮರೇಗೌಡ ಪಾಟೀಲ ಬಯ್ನಾಪೂರ ಮಾತನಾಡಿ, ನಂದಿನಿ ರಾಜ್ಯದ ಉತ್ಕೃಷ್ಟ ಗುಣಮಟ್ಟದ ಉತ್ಪನ್ನವಾಗಿದ್ದು, ಬೇರೆ ಹಾಲಿಗಿಂತ ಇದರಲ್ಲಿ ಕಲಬೆರಕೆ ಅಂಶವೇ ಇಲ್ಲ ಎಂದರು.
ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ, ಒಕ್ಕೂಟದ ಉಪಾಧ್ಯಕ್ಷ ಶಿವಪ್ಪ ವಾದಿ, ನಿರ್ದೇಶಕರಾದ ವೆಂಕನಗೌಡ ಹಿರೇಗೌಡ್ರು, ಎಂ.ಸತ್ಯನಾರಾಯಣ, ಎಚ್.ಮರುಳಸಿದ್ದನಗೌಡ್ರು, ಕವಿತಾ ಗುಳನಗೌಡ್ರು, ಜಿ. ಸತ್ಯನಾರಾಯಣ, ವ್ಯವಸ್ಥಾಪಕ ಬುಕ್ಕಾ ಮಲ್ಲಿಕಾರ್ಜುನ, ಡಾ. ಸುನೀಲ್, ಉದಯಕುಮಾರ, ಮಹೇಶ, ಶೇಖರ ನಾಯಕ್, ತೋಟಪ್ಪ ಮತ್ತೀತರಿದ್ದರು.ರೇವತಿ ಪ್ರಾರ್ಥಿಸಿದರು, ಕೆ.ಬಿ. ಮಂಜುನಾಥ ಕಾರ್ಯಕ್ರಮ ನಿರೂಪಿಸಿದರು