Advertisement

ನೀವು ಓದಲೇಬೇಕಾದ 10 ಪುಸ್ತಕಗಳು

10:42 PM May 27, 2021 | Team Udayavani |

ಪುಸ್ತಕ ಓದು ಅರಿವು ನೀಡುವುದರ ಜತೆಗೆ ನಮ್ಮ ಮನಸ್ಸನ್ನು ಚೇತೋಹಾರಿಯನ್ನಾಗಿಸುತ್ತದೆ. ಸದ್ಯ ಇರುವ ಸಂದಿಗ್ಧ ಪರಿಸ್ಥಿತಿಯಲ್ಲಿ ನಾವು ಮಾನಸಿಕವಾಗಿ ಖನ್ನತೆಗೆ ಒಳಗಾಗುವುದನ್ನು ತಪ್ಪಿಸಲು ಪುಸ್ತಕ ಓದು ಜಡ್ಡು ಹಿಡಿದ ಮನಸ್ಸಿಗೆ ಒಳ್ಳೆಯ ಟಾನಿಕ್‌ ಆಗಬಲ್ಲದು. ಹೀಗಾಗಿ ಪುಸ್ತಕ ಓದು ನಮ್ಮ ಬದುಕಿನಲ್ಲಿ ಪ್ರಮುಖ ಸಂಗತಿ ಎನಿಸುತ್ತದೆ. ನಮ್ಮ ಜೀವನದಲ್ಲಿ  ಓದಲೇಬೇಕಾದ ಪುಸ್ತಕಗಳ ಪಟ್ಟಿ ನೀಡಲು ಹೋದರೆ ಹನುಮನ ಬಾಲದಂತೆ ಬೆಳೆಯುತ್ತಾ ಹೋಗುತ್ತದೆ. ಸಂದರ್ಭಕ್ಕನುಗುಣವಾಗಿ ಓದಲೇಬೇಕಾದ 10 ಪುಸ್ತಕಗಳ ಪಟ್ಟಿ  ಜತೆಗೆ ಸಂಕ್ಷಿಪ್ತ ಮಾಹಿತಿ ಇಲ್ಲಿ ನೀಡಲಾಗಿದೆ.

  1. ಬದುಕಲು ಕಲಿಯಿರಿ: ಸ್ವಾಮೀ ಜಗದಾತ್ಮನಂದ ಅವರು ಬರೆದಿರುವ ಈ ಪುಸ್ತಕ ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಪಟ್ಟಿದ್ದು, ನಮ್ಮ ಯಶಸ್ವಿ ಬದುಕಿಗೆ ಮುನ್ನುಡಿಯಾಗಬಲ್ಲದು. ಜೀವನದಲ್ಲಿ ಸೋಲು-ಗೆಲುವು, ನೋವು- ನಲಿವನ್ನು ಸಮಾನವಾಗಿ ಸ್ವೀಕರಿಸಿ ಮುನ್ನಡೆಯಲು ಪ್ರೇರಣೆಯಾಗಬಲ್ಲದು.
  2. ಮಲೆಗಳಲ್ಲಿ ಮದುಮಗಳು: ಕುವೆಂಪು ಅವರ ಈ ಕಾದಂಬರಿ ಮಲೆನಾಡಿನ ಸೌಂದರ್ಯವನ್ನು ಅಕ್ಷರಗಳಲ್ಲಿ ಕಟ್ಟಿಕೊಡುತ್ತದೆ. ಪ್ರತೀ ಪಾತ್ರಗಳು ತಮ್ಮ ಬದುಕನ್ನು ಅನ್ವೇಷಿಸುವ ಮೂಲಕ ಮಾದರಿಯಾಗಬಲ್ಲದು.
  3. ಮೂಕಜ್ಜಿಯ ಕನಸುಗಳು: ಶಿವರಾಮ ಕಾರಂತರ ಈ ಕೃತಿಯೂ ಉದಾತ್ತವಾದ ಅನುಭವ ಹಾಗೂ ಜ್ಞಾನವನ್ನು ನೀಡುವುದಾಗಿದೆ. ನಮ್ಮ ಬದುಕಿನಲ್ಲಿ ಕಾಣಸಿಗುವ ಸಂಗತಿಗಳು ಎಷ್ಟು ಪ್ರಮುಖ ವಹಿಸುತ್ತದೆ ಎಂಬುದನ್ನು ಈ ಕೃತಿಯಲ್ಲಿ ಕಾಣಬಹುದು.
  4. ಪರ್ವ: ಎಸ್‌. ಎಲ್‌.ಭೈರಪ್ಪ ಅವರ ಪೌರಾಣಿಕ ಕಾದಂಬರಿ ಇದು. ಮಹಾಭಾರತದ ವಿಷಯವಸ್ತುವನ್ನು ಒಳಗೊಂಡಿರುವ ಈ ಪುಸ್ತಕ ನಮ್ಮಲ್ಲಿ ಅನೇಕ ಜಿಜ್ಞಾಸೆಗಳನ್ನು ಹುಟ್ಟುಹಾಕುತ್ತದೆ.
  5. ಪ್ಯಾಪಿಲಾನ್‌ ಸರಣಿ: ಮೂರು ಸರಣಿಗಳನ್ನೊಳಗೊಂಡಿರುವ ಈ ಕೃತಿಯು ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಹಾಗೂ ಪ್ರದೀಪ್‌ ಕೆಂಜಿಗೆ ಸೇರಿ ಅನುವಾದಿಸಿದ ಕೃತಿ. ಕೌತುಕದೊಟ್ಟಿಗೆ ಜೀವನದಲ್ಲಿ ಕಠಿನ ಸವಾಲುಗಳನ್ನು ಎದುರಿಸಿದರೆ ಗೆಲುವು ಪಡೆಯಬಹುದು ಎಂಬುದನ್ನು ಈ ಕೃತಿ ಸಾರುತ್ತದೆ.
Advertisement

    6.ತೇಜೋ ತುಂಗಾಭದ್ರ: ವಸುಧೇಂದ್ರ ಅವರ ಇತಿಹಾಸ ಆಧಾರಿತ ಕಾದಂಬರಿ ಇದು. ಎರಡು ನದಿ ದಡದ ನಾಗರಿಕ ದೇಶಗಳೊಂದಿಗಿನ ವ್ಯಾಪಾರ ಜಗತ್ತಿನ ಬಗ್ಗೆ ಒಳಹರಿವು ನೀಡುತ್ತದೆ. ಇತಿಹಾಸ ಜ್ಞಾನದ     ಜತೆಗೆ ಬದುಕಿನಲ್ಲಿ ರೂಢಿಸಿಕೊಳ್ಳಬೇಕಾದ ಪ್ರೀತಿ, ಅಂತಃಕರಣದ ಬಗ್ಗೆ ತಿಳಿಸುತ್ತದೆ.

     7.ಕರುಣಾಳು ಬಾ ಬೆಳಕೆ: ಗುರುರಾಜ ಕರ್ಜಗಿ ಅವರ ಈ ಪುಸ್ತಕ ಹಲವು ಸರಣಿಗಳಲ್ಲಿದ್ದು. ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಬಲ್ಲದು.

  1. ಶಾಲಭಂಜಿಕೆ: ತಮ್ಮ ವೈಶಿಷ್ಟ್ಯ ಪೂರ್ಣ ಬರವಣಿಗೆಯಿಂದ ಗುರುತಿಸಿಕೊಂಡಿರುವ ಕೆ.ಎನ್‌. ಗಣೇಶಯ್ಯನವರ ಮೊದಲ ಕಥಾಸಂಕಲನ ಇದು. ಚರಿತ್ರೆಯಲ್ಲಿ ಅಡಗಿರುವ ಅನೇಕ ಕೌತುಕ ವಿಷಯಗಳನ್ನು ತೆರೆದಿಡುತ್ತದೆ.
  2. ಮನದ ಮಾತು: ಸುಧಾಮೂರ್ತಿ ಅವರ ಲೇಖನಗಳ ಸಂಗ್ರಹ ಇದು. ತಮ್ಮ ಬದುಕಿನಲ್ಲಿ ನಡೆದ ಸ್ಫೂರ್ತಿದಾಯಕ ಘಟನೆಗಳನ್ನು ಮನತಟ್ಟುವಂತೆ ವಿವರಿಸಿದ್ದಾರೆ.
  3. ದುರ್ಗಾಸ್ತಮಾನ:  ತರಾಸು ಅವರ ಐತಿಹಾಸಿಕ ಕಾದಂಬರಿ ಇದು. ಚಿತ್ರದುರ್ಗದ ಗಂಡೆದೆಯ ಭಂಟ ವೀರ ಮದಕರಿನಾಯಕನ ಸಾಹಸ ಕುರಿತದ್ದಾಗಿದೆ. ಕಾದಂಬರಿಯ ಸರಳ ಭಾಷೆಯು ಓದುಗನನ್ನು ಹಿಡಿದಿಟ್ಟುಕೊಳ್ಳುತ್ತದೆ.

 

Advertisement

Udayavani is now on Telegram. Click here to join our channel and stay updated with the latest news.

Next