Advertisement

10 ಪ್ರಭಾವಿಗಳ ಸೆಳೆಯಲು ಬಿಜೆಪಿ ತಂತ್ರ; 150 ಟಾರ್ಗೆಟ್‌ ಗುರಿ ಮುಟ್ಟಲು ಕಾರ್ಯತಂತ್ರ

01:08 AM Sep 04, 2022 | Team Udayavani |

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಭೇಟಿ ನೀಡಿ ಹೋದ ಬೆನ್ನಲ್ಲೇ ಕಾಂಗ್ರೆಸ್‌ ಹಾಗೂ ಜೆಡಿಎಸ್‌ನಿಂದ ಹತ್ತು ಮಂದಿ ಶಾಸಕರ ಸೆಳೆಯಲು ಕಾರ್ಯತಂತ್ರ ರೂಪಿಸಲಾಗಿದೆ.

Advertisement

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ 150 ಟಾರ್ಗೆಟ್‌ ಗುರಿ ತಲುಪಲು ಹಳೆ ಮೈಸೂರು ಹಾಗೂ ಉತ್ತರ ಕರ್ನಾಟಕ ಭಾಗದ ಹತ್ತು ಪ್ರಭಾವಿ ಶಾಸಕರನ್ನು ಸೆಳೆಯಲು ಪಟ್ಟಿ ಸಿದ್ಧಪಡಿಸಲಾಗಿದೆ.

ಇತ್ತೀಚೆಗೆ ದಿಲ್ಲಿಗೆ ಭೇಟಿ ನೀಡಿದ್ದ ಯಡಿಯೂರಪ್ಪ ಅವರು ಬಿಜೆಪಿಗೆ ಬರಲು ಉತ್ಸುಕರಾಗಿರುವವರ ಬಗ್ಗೆ ಮಾಹಿತಿ ನೀಡಿದ್ದರು. ಮಂಗಳೂರಿನಲ್ಲಿ ಮೋದಿ ಅವರು ಭಾಗವಹಿಸಿದ್ದ ಕೋರ್‌ ಕಮಿಟಿಯಲ್ಲೂ ವಿಷಯ ಪ್ರಸ್ತಾವವಾಗಿದ್ದು, ಬಿಜೆಪಿ ಶಾಸಕರು ಇಲ್ಲದ ಕ್ಷೇತ್ರಗಳಲ್ಲಿ ಸ್ವಸಾಮರ್ಥ್ಯ ಹಾಗೂ ವರ್ಚಸ್ಸು ಹೊಂದಿದ್ದರೆ ಸೇರಿಸಿಕೊಳ್ಳಬಹುದು ಎಂಬ ಅಭಿ ಪ್ರಾಯ ವ್ಯಕ್ತವಾಗಿದೆ ಎಂದಿವೆ ಮೂಲಗಳು.

ಬಿ.ಎಸ್‌. ಯಡಿಯೂರಪ್ಪ ಅವರಿಗೆ ಬಿಜೆಪಿ ಸಂಸದೀಯ ಮಂಡಳಿ ಹಾಗೂ ಚುನಾವಣ ಸಮಿತಿಯಲ್ಲಿ ಸ್ಥಾನಮಾನ ದೊರೆತ ಅನಂತರ ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ ಹಲವು ಶಾಸಕರು ನೀವು ಟಿಕೆಟ್‌ ಕೊಡುವ ಧೈರ್ಯ ಕೊಟ್ಟರೆ ಮನಸ್ಸು ಮಾಡುವುದಾಗಿ ತಿಳಿಸಿದ್ದಾರೆ. ಜತೆಗೆ, ಕೆಲವರು ಹೊಸ ಜಿಲ್ಲೆಯ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಯಡಿಯೂರಪ್ಪ ಅವರು ವರಿಷ್ಠರ ಗಮನಕ್ಕೂ ತಂದಿದ್ದಾರೆ ಎನ್ನಲಾಗಿದೆ.

ಏಳು ಜಿಲ್ಲೆಗಳಲ್ಲಿ ಗಾಳ
ತುಮಕೂರು, ವಿಜಯಪುರ, ಮಂಡ್ಯ, ರಾಯ ಚೂರು, ಮೈಸೂರು, ಕೋಲಾರ, ಚಿಕ್ಕಬಳ್ಳಾಪುರ ಭಾಗದ ಶಾಸಕರಿಗೆ “ಗಾಳ’ ಹಾಕಲಾಗಿದೆ. ಕೆಲವರು ಡಿಸೆಂಬರ್‌ ವೇಳೆಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಲಿದ್ದು, ಕ್ಷೇತ್ರದ ಅಭಿವೃದ್ಧಿಗೆ ಅನುದಾನದ ಮನವಿ ಮಾಡಿದ್ದಾರೆ ಎಂದು ಹೇಳಲಾಗಿದೆ.

Advertisement

ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ತುಮಕೂರು ಜಿಲ್ಲೆಗಳಲ್ಲಿ ಬಿಜೆಪಿಗೆ ಬರಲು ಸಾಕಷ್ಟು ಮುಖಂಡರು ಒಲವು ತೋರಿದ್ದಾರೆ. ಆದರೆ ಈ ವಿಷಯದಲ್ಲಿ ಅಳೆದು ತೂಗಿ ತೀರ್ಮಾನ ಮಾಡಲಾಗುತ್ತಿದೆ. ಮಂಡ್ಯದಲ್ಲಿ ಅಶೋಕ್‌ ಜಯರಾಂ ಅನಂತರ ಲಕ್ಷ್ಮೀ ಅಶ್ವಿ‌ನ್‌, ಮಾಜಿ ಶಾಸಕ ಎಲ್‌.ಆರ್‌. ಶಿವರಾಮೇಗೌಡ ಪತ್ನಿ, ಸುಮಲತಾ ಆಪ್ತ ಸಚ್ಚಿದಾನಂದ ಅವರ ಜತೆ ಮಾತುಕತೆ ನಡೆಸಲಾಗಿದೆ.

ಸುಮಲತಾ ಅವರು ಡಿಸೆಂಬರ್‌ ವೇಳೆಗೆ ತಮ್ಮ ತೀರ್ಮಾನ ಹೇಳುವುದಾಗಿ ತಿಳಿಸಿದ್ದಾರೆ. ಆ ಬಳಿಕ ಮಂಡ್ಯ ಜಿಲ್ಲೆಯಲ್ಲಿ ಅಚ್ಚರಿಯ ರಾಜಕೀಯ ಬೆಳ ವಣಿಗೆ ನಡೆಯಲಿದೆ ಎನ್ನುತ್ತಾರೆ ಸಚಿವರೊಬ್ಬರು.

ಮೈಸೂರಿನಲ್ಲಿ ಮಾಜಿ ಸಚಿವ ಜಿ.ಟಿ. ದೇವೇ ಗೌಡರನ್ನು ಸಳೆಯುವ ಪ್ರಯತ್ನ ನಡೆದಿದೆ. ಅವರ ಸೇರ್ಪಡೆಯಿಂದ 3 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವಿಗೆ ಸಹಕಾರಿಯಾಗಲಿದೆ ಎನ್ನಲಾಗಿದೆ. ಈ ಮಧ್ಯೆ ಕಾಂಗ್ರೆಸ್‌ನ ಮಾಜಿ ಶಾಸಕ ಮುದ್ದಹನುಮೇಗೌಡರು ಬಿಜೆಪಿಗೆ ಒಪ್ಪಿದ್ದಾರಾದರೂ ಕುಣಿಗಲ್‌ ವಿಧಾನಸಭೆ ಕ್ಷೇತ್ರದಿಂದಲೇ ಟಿಕೆಟ್‌ಗೆ ಪಟ್ಟು ಹಿಡಿದಿದ್ದಾರೆ. ಆದರೆ ತುಮಕೂರು ಅಥವಾ ಬೆಂಗಳೂರು ಗ್ರಾಮೀಣ ಲೋಕಸಭೆ ಕ್ಷೇತ್ರದಿಂದ ಅವರಿಗೆ ಟಿಕೆಟ್‌ ನೀಡಲು ಬಿಜೆಪಿ ಸಿದ್ಧವಿದೆ.

ಯಡಿಯೂರಪ್ಪ ಭೇಟಿ ಸಂದರ್ಭದಲ್ಲೂ ಟಿಕೆಟ್‌ ವಿಷಯ ಪ್ರಸ್ತಾವವಾಯಿತು. ಆದರೆ, ವರಿಷ್ಠರ ಒಪ್ಪಿಗೆ ಇಲ್ಲದೆ ಭರವಸೆ ಕೊಡಲು ಆಗದು ಎಂದು ಯಡಿಯೂರಪ್ಪ ತಿಳಿಸಿದರು ಎಂದು ಹೇಳಲಾಗಿದೆ.

ಬಿಎಸ್‌ವೈ ಸಜ್ಜು
ದಿಲ್ಲಿಯಲ್ಲಿ ನಾಯಕರ ಭೇಟಿ ಮಾಡಿಬಂದ ಅನಂತರ ಹೊಸ ಹುಮ್ಮಸ್ಸಿನಿಂದ ಪಕ್ಷದ ಚಟು ವಟಿಕೆಗಳಲ್ಲಿ ಭಾಗಿಯಾಗುತ್ತಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಶಿವ ಮೊಗ್ಗಕ್ಕೆ ಪ್ರಧಾನಿಯವರನ್ನು ಕರೆಸಿ ಶಕ್ತಿ ಪ್ರದರ್ಶನಕ್ಕೆ ಸಜ್ಜಾಗುತ್ತಿದ್ದಾರೆ. ತಮ್ಮನ್ನು ಸಂಸದೀಯ ಮಂಡಳಿ ಹಾಗೂ ಚುನಾವಣ ಸಮಿತಿಗೆ ನೇಮಿಸಿದ್ದಕ್ಕೆ ಕೃತಜ್ಞತೆ ಸಲ್ಲಿಸಿ, ಬೃಹತ್‌ ಸಮಾವೇಶ ನಡೆಸಲು ಯೋಜನೆ ರೂಪಿಸಿದ್ದು ಶಿವಮೊಗ್ಗಕ್ಕೆ ಪ್ರಧಾನಿ ಯವರಿಗೆ ಆಹ್ವಾನ ನೀಡಿದ್ದಾರೆ ಎನ್ನಲಾಗಿದೆ.

-ಎಸ್‌.ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next