Advertisement

ಕೊರೊನಾ ವೈರಸ್‌ಗೆ ಐಪಿಎಲ್‌ ರದ್ದು ಸಾಧ್ಯತೆ : ಬಿಸಿಸಿಐಗೆ 10 ಸಾವಿರ ಕೋಟಿ ರೂ. ನಷ್ಟ

09:34 AM Mar 19, 2020 | sudhir |

ಮಣಿಪಾಲ:ವಿಶ್ವಾದ್ಯಂತ ಸಾವಿರಾರು ಮಂದಿಯನ್ನು ಬಲಿ ಪಡೆದಿರುವ ಕೊರೊನಾ ವೈರಸ್‌ ಹೆಮ್ಮಾರಿ ದೇಶಕ್ಕೂ ಅಡಿ ಇಟ್ಟಿದೆ. ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ಸರಕಾರ ಸಾರ್ವಜನಿಕರನ್ನು ಒಗ್ಗೂಡಿಸುವಂತಹ ಎಲ್ಲ ಕಾರ್ಯಕ್ರಮಗಳನ್ನು ಮುಂದೂಡುತ್ತಿದೆ. ಇದರ ಬಿಸಿ ಜಗತ್ತಿನ ಅತ್ಯಂತ ಶ್ರೀಮಂತ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) 13ನೇ ಆವೃತ್ತಿಗೂ ತಟ್ಟಿದೆ. ಪರಿಣಾಮ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ತಾರೆಯರ ಸಹಿತ ಇತರ ಉದ್ಯಮಗಳಿಗೂ ಅಗಾಧ ಪ್ರಮಾಣದಲ್ಲಿ ನಷ್ಟವಾಗಲಿದೆ.

Advertisement

ಐಪಿಎಲ್‌ ಆಟವಲ್ಲ, ದೊಡ್ಡ ಉದ್ಯಮ
ಐಪಿಎಲ್‌ ಎಂದರೆ ಕೇವಲ ಆಟ, ಮನೋರಂಜನೆ ಎಂದು ಬಹುತೇಕರು ಅಂದುಕೊಂಡಿದ್ದಾರೆ. ಆದರೆ ಇದು ದೊಡ್ಡ ಉದ್ಯಮವಾಗಿದ್ದು, ಈ ಒಂದು ಕ್ರೀಡಾಕೂಟ ಹಲವರ ಜೀವನೋಪಾಯವಾಗಿದೆ. ಇದನ್ನು ನಂಬಿಕೊಂಡು ಸಾವಿರಾರು ಮಂದಿ ಜೀವನ ನಡೆಸುತ್ತಿದ್ದಾರೆ. ಒಂದು ವೇಳೆ ಐಪಿಎಲ್‌ ರದ್ದಾದರೆ ಹಲವರ ಜೀವನ ಅಭದ್ರಗೊಳ್ಳುತ್ತದೆ.

ಬಿಸಿಸಿಐಗೆ 10 ಸಾವಿರ ಕೋಟಿ ರೂ. ನಷ್ಟ
ಐಪಿಎಲ್‌ ರದ್ದುಗೊಂಡರೆ ಕ್ರೀಡಾಕೂಟದ ಸಂದರ್ಭ ದಲ್ಲಿ ಆಯೋಜನೆ ಆಗುವ ಪ್ರಾಯೋಜಕತ್ವಗಳು ಸಂಪೂರ್ಣವಾಗಿ ಸ್ಥಗಿತಗೊಳ್ಳಲಿದ್ದು, ಭಾರತದ ಕ್ರಿಕೆಟ್‌ ನಿಯಂತ್ರಣ ಮಂಡಳಿಗೆ (ಬಿಸಿಸಿಐ) 10 ಸಾವಿರ ಕೋಟಿ ರೂ. ನಷ್ಟವಾಗುತ್ತದೆ ಎಂದು ಅಂದಾಜಿಸಲಾಗಿದೆ. ಈ ನಷ್ಟದ ಹೊರೆ ಮಾಧ್ಯಮ ಕ್ಷೇತ್ರ, ಜಾಹೀರಾತು, ಫ್ರ್ಯಾಂಚೈಸಿ ಸಂಸ್ಥೆಗಳ ಆದಾಯಕ್ಕೂ ಪೆಟ್ಟು ಬೀಳಲಿದೆ.
ಐಪಿಎಲ್‌ ಮುಂದೂಡುವಿಕೆಯಿಂದ ಸ್ಟಾರ್‌ ನ್ಪೋರ್ಟ್ಸ್ ಸಂಸ್ಥೆಗೆ ಆತಂಕ ಶುರುವಾಗಿದ್ದು, ಈ ಬಾರಿ ಕೂಟ ರದ್ದಾದರೆ ಸ್ಟಾರ್‌ ನ್ಪೋರ್ಟ್ಸ್ ಸಂಸ್ಥೆಗೆ 5.500 ಕೋಟಿ ರೂ. ನಷ್ಟವಾಗಲಿದೆ. ಸ್ಟಾರ್‌ ಸಂಸ್ಥೆ 5 ವರ್ಷಗಳ ಅವಧಿಯ ಪ್ರಸಾರದ ಹಕ್ಕನ್ನು ಖರೀದಿಸಿತ್ತು.

ಕೈ ತಪ್ಪಲಿರುವ ಟಿಕೆಟ್‌ ಹಣ
ಪ್ರೇಕ್ಷಕರ ಗೈರಿನಲ್ಲಿ ಐಪಿಎಲ್‌ ಪಂದ್ಯಾಟ ನಡೆಸಿ ಎಂದು ಬಿಸಿಸಿಐಗೆ ಸಲಹೆ ನೀಡಲಾಗಿದೆ. ಆದರೆ ಹೀಗಾದರೆ ಟಿಕೆಟ್‌ ಹಣದಿಂದ ಬರುವ 224ರಿಂದ 300 ಕೋಟಿ ರೂ.ಆದಾಯ ಕೈ ತಪ್ಪಲಿದೆ. ಜತೆಗೆ ನೇರಪ್ರಸಾರದಿಂದ ಬಿಸಿಸಿಐಗೆ ಬರುವ ಆದಾಯದಲ್ಲಿ, ತಲಾ 100 ಕೋಟಿ ರೂ.ಗಳನ್ನು 8 ಫ್ರಾಂಚೈಸಿಗಳಿಗೆ ಹಂಚಿಕೆ ಮಾಡಲಾ ಗುತ್ತಿತ್ತು. ಆದರೆ ಈ ಬಾರಿ ಪಂದ್ಯಾಟ ನಡೆಯದಿದ್ದರೆ ಪ್ರತೀ ಫ್ರಾಂಚೈಸಿಗೆ 100 ಕೋಟಿ ರೂ. ನಷ್ಟವಾಗಲಿದೆ.

ಪ್ರಾಯೋಜಕತ್ವ ಆದಾಯಕ್ಕೂ ಕುತ್ತು
ಐಪಿಎಲ್‌ ಪಂದ್ಯಾಟದ ವೇಳೆ ಬಿಸಿಸಿಐಗೆ ಹಲವಾರು ಪ್ರಾಯೋಜಕತ್ವ ಕಂಪೆನಿಗಳಿಂದ ಆದಾಯ ಬರುತ್ತದೆ. ಹಾಗೆಯೇ ಪ್ರಾಯೋಜಕರಿಂದ ಪ್ರತೀ ತಂಡಕ್ಕೆ ವರ್ಷಕ್ಕೆ 35ರಿಂದ 75 ಕೋಟಿ ರೂ. ಆದಾಯ (ಈ ಮೊತ್ತ ಪ್ರಾಯೋಜಕರ ಮೇಲೆ ನಿರ್ಣಯ)ವಾಗುತ್ತದೆ. ಆದರೆ ಈ ಬಾರಿ ಪಂದ್ಯ ಆಯೋಜನೆ ಆಗದಿದ್ದರೆ ಕೋಟ್ಯಂತರ ರೂ. ನಷ್ಟವಾಗಲಿದ್ದು, ಶೀರ್ಷಿಕೆ ಪ್ರಾಯೋಜಕತ್ವಕ್ಕಾಗಿ ವಿವೋ ನೀಡುತ್ತಿದ್ದ 439 ಕೋಟಿ ರೂ. ಪ್ರಾಯೋಜಕತ್ವದ ಆದಾಯಕ್ಕೂ ಕುತ್ತು ಬೀಳಲಿದೆ.

Advertisement

ಹೊಟೇಲ್‌, ವಿಮಾನ ಸಂಸ್ಥೆಗಳಿಗೂ ನಷ್ಟ
ಐಪಿಎಲ್‌ ಮೂಲಕ ಪ್ರತೀ ವರ್ಷ, ಹೊಟೇಲ್‌ಗ‌ಳಿಗೆ, ವಿಮಾನ ಯಾನ ಸಂಸ್ಥೆಗಳಿಗೆ 50 ಕೋಟಿ ರೂ. ಹಣ ಬರುತ್ತಿತ್ತು. ಆದರೆ ಕ್ರೀಡಾಕೂಟ ರದ್ದಾದರೆ ಈ ಆದಾಯ ಮೂಲ ಕೈ ತಪ್ಪಲಿದೆ.

ನಿಗದಿತ ದಿನಾಂಕಕ್ಕೆ ಕ್ರೀಡಾಕೂಟ ನಡೆಯದಿದ್ದರೆ ?
– ಎಪ್ರಿಲ್‌ 20ರೊಳಗೆ ಐಪಿಎಲ್‌ ಟೂರ್ನಿ ಆರಂಭವಾದರೆ ವೇಳಾಪಟ್ಟಿಯನ್ನು ಮರು ನಿಗದಿಪಡಿಸಬೇಕಾಗುತ್ತದೆ.
– ಹಿಂದಿನ ಆವೃತ್ತಿಯಂತೆ ಟೂರ್ನಿಯನ್ನು ಆಯೋಜಿಸುವುದಾದರೆ ಡಬಲ್‌ ಹೆಡರ್‌ ಅಂದರೆ ಒಂದು ದಿನದಲ್ಲಿ ಎರಡು ಪಂದ್ಯಗಳನ್ನು ಆಯೋಜಿಸಬೇಕಾಗುತ್ತದೆ.
– ಎಪ್ರಿಲ್‌ 15ರೊಳಗೆ ವೀಸಾ ನಿಯಮ ಸಡಿಲಿಕೆಯಾಗದಿದ್ದಲ್ಲಿ ವಿದೇಶಿ ಆಟಗಾರರ ಪಾಲ್ಗೊಳ್ಳುವಿಕೆ ಅನುಮಾನ.
– ಎಪ್ರಿಲ್‌ 15ರ ಅನಂತರವೂ ಕೊರೊನಾ ವೈರಸ್‌ ಹರಡುವಿಕೆ ನಿಯಂತ್ರಣಕ್ಕೆ ಬಾರದಿದ್ದರೆ ಪ್ರೇಕ್ಷಕರಿಲ್ಲದೆ ಪಂದ್ಯಾಟ ನಡೆಯುವ ಸಾಧ್ಯತೆ.

Advertisement

Udayavani is now on Telegram. Click here to join our channel and stay updated with the latest news.

Next