Advertisement
ಅತಿವೃಷ್ಟಿ ಹಾನಿ ಪರಿಹಾರವಾಗಿ ಮಸ್ಕಿ ತಾಲೂಕಿಗೆ ಬರೋಬ್ಬರಿ 10,50,61,400 ರೂ. ಬಿಡುಗಡೆಯಾಗಿದ್ದು, ನಷ್ಟಕ್ಕೆ ಒಳಗಾದ ರೈತರ ಖಾತೆಗೆ ತಾಲೂಕು ಆಡಳಿತ ನೇರವಾಗಿ ಹಣ ಜಮಾ ಮಾಡಿದೆ.
Related Articles
Advertisement
ಸತತವಾಗಿ ಸುರಿದ ಮಳೆಯಿಂದಾಗಿ ತಾಲೂಕಿನಲ್ಲಿ ಒಟ್ಟು 17 ಸಾವಿರ ಹೆಕ್ಟೇರ್ (42,500 ಎಕರೆ) ಜಮೀನಿನಲ್ಲಿ ಬಿತ್ತನೆ ಮಾಡಿದ್ದ ಬೆಳೆ ನಾಶವಾಗಿರುವುದು ಸರ್ವೇಯಿಂದ ಗೊತ್ತಾಗಿತ್ತು. ಅಲ್ಲದೇ ಸ್ವಯಂ ಆಗಿ ರೈತರೇ ಪರಿಹಾರಕ್ಕೆ ಕೋರಿದ್ದ ಅರ್ಜಿಗಳನ್ನು ಪರಿಶೀಲಿಸಿ, ಹಾನಿಯ ವರದಿಯನ್ನು ಕಂದಾಯ ಇಲಾಖೆಯಿಂದ ತಾಳೆ ಹಾಕಲಾಗಿತ್ತು. ಈ ಪ್ರಕಾರವಾಗಿ ತಾಲೂಕು ಆಡಳಿತಕ್ಕೆ ಸಲ್ಲಿಕೆಯಾಗಿದ್ದ 16,672 ರೈತರ ಅರ್ಜಿಗಳು ಮಾತ್ರ ಪರಿಹಾರಕ್ಕೆ ಪುರಸ್ಕಾರವಾಗಿದ್ದು, ಇಷ್ಟು ರೈತರ ಖಾತೆಗಳಿಗೆ ಮಾತ್ರ ಆನ್‌ಲೈನ್ ಮೂಲಕ ಹಣ ಜಮೆಯಾಗಿದೆ. ಆಯಾ ರೈತರ ಬೆಳೆಯ ಹಾನಿಯ ಪ್ರಮಾಣ (ಪೂರ್ಣ, ಇಲ್ಲವೇ ಭಾಗಶಃ)ಕ್ಕೆ ತಕ್ಕಂತೆ ಒಟ್ಟು 10,06,80,000 ರೂ. ಹಣ ಜಮೆಯಾಗಿದೆ.
ಭತ್ತವೇ ಹೆಚ್ಚು
ಮಸ್ಕಿ ಹೋಬಳಿಯಲ್ಲಿ 2638 ಹೆಕ್ಟೇರ್, ಹಾಲಾಪೂರ ಹೋಬಳಿಯಲ್ಲಿ 4119 ಹೆಕ್ಟೇರ್, ಬಳಗಾನೂರು ಹೋಬಳಿಯಲ್ಲಿ 4140 ಹೆಕ್ಟೇರ್, ಗುಡದೂರು ಹೋಬಳಿಯಲ್ಲಿ 2920 ಹೆಕ್ಟೇರ್ ಸೇರಿ ಒಟ್ಟು 17 ಸಾವಿರ ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ಸಂಪೂರ್ಣ ಹಾನಿಯಾಗಿತ್ತು. ವಿಶೇಷವಾಗಿ ತಾಲೂಕಿನ ಗುಡದೂರು, ಬಳಗಾನೂರು, ಹಾಲಾಪೂರ ಹೋಬಳಿಯಲ್ಲಿ ನಾಟಿ ಮಾಡಿದ್ದ ಭತ್ತವೇ ಅತಿವೃಷ್ಟಿಗೆ ಹೆಚ್ಚು ಹಾನಿಯಾಗಿತ್ತು. ಫಸಲು ಹಂತಕ್ಕೆ ಬಂದಿದ್ದ ಸೋನಾ, ಕಾವೇರಿ ಸೋನಾ, ಆರ್.ಎನ್.ಆರ್ ಮಾದರಿಯ ಭತ್ತ ನೆಲಕ್ಕೆ ಬಿದ್ದು ರೈತರಿಗೆ ನಷ್ಟ ಉಂಟು ಮಾಡಿತ್ತು. ಉಳಿದಂತೆ ತೊಗರಿ, ಕಡಲೆ, ಸೂರ್ಯಕಾಂತಿ ಬೆಳೆಯೂ ಹಾನಿಯಾಗಿದ್ದು, ಹಾನಿಗೆ ಒಳಗಾದ ಎಲ್ಲ ರೈತರಿಗೂ ಪರಿಹಾರ ದಕ್ಕಿದಂತಾಗಿದೆ.
ಮನೆ ಹಾನಿಗೂ ದುಪ್ಪಟ್ಟು
ಇನ್ನು ಅತಿವೃಷ್ಟಿಯಿಂದಾಗಿ ತಾಲೂಕಿನಲ್ಲಿ 75 ಮನೆಗಳು ನೆಲಸಮವಾಗಿವೆ. ಮನೆ ಹಾನಿಯ ಪ್ರಮಾಣ ಆಧರಿಸಿ, ಸರಕಾರದ ಹೊಸ ಪರಿಹಾರ ಮಾರ್ಗಸೂಚಿ ಅನ್ವಯ 75 ಕುಟುಂಬಗಳಿಗೆ ಒಟ್ಟು 43,81,400 ರೂ. ಹಣ ಸರಕಾರದಿಂದ ಪರಿಹಾರವಾಗಿ ಬಿಡುಗಡೆಯಾಗಿದೆ.
ಮಸ್ಕಿ ತಾಲೂಕಿನಲ್ಲಿ ಮಳೆಯಿಂದಾಗಿ ಹಾನಿಗೆ ಒಳಗಾದ ಎಲ್ಲ ರೈತರಿಗೂ ಸರಕಾರದಿಂದ ಪರಿಹಾರ ಬಿಡುಗಡೆ ಮಾಡಲಾಗಿದೆ. ನೇರವಾಗಿ ರೈತರ ಖಾತೆಗಳಿಗೆ ಆರ್‌ಟಿಜಿಎಸ್ ಮೂಲಕ ಹಣ ಜಮೆ ಮಾಡಲಾಗಿದೆ. -ಕವಿತಾ ಆರ್., ತಹಶೀಲ್ದಾರ್, ಮಸ್ಕಿ
-ಮಲ್ಲಿಕಾರ್ಜುನ ಚಿಲ್ಕರಾಗಿ