ಬೆಳಗಾವಿ: ನಿರುಪಯುಕ್ತ ಕೊಳವೆ ಬಾವಿಗಳನ್ನು ಮುಚ್ಚದೆ ಇದ್ದಲ್ಲಿ ಒಂದು ವರ್ಷ ಜೈಲು ಹಾಗೂ 25 ಸಾವಿರ ದಂಡ ವಿಧಿಸುವ ಕರ್ನಾಟಕ ಅಂತರ್ಜಲ (ಅಭಿವೃದ್ಧಿ ಮತ್ತು ನಿರ್ವಹಣೆ ವಿನಿಮಯ ಹಾಗೂ ನಿಯಂತ್ರಣ) ಅಧಿನಿಯಮ 2011 ಮತ್ತು ನಿಯಮಾವಳಿ 2012ಕ್ಕೆ ತಿದ್ದುಪಡಿಯನ್ನು ವಿಧಾನಸಭೆ ಧ್ವನಿಮತದಿಂದ ಅಂಗೀಕರಿಸಿತು.
ಸಣ್ಣ ಮಕ್ಕಳು ಕೊಳವೆ ಬಾವಿಗೆ ಬಿದ್ದು ಮರಣವನ್ನಪ್ಪುವ, ಜೀವನ್ಮರಣ ಹೋರಾಟ ನಡೆಸುವ ಪ್ರಕರಣಗಳನ್ನು ತಪ್ಪಿಸುವ ಉದ್ದೇಶದಿಂದ ಈ ಮಸೂದೆಯನ್ನು ಅಂಗೀಕರಿಸಲಾಗಿದೆ.
ಸಚಿವ ಭೋಸರಾಜು ಅವರು ಮಂಡಿಸಿದ ಮಸೂದೆಗೆ ವಿಧಾನ ಸಭೆ ಅಸ್ತು ಎಂದಿತು. ಕೊಳವೆ ಬಾವಿ ಕೊರೆಯಲು ಇಚ್ಛಿಸುವವರು ಸಂಬಂಧಪಟ್ಟ ಸ್ಥಳೀಯ ಪ್ರಾಧಿಕಾರಗಳಿಗೆ 15 ದಿನಗಳ ಮುನ್ನ ಮಾಹಿತಿ ನೀಡಬೇಕು, ಡ್ರಿಲ್ಲಿಂಗ್ ಏಜೆನ್ಸಿ ಮತ್ತು ಇಂಪ್ಲಿಮೆಂಟಿಂಗ್ ಏಜೆನ್ಸಿಗಳು ಕೊಳವೆ ಬಾವಿಗಳನ್ನು ಕಬ್ಬಿಣದ ಮುಚ್ಚಳ ಹಾಕಿ ಮುಚ್ಚಬೇಕು. ಕೊಳವೆ ಬಾವಿ ಕೊರೆದ 24 ತಾಸುಗಳ ಒಳಗೆ ಮುಚ್ಚಿರುವ ಬಗ್ಗೆ ಫೋಟೋ ತೆಗೆ ದು ಸುರಕ್ಷಿತವಾಗಿ ಮುಚ್ಚಿರುವುದನ್ನು ಅಧಿಕಾರಿಗಳು ತಪಾಸಣೆ ಮಾಡಿ ದೃಢೀಕರಿಸಬೇಕು.
ಈ ಬಗ್ಗೆ ಜಂಟಿ ಹೇಳಿಕೆಯನ್ನು ಸ್ಥಳೀಯ ಪ್ರಾಧಿಕಾರಕ್ಕೆ ಸಲ್ಲಿಸಬೇಕು. ವಿಫಲ ಕೊಳವೆ ಬಾವಿಯನ್ನು ಕೆಸರು ಮಣ್ಣು ಕಲ್ಲುಗಳಿಂದ ಮುಚ್ಚಿ, ಮುಳ್ಳುಗಳನ್ನು ಹಾಕಬೇಕು. 2ಗುಣಿಸು2 ಅಳತೆಯ ದಿಬ್ಬವನ್ನು ನಿರ್ಮಿಸಿ ಫೆನ್ಸಿಂಗ್ ಹಾಕಬೇಕು ಎಂಬ ಮುಂತಾದ ಅಂಶಗಳನ್ನು ಮಸೂದೆ ಹೊಂದಿದೆ.
ಕೊಳವೆ ಬಾವಿಗಳನ್ನು ಮುಚ್ಚದೆ ಇದ್ದಲ್ಲಿ ಡ್ರಿಲ್ಲಿಂಗ್ ಏಜೆನ್ಸಿ ಹಾಗೂ ಇಂಪ್ಲಿಮೆಂಟಿಂಗ್ ಏಜೆನ್ಸಿಗಳಿಗೆ 25 ಸಾವಿರ ದಂಡ ಹಾಗೂ 1 ವರ್ಷಗಳ ಜೈಲು ಶಿಕ್ಷೆ. ಕೊಳವೆ ಬಾವಿ ಕೊರೆಯುವ ಬಗ್ಗೆ ಸಂಬಂಧಿತ ಅಧಿಕಾರಿಗಳಿಗೆ 15 ದಿನ ಮುಂಚಿತವಾಗಿ ಮಾಹಿತಿ ನೀಡದಿದ್ದರೆ, ಡ್ರಿಲ್ಲಿಂಗ್ ಏಜೆನ್ಸಿ/ ಇಂಪ್ಲಿಮೆಂಟಿಂಗ್ ಏಜೆನ್ಸಿಗಳಿಗೆ 5 ಸಾವಿರ ರೂ. ಜುಲ್ಮಾನೆ ಹಾಗೂ 3 ತಿಂಗಳ ಸಜೆ ವಿಧಿಸುವುದನ್ನು ಈ ಮಸೂದೆ ಹೊಂದಿದೆ.
ಅಲ್ಲದೆ ಜಮೀನಿನ ಮಾಲಕರು ಕೊಳವೆ ಬಾವಿ ದುರಸ್ತಿ ಮಾಡಲು ಪಂಪನ್ನು ಹೊರ ತೆಗೆದಾಗ ಕೊಳವೆ ಬಾವಿಗೆ ಕ್ಯಾಪ್ ಹಾಕಿ ಮುಚ್ಚಬೇಕು. ಕೊಳವೆ ಬಾವಿಯನ್ನು ಪುನಃಶ್ಚೇತನ ಮಾಡಲು ಇಚ್ಚಿಸಿದಲ್ಲಿ ಜಮೀನು ಮಾಲಕರು ಕೊಳವೆ ಬಾವಿಗೆ ಮುಚ್ಚಳದಿಂದ ಮುಚ್ಚಿ ಸುರಕ್ಷೆಯನ್ನು ಕಾಪಾಡಬೇಕು. ಕೊಳವೆ ಬಾವಿಯನ್ನು ಕೊರೆಯುವಾಗ ಎಲ್ಲರಿಗೂ ಕಾಣುವ ರೀತಿಯಲ್ಲಿ ಕೊಳವೆ ಬಾವಿ ಕೊರೆಯುತ್ತಿರುವ ಬಗ್ಗೆ ಎಚ್ಚರಿಕೆಯ ಬೋರ್ಡ್ ಪ್ರದರ್ಶಿಸಬೇಕು ಎಂಬ ಅಂಶಗಳನ್ನು ಮಸೂದೆ ಹೊಂದಿದೆ.