Advertisement

ಅಮಾನ್ಯತಾ ವಾರ್; ಸಿಂಗ್, ಅರುಣ್ ಜೇಟ್ಲಿ ಹೇಳಿದ್ದೇನು

06:00 AM Nov 08, 2017 | Team Udayavani |

ಹೊಸದಿಲ್ಲಿ/ಅಹ್ಮದಾಬಾದ್‌: ನೋಟು ಅಮಾನ್ಯಕ್ಕೆ ವರ್ಷ ತುಂಬುವ ಹೊತ್ತಲ್ಲೇ ಕೇಂದ್ರ ಸರಕಾರ, ವಿಪಕ್ಷಗಳ ನಡುವೆ ಕರಾಳ ಮತ್ತು ಕಪ್ಪು ವಿರೋಧಿ ದಿನ ಆಚರಣೆಯ ಸಮರ ಆರಂಭವಾಗಿದೆ.

Advertisement

ಪ್ರಧಾನಿ ನರೇಂದ್ರ ಮೋದಿ ಅವರು ಬುಧ ವಾರ (ನ.8)ಕ್ಕೆ  ಸರಿಯಾಗಿ ಒಂದು ವರ್ಷದ ಹಿಂದೆ 500 ಮತ್ತು 1,000 ರೂ. ಮುಖಬೆಲೆಯ ನೋಟುಗಳನ್ನು ಅಪಮೌಲ್ಯಗೊಳಿಸಿದ್ದರು. ಇದು ಕಪ್ಪು ಹಣ ಹೊಂದಿದವರ ಮೇಲಿನ ಸರ್ಜಿಕಲ್‌ ಸ್ಟ್ರೈಕ್‌ ಎಂದು ಸರಕಾರ ಬೆನ್ನುತಟ್ಟಿಕೊಂಡಿದ್ದರೆ, ಇದೊಂದು ಮಹಾ ತಪ್ಪು ಎಂದು ವಿಪಕ್ಷಗಳು ಸರಕಾರದ ಕಾಲನ್ನು ಎಳೆಯುತ್ತಲೇ ಬಂದಿವೆ.

ಈ ಮಧ್ಯೆ, ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರು, ಗುಜರಾತ್‌ನಲ್ಲಿ ಕಾಂಗ್ರೆಸ್‌ ಪರ ಚುನಾವಣ ಪ್ರಚಾರ ನಡೆಸಿ, ನೋಟು ಅಪಮೌಲ್ಯ ಮತ್ತು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದೇಶದ ಅರ್ಥ ವ್ಯವಸ್ಥೆಯನ್ನೇ ಹಾಳುಗೆಡವಿದೆ ಎಂದು ಆರೋಪಿಸಿದ್ದಾರೆ. ಈ ಘಟನೆಯಿಂದ ಪ್ರಧಾನಿ ಮೋದಿ ನೇತೃತ್ವದ ಸರಕಾರ ಯಾವ ಪಾಠವನ್ನೂ ಕಲಿತಿಲ್ಲ ಎಂದು ಟೀಕಿಸಿದ್ದಾರೆ. ಇನ್ನೊಂದೆಡೆ, ಸಿಂಗ್‌ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ವಿತ್ತ ಸಚಿವ ಜೇಟಿÉ, “ಲೂಟಿ ಎನ್ನುವುದು ನಡೆದದ್ದೇ ಯುಪಿಎ ಅವಧಿಯಲ್ಲಿ. ನೋಟು ಅಪಮೌಲ್ಯ, ಜಿಎಸ್‌ಟಿಯ ಪರಿಣಾಮಗಳು ನಮ್ಮ ಹಿಂದೆಯೇ ಇವೆ. ಪ್ರಗತಿಯು ಕಣ್ಣಿಗೆ ರಾಚುತ್ತಿದೆ’ ಎಂದಿದ್ದಾರೆ.

ಕರಾಳ ದಿನ ಮತ್ತು ಕಪ್ಪು ಹಣ ವಿರೋಧಿ ದಿನ
ಕೇಂದ್ರದ ಕ್ರಮ ವಿರೋಧಿಸಿ ಕಾಂಗ್ರೆಸ್‌ ನೇತೃತ್ವದಲ್ಲಿ 18 ಪಕ್ಷಗಳು ದೇಶಾದ್ಯಂತ ಬುಧವಾರ ಕರಾಳ ದಿನ ಆಚರಿಸಲಿವೆ. ಅದಕ್ಕೆ ಪ್ರತಿಯಾಗಿ ಆಡಳಿತಾರೂಢ ಬಿಜೆಪಿ ಕಪ್ಪು ಹಣ ವಿರೋಧಿ ದಿನ ಕೈಗೊಳ್ಳಲಿದೆ. 

ಮನಮೋಹನ್‌ ಸಿಂಗ್‌ ಹೇಳಿದ್ದು

Advertisement

– ಕೇಂದ್ರದ ನಿರ್ಧಾರದಿಂದಾಗಿ ಸಣ್ಣ ಮತ್ತು ಮಧ್ಯಮ ಉದ್ದಿಮೆದಾರರ ಬೆನ್ನೆಲುಬಿಗೇ ಆಘಾತ.
– ಸರಕಾರದ ಕೆಟ್ಟ ನಿರ್ಧಾರವನ್ನು ಜನರ ಮೇಲೆ ಹೇರಿಕೆ ಮಾಡಲಾಗಿದೆ.
– ಲಾಭ ಮತ್ತು ನಷ್ಟದ ಬಗ್ಗೆ ಪರಾಮರ್ಶೆಯನ್ನೇ ನಡೆಸದ ಕೇಂದ್ರ ಸರಕಾರ.
– ನ.8 ಭಾರತದ ಅರ್ಥ ವ್ಯವಸ್ಥೆಗೆ ಮತ್ತು ಪ್ರಜಾಪ್ರಭುತ್ವಕ್ಕೆ ಕಪ್ಪು ಚುಕ್ಕೆ.
– ನೋಟು ಅಪಮೌಲ್ಯ ಮತ್ತು ಜಿಎಸ್‌ಟಿ ನಿರ್ಧಾರಗಳು ಆತುರದ್ದವು.
– 25 ವರ್ಷ ಹಿಂದಕ್ಕೆ ಹೋದ ಖಾಸಗಿ ಕ್ಷೇತ್ರದವರ ಹೂಡಿಕೆ ಪ್ರಮಾಣ.
– ತಪ್ಪು ನಿರ್ಧಾರದಿಂದಾಗಿ ಸುಮಾರು 21 ಸಾವಿರ ಉದ್ಯೋಗ ನಷ್ಟ.
– ಇದರಿಂದ ರಾಜಕೀಯವಾಗಿ ಬೆನ್ನುತಟ್ಟಿಕೊಳ್ಳಲು ಮಾತ್ರ ಅವಕಾಶ.
– ನಿಜವಾಗಿ ತಪ್ಪು ಮಾಡಿದವರು ಪಾರಾಗಲು ದಾರಿ ತೋರಿಸಿದೆ.

ಅರುಣ್‌ ಜೇಟಿÉ  ಹೇಳಿದ್ದು
– ಲೂಟಿ ನಡೆದದ್ದೇ ಯುಪಿಎ ಅವಧಿಯಲ್ಲಿ.
– ಇದಕ್ಕೆ 2ಜಿ, ಕಾಮನ್‌ವೆಲ್ತ್‌ ಮತ್ತು ಕಲ್ಲಿದ್ದಲು ಹಗರಣಗಳೇ ಸಾಕ್ಷಿ.
– ಪ್ರಧಾನಿ ಮೋದಿ ಸರಕಾರ ಕೈಗೊಂಡ ನಿರ್ಧಾರ ನೈತಿಕವಾದದ್ದು’.
– ದೇಶದ ಅರ್ಥ ವ್ಯವಸ್ಥೆ ಸರಿಯಾಗಿ ಸಾಗಲು ಅದೊಂದು ದಿಕ್ಸೂಚಿ.
– ಬಿಜೆಪಿಗೆ ದೇಶ ಸೇವೆಯೇ ಆದ್ಯತೆ, ವಿಪಕ್ಷಕ್ಕೆ ಒಂದು ಕುಟುಂಬದ ಸೇವೆಯೇ ಆದ್ಯತೆ.
– ನಗದು ವಹಿವಾಟಿನಿಂದ ಭಾರೀ ಮಟ್ಟದ ತೆರಿಗೆ ವಂಚನೆ.
– ಪ್ರಾಮಾಣಿಕ ತೆರಿಗೆ ಪಾವತಿ ಮಾಡುವವರು ತೆರಿಗೆ ವಂಚಕರ ಪಾಲನ್ನೂ ಪಾವತಿಸಬೇಕಿತ್ತು.
– ತೆರಿಗೆ ಸಲ್ಲಿಸುವಿಕೆಯಲ್ಲಿ ಹೆಚ್ಚಳ ಮತ್ತು ಉಗ್ರರಿಗೆ ನೀಡುವ ಹಣಕಾಸು ನೆರವಿಗೆ ತಡೆ.
– ಆದಾಯಕ್ಕಿಂತ ಹೆಚ್ಚಿನ ಮೂಲಗಳಿಂದ ಲಾಭ ಬರುವ 18 ಲಕ್ಷ ಖಾತೆಗಳ ಪತ್ತೆ.

ಇ-ಫೈಲಿಂಗ್‌: ಶೇ.17 ಹೆಚ್ಚಳ
ನೋಟು ಅಪಮೌಲ್ಯದ ಬಳಿಕ ಇ-ಫೈಲಿಂಗ್‌ ಮೂಲಕ ತೆರಿಗೆ ರಿಟರ್ನ್ಸ್ ಸಲ್ಲಿಕೆ ಮಾಡಿದವರ ಪ್ರಮಾಣ ಶೇ.17ರಷ್ಟು ಹೆಚ್ಚಾಗಿದೆ. ವೈಯಕ್ತಿಕವಾಗಿ ತೆರಿಗೆ ಸಲ್ಲಿಸುವವರ ಸಂಖ್ಯೆ ಶೇ.23ರಷ್ಟು ಏರಿಕೆಯಾಗಿದೆ.  2017-18ನೇ ಸಾಲಿಗೆ ಸಂಬಂಧಿಸಿ ಅಕ್ಟೋಬರ್‌ ಅಂತ್ಯದ ವರೆಗೆ  3,78,20,889 ತೆರಿಗೆ ರಿಟರ್ನ್ಸ್ ಸಲ್ಲಿಕೆಯಾಗಿದೆ. 2016-17ನೇ ಸಾಲಿನಲ್ಲಿ 3,21,61,320 ರಿಟರ್ನ್ಸ್ ಸಲ್ಲಿಕೆಯಾಗಿದೆ.

ಒಂದು ಲಕ್ಷ ನೋಟಿಸ್‌ ನೀಡಿಕೆ
ಕಳೆದ ವರ್ಷದ ನ.8ರ ಬಳಿಕ ದೊಡ್ಡ ಮೊತ್ತದ ಠೇವಣಿ ಇರಿಸಿದ ವ್ಯಕ್ತಿಗಳು, ಸಂಸ್ಥೆಗಳಿಗೆ 1 ಲಕ್ಷಕ್ಕೂ ಅಧಿಕ ನೋಟಿಸ್‌ಗಳನ್ನು ಕೇಂದ್ರ ಆದಾಯ ತೆರಿಗೆ ಇಲಾಖೆ ನೀಡಲು ಮುಂದಾಗಿದೆ. ಈ ವಾರದಲ್ಲಿಯೇ ಕ್ರಮ ಆರಂಭವಾಗಲಿದೆ. ಮೊದಲ ಹಂತದಲ್ಲಿ 70 ಸಾವಿರ ವ್ಯಕ್ತಿ-ಸಂಸ್ಥೆಗಳಿಗೆ ನೀಡಲಾಗುತ್ತದೆ.

ನೇರ ತೆರಿಗೆ ಸಂಗ್ರಹ  ಹೆಚ್ಚಳ
ಹಾಲಿ ಹಣಕಾಸು ವರ್ಷದ ಏಳು ತಿಂಗಳ ಅವಧಿಯಲ್ಲಿ ಕೇಂದ್ರ ಸರಕಾರ 4.39 ಲಕ್ಷ ಕೋಟಿ ರೂ. ಮೊತ್ತವನ್ನು ನೇರ ತೆರಿಗೆ ಮೂಲಕ ಸಂಗ್ರಹಿಸಿದೆ. ಅದರಲ್ಲಿ ವೈಯಕ್ತಿಕ, ಕಾರ್ಪೊರೇಟ್‌ ತೆರಿಗೆ ಸೇರಿಕೊಂಡು ಶೇ.44.8ರಷ್ಟಾಗುತ್ತದೆ. 2017-18ನೇ ಸಾಲಿನಲ್ಲಿ ಮಂಡಿಸಲಾಗಿರುವ ಕೇಂದ್ರ ಬಜೆಟ್‌ನಲ್ಲಿ ನೇರ ತೆರಿಗೆಗಳ ಮೂಲಕ 9.8 ಲಕ್ಷ ಕೋಟಿ ರೂ. ಮೊತ್ತವನ್ನು ನೇರ ತೆರಿಗೆಗಳಿಂದ ಸಂಗ್ರಹಿಸುವುದಾಗಿ ಘೋಷಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next