ಕೋಸ್ಟಲ್‌ವುಡ್ ಸದ್ಯ ಯಾರೂ ನಿರೀಕ್ಷಿಸದ ಹಂತದಲ್ಲಿ “ಗಿರಿಗಿಟ್’ ರೂಪದಲ್ಲಿ ಸದ್ದು ಮಾಡುತ್ತಿದೆ. ಬೆಂಗಳೂರಿ ನಲ್ಲಿಯೂ ಹೌಸ್‌ಫುಲ್ ಪ್ರದರ್ಶನ. ಒಂದೊಮ್ಮೆ “ಸಪ್ಪೆ’ ಎಂದು ಗೋಗರೆದವರು ಕೂಡ ತುಳು ಸಿನೆಮಾದ ಬಗ್ಗೆ ಈಗ ಮಾತನಾಡುತ್ತಿದ್ದಾರೆ. ಅಷ್ಟರಮಟ್ಟಿಗೆ ತುಳು ಸಿನೆಮಾ ಇಂದು ಗೌರವ ಪಡೆದುಕೊಂಡಿದೆ. ಒಂದೊಳ್ಳೆ ಸಿನೆಮಾ ಮಾಡಿದರೆ ಅದನ್ನು ಆಲಿಂಗಿಸಿ-ಸ್ವಾಗತಿಸುವ ಪ್ರೇಕ್ಷಕರು ಇದ್ದಾರೆ ಎಂಬುದು ಇದರಿಂದ ಸ್ಪಷ್ಟವಾಗಿದೆ.
ತುಳು ಸಿನೆಮಾ ನೋಡದವರು ಕೂಡ ಗಿರಿಗಿಟ್ ನೋಡಿ ಇತರರನ್ನು ನೋಡುವಂತೆ ಪ್ರೇರೇಪಿಸುತ್ತಿದ್ದಾರೆ. ಎರಡನೇ ವಾರ ದಾಟಿದರೂ ಗಿರಿಗಿಟ್‌ನ ಬಹುತೇಕ ಶೋಗಳು ಹೌಸ್‌ಫುಲ್ ಕಾಣುತ್ತಿವೆ. ಮಲ್ಟಿಪ್ಲೆಕ್ಸ್ ನಲ್ಲಿ ಶೋಗಳ ಸಂಖ್ಯೆ ಕೂಡ ಏರಿಕೆ ಯಾಗುತ್ತಲೇ ಇದೆ. ಬೆಂಗಳೂರಿನಲ್ಲಿಯೂ ಮೊದಲ ಬಾರಿಗೆ ಶೋ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ.
ಅಂದಹಾಗೆ, ಸಕ್ಸಸ್ ಬರೆದ ನಿರ್ದೇಶಕ ರೂಪೇಶ್ ಶೆಟ್ಟಿ ಅವರ ಮುಂದಿನ ಯೋಚನೆ ಏನು? “ಗಿರಿಗಿಟ್’ ನಂತಹ ಸೂಪರ್ ಮೂವಿ ನೀಡಿದ ಅವರು ಮುಂದೆ ಏನು ಮಾಡಲಿದ್ದಾರೆ ಎಂಬ ಪ್ರಶ್ನೆ ಕಾಡುತ್ತಿದೆ. ಈ ಬಗ್ಗೆ “ಕುಡ್ಲ ಟಾಕೀಸ್’ ಜತೆಗೆ ರೂಪೇಶ್ ಶೆಟ್ಟಿ ಮಾತನಾಡಿದ್ದಾರೆ. ಅವರ ಅನಿಸಿಕೆ ಏನು ಎಂಬುದನ್ನು ಅವರ ಮಾತಲ್ಲೇ ಓದಿ..
“ಗಿರಿಗಿಟ್’ ಕೋಸ್ಟಲ್‌ವುಡ್‌ನಲ್ಲಿ ಹೊಸ ಅಧ್ಯಾಯ ಬರೆಯುವಂತಾಗಿದೆ. ದೇಶ-ವಿದೇಶದಲ್ಲಿಯೂ ಉತ್ತಮ ಸ್ಪಂದನೆ ಕಾಣುತ್ತಿದೆ. ದ.ಕ. ಉಡುಪಿ, ಬೆಂಗಳೂರು, ಶಿವಮೊಗ್ಗ ಹಾಗೂ ವಿದೇಶದಲ್ಲಿ ಸದ್ಯ ಇರುವ ಇಂತಹ ಮೂಡ್ ಅನ್ನು ಇನ್ನೂ ಹಲವು ದಿನ ಮುಂದುವರಿಸುವ ಅಗತ್ಯವಿದೆ. ಸಿನೆಮಾ ನೋಡದವರನ್ನು ಸಿನೆಮಾದತ್ತ ಕರೆತರುವ ಪ್ರಯತ್ನ ನಡೆಯಬೇಕಿದೆ. ಮುಂದಿನ ಹಲವು ದಿನಗಳವರೆಗೆ ಅದೇ ಕೆಲಸ ಮಾಡಲಿದ್ದೇನೆ. ಬಳಿಕ ನನ್ನದೇ ಅಭಿನಯದ ತುಳುವಿನ “ಲಾಸ್ಟ್‌ಬೆಂಚ್’ ಎಂಬ ಸಿನೆಮಾ ರಿಲೀಸ್ ಆಗಬೇಕಿದೆ. ಜತೆಗೆ ಕನ್ನಡದಲ್ಲಿ “ಮಂಕುಭಾಯಿ’ ಎಂಬ ಸಿನೆಮಾ ಕೂಡ ರಿಲೀಸ್ ಆಗಲಿದೆ. ಎರಡೂ ಸಿನೆಮಾಗಳ ಗೆಲುವಿಗಾಗಿ ಪ್ರಯತ್ನ ನಡೆಯಲಿದೆ. ಜತೆಗೆ, ಗಿರಿಗಿಟ್ ಸಕ್ಸಸ್ ಆಗಿರುವುದನ್ನು ಕಂಡು ಇದೇ ಟೀಮ್‌ನಲ್ಲಿ ವರ್ಷಕ್ಕೆ ಒಂದು ತುಳು ಸಿನೆಮಾ ಮಾಡಬೇಕು ಎಂಬ ಬಗ್ಗೆ ಯೋಚನೆಯಿದೆ. ತುಳುವಿನಲ್ಲಿ ವರ್ಷಕ್ಕೊಂದು ನೀಟ್ ಆದ ಸಿನೆಮಾವನ್ನು “ಗಿರಿಗಿಟ್’ ಟೀಮ್ ಮೂಲಕವೇ ಮಾಡುವ ಆಸೆ ಇದೆ’ ಎನ್ನುತ್ತಾರೆ ಅವರು.
ಬೆಂಗಳೂರಿನಲ್ಲಿಯೂ ಕುಡ್ಲದ “ಗಿರಿಗಿಟ್’!
ಗಿರಿಗಿಟ್ ಸದ್ಯ ಬೆಂಗಳೂರಿನಲ್ಲಿಯೇ ಬಹುದೊಡ್ಡ ಸದ್ದು ಮಾಡುತ್ತಿದೆ. ಯಾರೂ ಊಹಿಸದ ರೀತಿಯಲ್ಲಿ ಸಿನೆಮಾ ಯಶಸ್ವಿಯಾಗಿದೆ. ಕನ್ನಡಿಗರು ಕೂಡ ಗಿರಿಗಿಟ್ ನೋಡುವಂತಾಗಿದೆ. ಕರ್ನಾಟಕದ ಬಹುದೊಡ್ಡ ಸಿನೆಮಾ ವಿತರಕ ಸಂಸ್ಥೆ “ಜಯಣ್ಣ ಫಿಲಂಸ್’ ಗಿರಿಗಿಟ್ ರಿಲೀಸ್ ಮಾಡಿದ್ದು ವಿಶೇಷ. ಇದರ ಹಿನ್ನೆಲೆ ಏನು ಗೊತ್ತಾ… “ಸಾಹೋ’ ಬಹುಭಾಷೆಯ ಸಿನೆಮಾ. ರಾಜ್ಯಾದ್ಯಂತ ಇದರ ವಿತರಣೆಯ ಜವಾಬ್ದಾರಿಯನ್ನು ಜಯಣ್ಣ ಫಿಲಂಸ್ ಪಡೆದುಕೊಂಡಿತ್ತು. ಆದರೆ, ಮಂಗಳೂರಿನ ಮಲ್ಟಿಪ್ಲೆಕ್ಸ್‌ನಲ್ಲಿ ಸಾಹೋ ಬಿಡುಗಡೆಗೆ ಸರಿಯಾದ ಶೋ ಸಿಕ್ಕಿರಲಿಲ್ಲ. ಜತೆಗೆ, ಬುಕ್ ಮೈ ಶೋನಲ್ಲಿಯೂ ಗಿರಿಗಿಟ್ ರೇಟಿಂಗ್ ಶೇ.90 ಮೀರಿರುವುದನ್ನು ಕಂಡು ವಿತರಕರಿಗೆ ಕೊಂಚ ಸಮಸ್ಯೆ ಆಗಿತ್ತು. ಹಂಚಿಕೆ ಸಮಸ್ಯೆ ಎದುರಾದಾಗ ಚಿತ್ರತಂಡ ನಟ-ನಿರ್ದೇಶಕ ರಿಷಬ್ ಶೆಟ್ಟಿ ಅವರನ್ನು ಕೋರಿಕೊಂಡಿತು. ಅವರು ಜಯಣ್ಣ ಫಿಲಂಸ್ ಅವರನ್ನು ಕೇಳಿದರು. ಕುಡ್ಲದ ಗಿರಿಗಿಟ್ ಹವಾ ಮೊದಲೇ ತಿಳಿದುಕೊಂಡಿದ್ದ ಜಯಣ್ಣ ಫಿಲಂಸ್ ಬೆಂಗಳೂರಿನಲ್ಲಿ ಶೋ ನಡೆಸಲು ಮುಂದೆ ಬಂದಿದ್ದಾರೆ.
- ದಿನೇಶ್ ಇರಾ