Advertisement
ಕಳೆದ ಮೂರೂವರೆ ದಶಕಗಳಿಂದ ಹೋರಾಟ ಮಾಡುತ್ತಿದ್ದರೂ ಮಹದಾಯಿ, ಕಳಸಾ-ಬಂಡೂರಿ ನಾಲಾ ಯೋಜನೆಯಿಂದ ಒಂದು ಹನಿ ನೀರು ಕೂಡ ರಾಜ್ಯಕ್ಕೆ ಸಿಕ್ಕಿಲ್ಲ. ಆದರೆ ಮಲಪ್ರಭೆಯಿಂದ ವಾರ್ಷಿಕ ಸುಮಾರು ಒಂದು ಟಿಎಂಸಿ ಅಡಿಯಷ್ಟು ನೀರು ಮಾತ್ರ ಸರಾಗವಾಗಿ ಗೋವಾದ ಹೊಟ್ಟೆ ತುಂಬಿಸುತ್ತಿದೆ.
Related Articles
ಕುಡಿಯಲು ಹಾಗೂ ಕೈಗಾರಿಕೆ ಉದ್ದೇಶದೊಂದಿಗೆ ಮಲಪ್ರಭಾ ಜಲಾಶಯದ ಮೇಲಿನ ಅವಲಂಬನೆ ಹೆಚ್ಚುತ್ತಲೇ ಸಾಗಿದೆ. ಪ್ರಸ್ತುತ ಮಲಪ್ರಭಾ ಜಲಾಶಯದಿಂದ ಕುಡಿಯಲು ಹಾಗೂ ಇತರ ಉದ್ದೇಶಕ್ಕೆಂದು ಸುಮಾರು 2.1 ಟಿಎಂಸಿ ಅಡಿಯಷ್ಟು ನೀರು ನಿಗದಿಪಡಿಸಲಾಗಿದೆ. ಹುಬ್ಬಳ್ಳಿಯ ಕೆಲವು ಭಾಗಕ್ಕೆ ನೀರಿನ ಆಸರೆಯಾದ ನೀರಸಾಗರ ಜಲಾಶಯ 0.67 ಟಿಎಂಸಿ ಅಡಿಯಷ್ಟು ನೀರು ನೀಡುವ ಸಾಮರ್ಥ್ಯ ಹೊಂದಿದೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಮಲಪ್ರಭಾ ಹಾಗೂ ನೀರಸಾಗರ ಜಲಾಶಯವನ್ನೇ ಅವಲಂಬಿಸಿದ್ದು ಬಿಟ್ಟರೆ ಬೇರಾವ ಜಲಮೂಲವೂ ಇಲ್ಲವಾಗಿದೆ.
Advertisement
ಜತೆಗೆ ಮಲಪ್ರಭಾ ಜಲಾಶಯ ಸುಮಾರು 2.18 ಲಕ್ಷ ಹೆಕ್ಟೇರ್ ಪ್ರದೇಶದ ಕೃಷಿ ಭೂಮಿಗೂ ನೀರಾವರಿ ಸೌಲಭ್ಯ ಕಲ್ಪಿಸಬೇಕಾಗಿದೆ.2051ಕ್ಕೆ ಹುಬ್ಬಳ್ಳಿ-ಧಾರವಾಡದ ಜನಸಂಖ್ಯೆ 19.57 ಲಕ್ಷ ಎಂದು ಅಂದಾಜಿಸಲಾಗಿದ್ದು, ನಿತ್ಯ 391 ಎಂಎಲ್‌ಡಿಯಂತೆ ವಾರ್ಷಿಕ 5.05 ಟಿಎಂಸಿ ಅಡಿ ನೀರು ಬೇಕಾಗಲಿದೆ. ಇನ್ನು ಮಲಪ್ರಭಾ ವ್ಯಾಪ್ತಿಯ ಧಾರವಾಡ, ಗದಗ, ಬೆಳಗಾವಿ ಜಿಲ್ಲೆಗಳ 17 ಪಟ್ಟಣಗಳ ಒಟ್ಟು ಜನಸಂಖ್ಯೆ 9.88 ಲಕ್ಷ ಆಗಲಿದ್ದು, 2.17 ಟಿಎಂಸಿ ಅಡಿಯಷ್ಟು ಹಾಗೂ ಗ್ರಾಮೀಣದ ಜನಸಂಖ್ಯೆ 33.98 ಲಕ್ಷ ಆಗಲಿದ್ದು, 4.38 ಟಿಎಂಸಿ ಅಡಿಯಷ್ಟು ನೀರು ಬೇಕಾಗಲಿದೆ. 2051ರ ವೇಳೆಗೆ ಒಟ್ಟಾರೆ ಜಲಾಶಯದಿಂದ 11.59 ಟಿಎಂಸಿ ಅಡಿ ನೀರು ಬೇಕಾಗಲಿದೆ. ಹು-ಧಾದಲ್ಲಿ ಉದ್ಯಮ ವಲಯವೂ ಬೆಳವಣಿಗೆ ಕಾಣುತ್ತಿದ್ದು, 2051ರ ವೇಳೆಗೆ ಅಂದಾಜು 5 ಟಿಎಂಸಿ ಅಡಿಯಷ್ಟು ನೀರು ಬೇಕಾಗುತ್ತದೆ. ಅಲ್ಲಿಗೆ 2051ರ ವೇಳೆಗೆ ಒಟ್ಟಾರೆ ಕುಡಿಯುವ ಹಾಗೂ ಉದ್ಯಮದ ನೀರಿನ ಬೇಡಿಕೆ 16.59 ಟಿಎಂಸಿ ಅಡಿ ಆಗಲಿದ್ದು, ಪ್ರಸ್ತುತದ ನೀರಿನ ನೀಡಿಕೆ ಗಮನಿಸಿದರೆ ಸುಮಾರು 13.82 ಟಿಎಂಸಿ ಅಡಿಯಷ್ಟು ನೀರಿನ ಕೊರತೆ ಆಗಲಿದ್ದು, ಮಲಪ್ರಭಾ ಜಲಾಶಯಕ್ಕೆ ಇತರೆ ಜಲಮೂಲಗಳಿಂದ ನೀರು ಸೇರಿಸುವುದು ಅನಿವಾರ್ಯವಾಗಲಿದೆ. ಈ ಎಲ್ಲ ಅಂಶಗಳನ್ನು ಗಮನಿಸಿ ಸರ್ಕಾರ ಕಳಸಾ-ಬಂಡೂರಿ ನಾಲಾ ಯೋಜನೆ ಅನುಷ್ಠಾನಕ್ಕೆ ಗಂಭೀರ ಯತ್ನ ಕೈಗೊಳ್ಳಬೇಕು. ಅದಕ್ಕಿಂತಲೂ ತುರ್ತಾಗಿ ಮಲಪ್ರಭಾದಿಂದ ವಾರ್ಷಿಕವಾಗಿ ಒಂದು ಟಿಎಂಸಿ ಅಡಿಯಷ್ಟು ಹರಿದು ಹೋಗುತ್ತಿರುವ ನೀರು ತಡೆಗೆ ಕ್ರಮ ಕೈಗೊಳ್ಳಬೇಕಾಗಿದೆ. ನೀರು ಹರಿಯುತ್ತಿರುವುದು ಹೇಗೆ?
ಕಳಸಾ ನಾಲಾ ನೀರನ್ನು ಮಲಪ್ರಭಾಕ್ಕೆ ಸೇರಿಸಲೆಂದು ಸುಮಾರು 5.1 ಕಿಮೀ ದೂರದ ಕಾಲುವೆ ನಿರ್ಮಿಸಲಾಗಿದೆ. ಕಾಲುವೆಯಿಂದ ನೀರು ನದಿ ಸೇರಲೆಂದು ಮೂರು ಕಿಂಡಿಗಳಿವೆ. ಜತೆಗೆ ಕಾಲುವೆ ಮೇಲೆ ಮರಳು ಮತ್ತು ಮಣ್ಣಿನ ಗುಡ್ಡೆ ತುಂಬಿದ್ದು, ಬರುವ ನೀರು ಮರಳಿನ ರಾಶಿಯಲ್ಲಿ ಶೇಖರಣೆ ಆಗುತ್ತಿದೆ. ಕಾಲುವೆ ಮೇಲಿಂದ ಕೊಚ್ಚಿಕೊಂಡು ಬಂದ ಮರಳು ಮಲಪ್ರಭಾ ನದಿಯುದ್ದಕ್ಕೂ ತುಂಬಿಕೊಂಡಿದೆ. ಮಲಪ್ರಭಾ ನದಿ ಮಟ್ಟ ಕಳಸಾ ನಾಲೆಗಿಂತಲೂ ಮೇಲೆ ಇದ್ದು, ನೀರು ಮಲಪ್ರಭಾಕ್ಕೆ ಹರಿಯುವ ಬದಲು ಕಳಸಾ ನಾಲಾಕ್ಕೆ ಅಂತರ್ಜಲವಾಗಿ ಹರಿಯುತ್ತಿದೆ. ಮಲಪ್ರಭಾ ನದಿಯುದ್ದಕ್ಕೂ ಕೆಲವು ಕಿಮೀಗಳವರೆಗೆ ಮರಳು ತುಂಬಿಕೊಂಡಿದ್ದು, ಕಳಸಾ ನಾಲೆಯಿಂದ ಮಲಪ್ರಭಾಕ್ಕೆ ನೀರು ಹರಿಯಬೇಕೆಂದರೆ ನದಿಯುದ್ದಕ್ಕೂ ಇರುವ ಮರಳು ತೆಗೆಯಬೇಕಾಗಿದೆ. ಅದನ್ನು ತೆಗೆದರೂ ಅದು ಮತ್ತೆ ಶೇಖರಣೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ನಿವೃತ್ತ ಮುಖ್ಯ ಎಂಜಿನಿಯರ್ ಪಿ.ಎಸ್.ಕುದರಿ. ಮಲಪ್ರಭಾದಿಂದ ಕಳಸಾ ನಾಲಾಕ್ಕೆ ನೀರು ಹರಿಯುತ್ತಿರುವುದು ನಿಜ. ಅಂದಾಜು ಪ್ರಕಾರ ಸುಮಾರು 1 ಟಿಎಂಸಿ ಅಡಿಯಷ್ಟು ನೀರು ಹರಿದು ಹೋಗುತ್ತಿದೆ. ಇದನ್ನು ನನ್ನ ಅಧ್ಯಯನದ ಆಧಾರದಲ್ಲಿ ಹೇಳುತ್ತಿದ್ದೇನೆ. ಹೇಗೆ ಹರಿಯುತ್ತಿದೆ ಎಂಬುದನ್ನು ನಕ್ಷೆ ಸಮೇತ ವರದಿ ಸಿದ್ಧಪಡಿಸಿದ್ದೇನೆ. ಹರಿಯುವ ನೀರು ತಡೆ ನಿಟ್ಟಿನಲ್ಲಿ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ಚಿಂತಿಸಬೇಕು , ಸರ್ಕಾರ ತುರ್ತಾಗೆ ಇದರ ತಡೆಗೆ ಗಮನ ನೀಡಬೇಕು.
-ಪಿ.ಎಸ್.ಕುದರಿ, ನಿವೃತ್ತ ಮುಖ್ಯ ಎಂಜಿನಿಯರ್ ಕಳಸಾ-ಬಂಡೂರಿ ನಾಲಾ ಯೋಜನೆ ಬಗ್ಗೆ ಬಿಜೆಪಿ ಸರ್ಕಾರ ಗೊಂದಲ ಸೃಷ್ಟಿಸಿದ್ದು ಬಿಟ್ಟರೆ ಬೇರೇನೂ ಮಾಡಲಿಲ್ಲ. ನಾಲಾ ಯೋಜನೆಯ ಗೊಂದಲ ನಿವಾರಿಸುವ ಮೂಲಕ ಕಾಂಗ್ರೆಸ್ ಸರ್ಕಾರ ಕಾಮಗಾರಿ ಆರಂಭಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು. ಐದು ಗ್ಯಾರೆಂಟಿಗಳ ಮಾದರಿಯಲ್ಲಿ ಈ ಭಾಗದ ರೈತರಿಗೆ ಕಳಸಾ-ಬಂಡೂರಿ ನಾಲಾ ಯೋಜನೆ ನಮ್ಮ ಗ್ಯಾರಂಟಿ ಎಂಬ ವಿಶ್ವಾಸವನ್ನು ಕಾಂಗ್ರೆಸ್ ಸರ್ಕಾರ ಮೂಡಿಸುವ ಮೂಲಕ ಅನುಷ್ಠಾನಕ್ಕೆ ಇಚ್ಛಾಶಕ್ತಿ ತೋರಲಿ.
-ವಿಕಾಸ ಸೊಪ್ಪಿನ, ಮಹದಾಯಿ ಹೋರಾಟಗಾರ ಸರ್ಕಾರ-ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಈ ಹಿಂದೆ ನಿರ್ಮಿಸಿದ ತಡೆಗೋಡೆ ತೆಗೆಯಬೇಕು. ಕಾಮಗಾರಿ ನಿಟ್ಟಿನಲ್ಲಿ ಮಹದಾಯಿ ಪ್ರವಾಹ್ ಮುಂದೆ ಪ್ರಸ್ತಾವನೆ ಇರಿಸಿ ಒಪ್ಪಿಗೆ ಪಡೆಯಬೇಕು. ಮಹದಾಯಿ, ಕಳಸಾ-ಬಂಡೂರಿ ವಿಷಯವಾಗಿ ಜೂ.15ರ ನಂತರ ನಿಯೋಗ ತೆರಳಿ ಸಿಎಂ, ಜಲಸಂಪನ್ಮೂಲ ಸಚಿವರೊಂದಿಗೆ ಚರ್ಚಿಸಲಾಗುವುದು.
-ಶಂಕರಪ್ಪ ಅಂಬಲಿ, ರೈತಸೇನಾ-ಕರ್ನಾಟಕ ಮುಖಂಡ ಅಮರೇಗೌಡ ಗೋನವಾರ