Advertisement

ಪ್ಲಾಸ್ಟಿಕ್‌ ಬಳಸಿ 2 ಲಕ್ಷ ಕಿ.ಮೀ. ರಸ್ತೆ ನಿರ್ಮಾಣ

03:12 AM Jul 11, 2020 | Hari Prasad |

ಹೊಸದಿಲ್ಲಿ: ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣದ ವೇಳೆ, ಮರುಬಳಕೆ ಮಾಡಲಾಗದ ಪ್ಲಾಸ್ಟಿಕ್‌ ಅನ್ನು ಬಳಸಲಾಗುತ್ತಿದೆ.

Advertisement

ಈವರೆಗೆ 1 ಲಕ್ಷ ಕಿ.ಮೀ.ವರೆಗಿನ ರಸ್ತೆ ನಿರ್ಮಾಣದಲ್ಲಿ ಇಂಥ ಪ್ಲಾಸ್ಟಿಕ್‌ ಅನ್ನೇ ಬಳಸಲಾಗಿದೆ.

ಈ ವರ್ಷ 2 ಲಕ್ಷ ಕಿ.ಮೀ.ವರೆಗಿನ ರಸ್ತೆಯನ್ನು ಇಂಥ ಪ್ಲಾಸ್ಟಿಕ್‌ನಿಂದಲೇ ನಿರ್ಮಿಸುವ ಇರಾದೆಯನ್ನು ವಿವಿಧ ರಾಜ್ಯ ಸರಕಾರಗಳು ಹೊಂದಿದೆ ಎಂದು ‘ದ ಹಿಂದುಸ್ತಾನ್‌ ಟೈಮ್ಸ್‌’ ವರದಿ ಮಾಡಿದೆ.

ಇಂಥ ರಸ್ತೆಗಳ ಪ್ರತಿ ಒಂದು ಕಿ.ಮೀ. ನಿರ್ಮಾಣಕ್ಕೆ 9 ಟನ್‌ನಷ್ಟು ಡಾಂಬರ್‌ ಹಾಗೂ 1 ಟನ್‌ನಷ್ಟು ಪ್ಲಾಸ್ಟಿಕ್‌ ತ್ಯಾಜ್ಯ ಬೇಕಾಗುತ್ತದೆ. ಹೀಗಾಗಿ, ಸಾಮಾನ್ಯವಾಗಿ 1 ಕಿ.ಮೀ. ರಸ್ತೆ ನಿರ್ಮಾಣಕ್ಕೆ ಬೇಕಾಗುವ 10 ಟನ್‌ ಡಾಂಬರಿನಲ್ಲಿ 1 ಟನ್‌ನಷ್ಟು ಉಳಿತಾಯವಾಗುತ್ತದೆ. 1 ಟನ್‌ ಡಾಂಬರಿಗೆ 30 ಸಾವಿರ ರೂ. ಇದ್ದು, ಆ ಹಣ ಉಳಿತಾಯವಾಗುತ್ತದೆ. ಇಂಥ ಹೊಸ ಮಾದ ರಿಯ ರಸ್ತೆಗಳಲ್ಲಿ ಶೇ. 6ರಿಂದ 8ರಷ್ಟು ಪ್ಲಾಸ್ಟಿಕ್‌, ಶೇ. 92-94ರಷ್ಟು ಡಾಂಬರ್‌ ಇರುತ್ತದೆ.

2016ರಲ್ಲಿ ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ, 11 ರಾಜ್ಯಗಳಲ್ಲಿ ಸುಮಾರು 1 ಲಕ್ಷ ಕಿ.ಮೀ.ವರೆಗಿನ ರಸ್ತೆಗಳನ್ನು ಪ್ಲಾಸ್ಟಿಕ್‌ ತ್ಯಾಜ್ಯದಿಂದಲೇ ನಿರ್ಮಿಸುವುದಾಗಿ ತಿಳಿಸಿದ್ದರು. ಈ ವರ್ಷದಲ್ಲಿ 2 ಲಕ್ಷ ಕಿ.ಮೀ.ವರೆಗಿನ ರಸ್ತೆಗಳನ್ನು ನಿರ್ಮಿಸುವುದಾಗಿ ಅವರು ಹೇಳಿದ್ದಾರೆ.

Advertisement

ಎಲ್ಲೆಲ್ಲಿ ಸಾಕಾರವಾಗಿದೆ?: 2018ರಲ್ಲಿ ಗುರುಗ್ರಾಮ ಕಾರ್ಪೊರೇಷನ್‌ ಸಂಸ್ಥೆ ತನ್ನ ವ್ಯಾಪ್ತಿಯ ರಸ್ತೆಗಳಲ್ಲಿ ಪ್ಲಾಸ್ಟಿಕ್‌ ಬಳಕೆಗೆ ಮುಂದಾಗಿತ್ತು. ಈ ವರ್ಷ, ಅಸ್ಸಾಂ ಸರಕಾರ ಈ ಮಾದರಿಯ ರಸ್ತೆಗಳಿಗೆ ಕೈ ಹಾಕಿದೆ. ಜಮ್ಮು-ಕಾಶ್ಮೀರ ರಾಷ್ಟ್ರೀಯ ಹೆದ್ದಾರಿಯ ಸುಮಾರು 270 ಕಿ.ಮೀ.ವರೆಗಿನ ದೂರವನ್ನು ಪ್ಲಾಸ್ಟಿಕ್‌ ತ್ಯಾಜ್ಯದಿಂದಲೇ ನಿರ್ಮಿಸಲಾಗಿದೆ. ದಿಲ್ಲಿ ಹಾಗೂ ಮೀರತ್‌ ನಡುವಿನ ಹೆದ್ದಾರಿಯ 2 ಕಿ.ಮೀ.ವರೆಗಿನ ರಸ್ತೆಗೆ ಸುಮಾರು 1.6 ಟನ್‌ ಪ್ಲಾಸ್ಟಿಕ್ಕನ್ನು ಬಳಸಲಾಗಿದೆ.

ನಮ್ಮಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯ ಪ್ರಮಾಣವೆಷ್ಟು?
ಭಾರತದಲ್ಲಿ ದಿನನಿತ್ಯ 25,940 ಟನ್‌ನಷ್ಟು ಪ್ಲಾಸ್ಟಿಕ್‌ ತ್ಯಾಜ್ಯ ಸೃಷ್ಟಿಯಾಗುತ್ತದೆ. ಇದು 4,300 ಆನೆಗಳ ತೂಕಕ್ಕೆ ಸರಿಸಮಾನವಾದ ತ್ಯಾಜ್ಯ! ಇದರಲ್ಲಿ, ಶೇ. 60ರಷ್ಟು ತ್ಯಾಜ್ಯ ಮರುಬಳಕೆಗೆ ಒಳಗಾಗುತ್ತದೆ. ಉಳಿದ ಪ್ಲಾಸ್ಟಿಕ್‌, ಬಯಲು ಪ್ರದೇಶಗಳಲ್ಲಿ ಹರಡಲ್ಪಡುತ್ತದೆ.

ಮತ್ತೊಂದೆಡೆ, ಪ್ಲಾಸ್ಟಿಕ್‌ ಚರಂಡಿ, ನದಿಗಳ ಮೂಲಕ ಸಮುದ್ರ ಸೇರುತ್ತದೆ. ಮರುಬಳಕೆಯಾಗದ ಪ್ಲಾಸ್ಟಿಕ್ಕನ್ನು ಸುಟ್ಟರೆ ವಾಯುಮಾಲಿನ್ಯ ತಪ್ಪಿದ್ದಲ್ಲ. ಮತ್ತೂಂದೆಡೆ, ಮರುಬಳಕೆಯಾದ ಪ್ಲಾಸ್ಲಿಕ್‌ ಕೂಡ ಗುಣಮಟ್ಟದಿಂದ ಕೂಡಿರುವುದಿಲ್ಲ ಎಂದು ಕೇಂದ್ರ ಪರಿಸರ ಇಲಾಖೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next