Advertisement

ರೈಲ್ವೆ ಕೋಚ್ ಫ್ಯಾಕ್ಟರಿಗೆ ಸಿಕ್ಕ ಅನುದಾನ 1ಲಕ್ಷ!

11:50 AM Jul 12, 2019 | Team Udayavani |

ಕೋಲಾರ: ಜಿಲ್ಲೆಯ ರೈಲ್ವೆ ಬೇಡಿಕೆಗಳನ್ನು ಕೇಂದ್ರ ಬಜೆಟ್‌ನಲ್ಲಿ ಸಂಪೂರ್ಣವಾಗಿ ಕಡೆಗಣಿಸುವ ಮೂಲಕ ರೈಲ್ವೆ ಕೋಚ್ ಫ್ಯಾಕ್ಟರಿ ಹಾಗೂ ಇನ್ನಿತರ ಬೇಡಿಕೆಗಳಿಗೆ ಎಳ್ಳು ನೀರು ಬಿಡಲು ತಯಾರಿ ನಡೆಸಿದಂತಿದೆ.

Advertisement

ಇದೇ ಮೊದಲ ಬಾರಿಗೆ ಬಿಜೆಪಿ ಸಂಸದರನ್ನು ಗೆಲ್ಲಿಸಿಕೊಂಡ ಕೋಲಾರ ಜಿಲ್ಲೆಯ ಜನತೆ ಕೇಂದ್ರ ಬಜೆಟ್‌ನಲ್ಲಿ ಕೋಲಾರ ಜಿಲ್ಲೆ ಸ್ಮರಿಸಿಕೊಳ್ಳುವಂತೆ ಮಾಡುತ್ತದೆ ಎಂದು ನಿರೀಕ್ಷಿಸಿದ್ದು, ಬಜೆಟ್‌ನ ಪಿಂಕ್‌ ಬುಕ್‌ ವಿವರಗಳನ್ನು ನೋಡುತ್ತಿದ್ದಂತೆಯೇ ಠುಸ್‌ ಎನ್ನುವಂತಾಗಿದೆ.

ಕೋಚ್ ಫ್ಯಾಕ್ಟರಿಗೆ 1 ಲಕ್ಷ: ಕೇಂದ್ರ ಬಜೆಟ್‌ನಲ್ಲಿ ರೈಲ್ವೆ ಯೋಜನೆಗಳಿಗೆ ಏನೆಲ್ಲಾ ಅನುದಾನ ಮಂಜೂರು ಮಾಡಲಾಗಿದೆ ಎಂಬ ವಿವರಗಳನ್ನು ಪಿಂಕ್‌ ಬುಕ್‌ನಲ್ಲಿ ಪ್ರಕಟಿಸಲಾಗುತ್ತಿದ್ದು, ಈ ಸಾಲಿನ ಬಜೆಟ್‌ನ ಪಿಂಕ್‌ ಬುಕ್‌ನಲ್ಲಿ ಕೋಲಾರ ಜಿಲ್ಲೆಯ ಜನರ ಬಹು ಬೇಡಿಕೆ ರೈಲ್ವೆ ಕೋಚ್ ಫ್ಯಾಕ್ಟರಿಗೆ ಕೇವಲ 1 ಲಕ್ಷ ರೂ. ಅನುದಾನ ಇಡುವ ಮೂಲಕ ಕೇಂದ್ರ ಸರ್ಕಾರ ಯೋಜನೆಯನ್ನು ನಿರ್ಲಕ್ಷ್ಯಿಸಿದೆ.

ಹಿಂದೆ ಘೋಷಿಸಲ್ಪಟ್ಟ ಯೋಜನೆಗಳನ್ನು ಅನು ಷ್ಠಾನಗೊಳಿಸಲು ಬಜೆಟ್ ಮೂಲಕ ಎಷ್ಟು ಅನುದಾನ ನೀಡಲಾಗುತ್ತದೆ ಎಂಬುದನ್ನು ಪಿಂಕ್‌ ಪುಸ್ತಕ ನಿರೂಪಿಸುತ್ತಿದ್ದು, ಕೇವಲ 1 ಲಕ್ಷ ರೂ. ಅನುದಾನ ಇಡುವ ಮೂಲಕ ಕೋಲಾರ ರೈಲ್ವೆ ಕೋಚ್ ಫ್ಯಾಕ್ಟರಿ ಪ್ರಸಕ್ತ ಸಾಲಿನಲ್ಲಿಯೂ ಪ್ರಗತಿ ಕಾಣುವುದಿಲ್ಲ ಎನ್ನುವುದನ್ನು ಬಜೆಟ್ ಸಾಬೀತುಪಡಿಸಿದೆ.

ಉಳಿದ ಬೇಡಿಕೆಗಳ ಬಗ್ಗೆ ಚಕಾರವಿಲ್ಲ: ರೈಲ್ವೆ ಬಜೆಟ್‌ನ ಪಿಂಕ್‌ ಪುಸ್ತಕದಲ್ಲಿ ಕೋಲಾರ ಜಿಲ್ಲೆಯ ಇನ್ನಿತರ ರೈಲ್ವೆ ಬೇಡಿಕೆಗಳಾಗಿದ್ದ ಮುಳಬಾಗಿಲು ಕೋಲಾರ ದವರೆಗೂ ಹೊಸ ಮಾರ್ಗದ ಬಗ್ಗೆ ಚಕಾರವಿಲ್ಲ. ಕೋಲಾರದಿಂದ ವೈಟ್ಫೀಲ್ಡ್ ನಡುವಿನ 52.9 ಕಿ.ಮೀ ಹೊಸ ಮಾರ್ಗ, ಮಾರಿಕುಪ್ಪಂ-ಕುಪ್ಪಂ ನಡುವಿನ 23.7 ಕಿ.ಮೀ, ಚಿಕ್ಕಬಳ್ಳಾಪುರ-ಪುಟ್ಟಪರ್ತಿ ನಡುವಿನ 107 ಕಿ.ಮೀ ಹಾಗೂ ಶ್ರೀನಿವಾಸ ಪುರ-ಮದನಪಲ್ಲಿ ನಡುವಿನ 75 ಕಿ.ಮೀ ಹೊಸ ಮಾರ್ಗದ ಯೋಜನೆಗಳನ್ನು ಪಿಂಕ್‌ ಪುಸ್ತಕದಲ್ಲಿ ನಮೂದಿಸಲಾಗಿದೆ ಆದರೂ, ಈ ಯೋಜನೆಗಳಿಗೆ ನಿಗದಿಪಡಿಸಿರುವ ಅನುದಾನವನ್ನು ಬಜೆಟ್‌ನಲ್ಲಿ ಇಟ್ಟಿಲ್ಲ.

Advertisement

ಭೂಮಿಯೂ ನೀಡಿಲ್ಲ: ಹೊಸ ಮಾರ್ಗಗಳಿಗೆ ಸರ್ವೆ ಕಾರ್ಯ ಪೂರ್ಣಗೊಂಡಿದ್ದರೂ, ಹೊಸ ರೈಲ್ವೆ ಹಳಿಗಳನ್ನು ಅಳವಡಿಸಲು ಅಗತ್ಯವಿರುವ ಭೂಮಿ ಸ್ವಾಧೀನಪಡಿಸಲು ರಾಜ್ಯ ಸರ್ಕಾರ ಗಮನ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಭೂಮಿ ನೀಡಿಲ್ಲವೆಂದು ಕೇಂದ್ರ ಸರ್ಕಾರ, ಅನುದಾನ ನೀಡಿಲ್ಲವೆಂದು ರಾಜ್ಯ ಸರ್ಕಾರ ಪರಸ್ಪರ ದೂರಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆಯೇ ಹೊರತು ಹಿಂದಿನ ಘೋಷಿತ ಯೋಜನೆಗಳನ್ನು ಅನುಷ್ಟಾನಗೊಳಿಸಲು ಯಾವುದೇ ಪ್ರಾಮಾಣಿಕ ಪ್ರಯತ್ನ ನಡೆಯಲೇ ಇಲ್ಲ. ಇದರಿಂದ ಹೊಸ ರೈಲು ಮಾರ್ಗಗಳ ಯೋಜನೆ ನನೆಗುದಿಗೆ ಬಿದ್ದಂತೆಯೇ ಎಂದು ಅಂದಾಜಿಸಲಾಗುತ್ತಿದೆ.

ಪ್ರಯತ್ನಗಳು ಫ‌ಲ ಕೊಟ್ಟಿಲ್ಲ: ಜಿಲ್ಲೆಯ ರೈಲ್ವೆ ಕೋಚ್ ಫ್ಯಾಕ್ಟರಿ ಮತ್ತು ಇನ್ನಿತರ ರೈಲ್ವೆ ಬೇಡಿಕೆಗಳ ಕುರಿತಂತೆ ಸ್ಪೀಕರ್‌ ರಮೇಶ್‌ಕುಮಾರ್‌ ಮತ್ತು ಸಂಸದ ಎಸ್‌.ಮುನಿಸ್ವಾಮಿ ಇತರರು ಸಂಬಂಧಪಟ್ಟ ಸಚಿವರನ್ನು ಬಜೆಟ್ ಮುಂಚಿತವಾಗಿಯೇ ಭೇಟಿ ಮಾಡಿ ಮನವಿ ಸಲ್ಲಿಸಿದ್ದರು.

ಜೊತೆಗೆ ಬಿಜೆಪಿ ಸಂಸದರ ಆಯ್ಕೆಯಾಗಿದ್ದರಿಂದ ಕೋಲಾರದ ಯೋಜನೆಗಳ ಕುರಿತಂತೆ ಕೇಂದ್ರ ಸರ್ಕಾರ ಆದ್ಯತೆ ನೀಡುತ್ತದೆ ಎಂದು ಜನತೆ ನಿರೀಕ್ಷಿಸು ತ್ತಿದ್ದರು. ಆದರೆ, ಇವೆಲ್ಲಾ ನಿರೀಕ್ಷೆಗಳು ಹುಸಿಯಾಗು ವಂತಾಗಿದೆ.

ಏನು ಮಾಡಬೇಕು?: ಹಿಂದಿನ ಯುಪಿಎ ಸರ್ಕಾರದ ಬಜೆಟ್‌ನಲ್ಲಿ ಘೋಷಿಸಿದ್ದ ಕೋಲಾರದ ರೈಲ್ವೆ ಯೋಜನೆಗಳು ಇನ್ನೂ ಪಿಂಕ್‌ ಪುಸ್ತಕದಿಂದ ತೆಗೆದಿಲ್ಲವೆಂಬುದೇ ಸದ್ಯಕ್ಕೆ ಸಿಕ್ಕ ಸಮಾಧಾನವಾಗಿದೆ. ಈ ಯೋಜನೆಗಳು ಅನುಷ್ಠಾನಕ್ಕೆ ಬರಬೇಕಾದರೆ ಹಾಲಿ ಸಂಸದ ಎಸ್‌.ಮುನಿಸ್ವಾಮಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಮೇಲೆ ಒತ್ತಡ ಹೇರಿ, ಜಿಲ್ಲಾಡಳಿತ ರೈಲ್ವೆ ಯೋಜನೆಗಳನ್ನು ಅನುಷ್ಟಾನಗೊಳ್ಳಲು ಅಗತ್ಯಭೂಮಿ ಸ್ವಾಧೀನಪಡಿಸಿಕೊಡಬೇಕಾಗುತ್ತದೆ. ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡ ನಂತರ ಮುಂದಿನ ಕೇಂದ್ರ ಬಜೆಟ್‌ನಲ್ಲಿ ಕೋಲಾರ ಯೋಜನೆಗಳಿಗೆ ಅಗತ್ಯವಿರುವಷ್ಟು ಅನುದಾನವನ್ನು ಹಂತ ಹಂತವಾಗಿ ಬಿಡುಗಡೆ ಮಾಡಿಸಲು ರ್ವೆಲ್ವೆ ಸಚಿವರ ಮನವೊಲಿಸಬೇಕಾಗುತ್ತದೆ. ಈ ಪ್ರಯತ್ನವನ್ನು ಸಂಸದ ಎಸ್‌.ಮುನಿಸ್ವಾಮಿ ಪ್ರಾಮಾಣಿಕವಾಗಿ ಮಾಡದಿದ್ದರೆ ಕೋಲಾರದ ರೈಲ್ವೆ ಯೋಜನೆಗಳನ್ನು ಸಂಪೂರ್ಣವಾಗಿಯೇ ಪಿಂಕ್‌ ಬುಕ್‌ನಿಂದಲೂ ಕಿತ್ತು ಹಾಕಲಾಗುತ್ತದೆ. ಅಲ್ಲಿಗೆ ಕೋಲಾರದ ರೈಲ್ವೆ ಯೋಜನೆಗಳಿಗೆ ಎಳ್ಳು ನೀರು ಬಿಟ್ಟಂತಾಗುತ್ತದೆ.

 

● ಕೆ.ಎಸ್‌.ಗಣೇಶ್‌

Advertisement

Udayavani is now on Telegram. Click here to join our channel and stay updated with the latest news.

Next