Advertisement

ಉಭಯ ಜಿಲ್ಲೆಯ 1 ಲಕ್ಷ BPL ಕುಟುಂಬಕ್ಕೆ ಅನ್ನ ಭಾಗ್ಯದ ನಗದು ಸಿಗದು

10:58 PM Aug 04, 2023 | Team Udayavani |

ಉಡುಪಿ: ಅನ್ನಭಾಗ್ಯ ಯೋಜನೆಯಡಿ ರಾಜ್ಯ ಸರಕಾರ ಹೆಚ್ಚುವರಿ 5 ಕೆ.ಜಿ. ಅಕ್ಕಿ ಬದಲಿಗೆ ಅದರ ಮಾರುಕಟ್ಟೆ ಮೌಲ್ಯದ ನಗದನ್ನು ಬಿಪಿಎಲ್‌ ಕಾರ್ಡ್‌ದಾರರ ಕುಟುಂಬದ ಯಜಮಾನ/ಯಜಮಾನಿಯ ಬ್ಯಾಂಕ್‌ ಖಾತೆಗೆ ನೇರ ವರ್ಗಾವಣೆ ಮಾಡುವ ಪ್ರಕ್ರಿಯೆ ಆರಂಭವಾಗಿದೆ.

Advertisement

ಉಡುಪಿ ಜಿಲ್ಲೆಯ 41,327 ಹಾಗೂ ದ.ಕ. ಜಿಲ್ಲೆಯ 63,535 ಬಿಪಿಎಲ್‌/ಅಂತ್ಯೋದಯ ಕಾರ್ಡ್‌ದಾರರಿಗೆ ಜುಲೈ ತಿಂಗಳ ಯೋಜನೆಯ ಸೌಲಭ್ಯ ಅಲಭ್ಯ.

ಕಳೆದ ಮೂರು ತಿಂಗಳಿಂದ ಪಡಿತರ ಅಕ್ಕಿ ಪಡೆಯದೇ ಇರುವ ಉಡುಪಿಯ 7,634 ಕಾರ್ಡ್‌ದಾರರು, ದ.ಕ.ದ 8,815 ಕಾರ್ಡ್‌ದಾರರು, ಮೂವರು ಅಥವಾ ಅದಕ್ಕಿಂತ ಕಡಿಮೆ ಸದಸ್ಯರಿರುವ ಉಡುಪಿಯ 6,330, ದ.ಕ.ದ 6,134 ಅಂತ್ಯೋದಯ ಕಾರ್ಡ್‌ದಾರರು ಹಾಗೂ ಬ್ಯಾಂಕ್‌ ಖಾತೆ ಚಾಲ್ತಿಗೊಳಿಸದ ಉಡುಪಿಯ 27,363, ದ.ಕ.ದ 48,586 ಬಿಪಿಎಲ್‌ ಕಾರ್ಡ್‌ದಾದರಿಗೆ ಜುಲೈ ತಿಂಗಳ ನಗದು ಸೌಲಭ್ಯ ಸಿಗುವುದಿಲ್ಲ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರ ಇಲಾಖೆ ಸ್ಪಷ್ಟಪಡಿಸಿದೆ.
ಜಿಲ್ಲೆಯಲ್ಲಿ 1.97 ಲಕ್ಷ ಹಾಗೂ ದ.ಕ.ದಲ್ಲಿ 2.78 ಲಕ್ಷ ಬಿಪಿಎಲ್‌ ಕಾರ್ಡ್‌ ಹೊಂದಿರುವ ಕುಟುಂಬಗಳಿವೆ.

ಅದರಲ್ಲಿ ಉಡುಪಿಯ 1.56 ಲಕ್ಷ ಮತ್ತು ದ.ಕ.ದ 2.15 ಲಕ್ಷ ಬಿಪಿಎಲ್‌ ಕುಟುಂಬಕ್ಕೆ ಮೊದಲ ಹಂತದಲ್ಲಿ ರಾಜ್ಯ ಸರಕಾರದ ಅನ್ನಭಾಗ್ಯ ಯೋಜನೆಯ ನಗದು ಸಿಗಲಿದೆ. ಎರಡು ಜಿಲ್ಲೆಯ ಯೋಜನೆಗೆ ಅರ್ಹವಾಗಿರುವ ಅರ್ಹ ಬಿಪಿಎಲ್‌ ಕಾರ್ಡ್‌ನ ಮಾಹಿತಿಯನ್ನು ಇಲಾಖೆಯಿಂದ ಜಿಲ್ಲಾ ಕಚೇರಿಗೆ ರವಾನಿಸಲಾಗಿದೆ. ಬಿಪಿಎಲ್‌ ಕುಟುಂಬದ ಯಜಮಾನ/ಯಜಮಾನಿ ಬ್ಯಾಂಕ್‌ ಖಾತೆಗೆ ನಗದು ವರ್ಗಾವಣೆ ಪ್ರಕ್ರಿಯೆಯೂ ನಡೆಯುತ್ತಿದೆ.

29.71 ಕೋ.ರೂ. ಬಿಡುಗಡೆ
ಉಡುಪಿಯ 1.56 ಲಕ್ಷ ಬಿಪಿಎಲ್‌ ಕಾರ್ಡ್‌ದಾರರಿಗೆ ಹಂಚಿಕೆ ಮಾಡಲು 12.29 ಕೋ.ರೂ. ಬಿಡುಗಡೆ ಮಾಡಲಾಗಿದ್ದು ಅದರಲ್ಲಿ 11.38 ಕೋ.ರೂ. ವರ್ಗಾವಣೆ ಮಾಡಲಾಗಿದೆ. ದ.ಕ.ದ 2.15 ಲಕ್ಷ ಬಿಪಿಎಲ್‌ ಕಾರ್ಡ್‌ದಾರರಿಗೆ ಹಂಚಿಕೆ ಮಾಡಲು 17.42 ಕೋ.ರೂ. ಬಿಡುಗಡೆ ಮಾಡಿದ್ದು ಅದರಲ್ಲಿ 15.02 ಕೋ.ರೂ. ಹಂಚಿಕೆ ಮಾಡಲಾಗಿದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಕಳೆದ ಮೂರು ತಿಂಗಳಲ್ಲಿ ಜಿಲ್ಲೆಗಳಲ್ಲಿ ಸರಕಾರದಿಂದ ನೀಡುವ ಪಡಿತರ ತೆಗೆದುಕೊಳ್ಳದ ಕಾರ್ಡ್‌ದಾರರಿಗೆ ನಗದು ಹಂಚಿಕೆಯಾಗಿಲ್ಲ. ಈ ತಿಂಗಳಲ್ಲಿ ಅವರು ಅಕ್ಕಿ ತೆಗೆದುಕೊಂಡಲ್ಲಿ, ಮುಂದಿನ ತಿಂಗಳ ನಗದು ವರ್ಗಾವಣೆ ಸಂದರ್ಭ ಆ ಅರ್ಜಿಗಳನ್ನು ಪರಿಶೀಲಿಸಿ, ಸರಕಾರದ ನಿಯಮಾನುಸಾರ ಪರಿಗಣಿಸಲಾಗುತ್ತದೆ. ಆದರೆ, ಕೇಂದ್ರ ಸರಕಾರದಿಂದ ಬರುವ ಸದಸ್ಯರಿಗೆ ತಲಾ 5 ಕೆ.ಜಿ. ಅಕ್ಕಿ ಪಡೆಯಲು ಯಾವುದೇ ಷರತ್ತು ಇರುವುದಿಲ್ಲ. ಅದು ಯಥಾಪ್ರಕಾರ ಮುಂದುವರಿಯಲಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ಅಂತ್ಯೋದಯಕ್ಕೂ ಷರತ್ತು
ಮೂವರು ಸದಸ್ಯರಿರುವ ಅಂತ್ಯೋದಯ ಕಾರ್ಡ್‌ಗೆ ರಾಜ್ಯ ಸರಕಾರದಿಂದ ಅಕ್ಕಿ ಬದಲು ಹಣ ಸಿಗುವುದಿಲ್ಲ. 4 ಅಥವಾ ಅದಕ್ಕಿಂತ ಹೆಚ್ಚು ಸದಸ್ಯರಿರುವ ಅಂತ್ಯೋದಯ ಕಾರ್ಡ್‌ಗೆ ಅಕ್ಕಿ ಬದಲು ಹಣ ಸಿಗುತ್ತದೆ. 4 ಅಥವಾ ಅದಕ್ಕಿಂತ ಹೆಚ್ಚು ಸದಸ್ಯರಿರುವ ಅಂತ್ಯೋದಯ ಕಾರ್ಡ್‌ಗಳ ಸಂಖ್ಯೆಯು ಸಾಕಷ್ಟಿದೆ.

ಬ್ಯಾಂಕ್‌ ಖಾತೆ-ಆಧಾರ್‌ ಲಿಂಕ್‌ ಅಗತ್ಯ
ಬಿಪಿಎಲ್‌ ಕಾರ್ಡ್‌ ಜತೆಗೆ ಆಧಾರ್‌ ಲಿಂಕ್‌ ಮಾಡುವ ಕಾರ್ಯ ಶೇ.100ರಷ್ಟು ಪೂರ್ಣಗೊಂಡಿದೆ. ಆದರೆ, ಆಧಾರ್‌ ಜತೆಗೆ ಬ್ಯಾಂಕ್‌ ಖಾತೆ ಲಿಂಕ್‌ ಆಗಿರುವ ಬಗ್ಗೆ ಖಚಿತಪಡಿಸಿಕೊಳ್ಳದೇ ರೇಷನ್‌ ಕಾರ್ಡ್‌ ಜತೆಗೆ ಆಧಾರ್‌ ಲಿಂಕ್‌ ಮಾಡಿಸಿಕೊಂಡವರು ಅನೇಕರಿದ್ದಾರೆ. ಈಗ ಆಧಾರ್‌ ಜತೆಗೆ ಬ್ಯಾಂಕ್‌ ಖಾತೆ ಲಿಂಕ್‌ ಮಾಡುವುದು ಕಡ್ಡಾಯ ಮತ್ತು ಬ್ಯಾಂಕ್‌ ಖಾತೆ ನಿಷ್ಕ್ರಿಯವಾಗಿರಬಾರದು.

 

Advertisement

Udayavani is now on Telegram. Click here to join our channel and stay updated with the latest news.

Next