Advertisement

ಕೆಟ್ಟು ನಿಂತ ಲಾರಿಗೆ ಎಕ್ಸ್‌ಪ್ರೆಸ್‌ ಢಿಕ್ಕಿ ಓರ್ವ ಸಾವು, 6 ಗಂಭೀರ

10:25 AM Apr 01, 2017 | Team Udayavani |

ಮೂಲ್ಕಿ: ಇಲ್ಲಿನ ರಾ. ಹೆ. 66ರಲ್ಲಿ ಕೆಟ್ಟು ನಿಂತಿದ್ದ ಲಾರಿಗೆ ಖಾಸಗಿ ಎಕ್ಸ್‌ಪ್ರೆಸ್‌ ಬಸ್‌ ಢಿಕ್ಕಿಯಾಗಿ ಓರ್ವ ಸಾವಿಗೀಡಾಗಿದ್ದಾರೆ. ಬಸ್‌ನಲ್ಲಿದ್ದ 20 ಮಂದಿಗೆ ಗಾಯ ಗಳಾಗಿದ್ದು, ಇವರಲ್ಲಿ ಆರು ಮಂದಿಯ ಸ್ಥಿತಿ ಗಂಭೀರವಾಗಿದೆ.
ಮಂಗಳೂರಿನಿಂದ ಉಡುಪಿಗೆ ಸಾಗುತ್ತಿದ್ದ ಎಕ್ಸ್‌ಪ್ರೆಸ್‌ ಬಸ್‌ನಲ್ಲಿದ್ದ ನಾರಾವಿಯ ಈದುವಿನ ವಿಲ್ಸನ್‌ ಜಾಯ್‌ ಡಿ’ಸೋಜಾ (26) ಮೃತಧಿಪಟ್ಟವರು. ಅವರ ಕೈಯಲ್ಲಿದ್ದ ಪಾಸ್‌ಪೋರ್ಟ್‌ ಮೂಲಕ ಗುರುತು ಪತ್ತೆ ಹಚ್ಚಲಾಯಿತು. 

Advertisement

ಬೆಳಪುವಿನ ಗಣೇಶ್‌, ಉದ್ಯಾವರದ ರೊನಾಲ್ಡ್‌, ಶಿರ್ವ ಮಂಚಕಲ್‌ನ ಮಂಜುನಾಥ, ರಾಕೇಶ್‌, ಬಿನಿಸ್‌ಲಾಲ್‌, ಕಾರ್ಕಳ ಹಿರ್ಗಾನದ ಅಶೋಕ್‌ ಮುಕ್ಕ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಮರಳಿದ್ದಾರೆ. 

ಢಿಕ್ಕಿಯ ರಭಸಕ್ಕೆ ಬಸ್‌ನ ಅರ್ಧ ಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಡ್ರೈವರ್‌ನ ಪಕ್ಕದ ಸೀಟಿನಲ್ಲಿ ಕುಳಿತಿದ್ದ ವಿಲ್ಸನ್‌ ಅವರನ್ನು ಹೊರಗೆ ಎಳೆಯಲು ಹರಸಾಹಸ ಪಡಬೇಕಾಯಿತು.ಬಸ್‌ ಚಾಲಕ ಮತ್ತು ನಿರ್ವಾಹಕ ನಾಪತ್ತೆಯಾಗಿದ್ದರು.  

ಸಂಚಾರ ಅಸ್ತವ್ಯಸ್ತ
ಮೂಲ್ಕಿ ಕ್ಷೀರಸಾಗರ ಹಾಲಿನ ಸೊಸೈಟಿ ಸಮೀಪ ಶುಕ್ರವಾರ ಸಂಜೆ 8 ಗಂಟೆ ಸುಮಾರಿಗೆ ಸಂಭವಿಸಿದ ಅಪಘಾತದಿಂದ ಒಂದು ಗಂಟೆ ಸಮಯ ಸಂಚಾರ ಅಸ್ತವ್ಯಸ್ತಗೊಂಡಿತು.

ಲಾರಿ ರಿಪೇರಿಯಾಗುತ್ತಿತ್ತು
ಅಪರಾಹ್ನದಿಂದ ಕೆಟ್ಟು ನಿಂತಿದ್ದ ಲಾರಿಯ ದುರಸ್ತಿಗಾಗಿ ಉಡುಪಿಧಿಯಿಂದ ತಾಂತ್ರಿಕರು ಆಗಮಿಸಿ ಕೆಲಸ ನಡೆಸುತ್ತಿದ್ದಾಗಲೇ ಬಸ್‌ ಬಂದು ಢಿಕ್ಕಿಯಾಯಿತು. 

Advertisement

ಸಂಜೆಯ ವೇಳೆ ಆಗಿದ್ದರಿಂದ ದೈನಂದಿನ ಕೆಲಸ ಕಾರ್ಯ ಮುಗಿಸಿಕೊಂಡು ಮನೆಗೆ ಹೊರಟಿದ್ದ ಜನ ಬಸ್‌ನಲ್ಲಿದ್ದರು. ಕಾರ್ನಾಡು ಬೈಪಾಸ್‌ ಬಳಿ ಬ್ಯಾರಿಕೇಡ್‌ ಇದ್ದು ಅಲ್ಲಿ ನಿಧಾನಗೊಂಡಿದ್ದ ಬಸ್‌ ವೇಗ ಪಡೆದುಕೊಂಡು ಬರುತ್ತಿದ್ದಂತೆ ಯಾವುದೇ ಸಿಗ್ನಲ್‌ ಲೈಟ್‌ ಇಲ್ಲದೆ ನಿಂತಿದ್ದ ಲಾರಿಗೆ ಢಿಕ್ಕಿ ಹೊಡೆಯಿತು.

ಅಪರಾಹ್ನದಿಂದ ನಿಂತಿದ್ದ ಲಾರಿ
ಪಣಂಬೂರಿನಿಂದ ಉಡುಪಿಗೆ ಸಿಮೆಂಟ್‌ ಹೇರಿಕೊಂಡು ಹೊರಟಿದ್ದ ಲಾರಿ ಮೂಲ್ಕಿ ಬಳಿ ಅಪರಾಹ್ನ ಕೆಟ್ಟು ನಿಂತಿತ್ತು. ಲಾರಿ ಪೂರ್ತಿ ಲೋಡ್‌ ಇದ್ದುದರಿಂದ ಅದನ್ನು ತತ್‌ಕ್ಷಣಕ್ಕೆ ಸರಿಸಲು ಅಸಾಧ್ಯವಾಗಿ ಅದು ಹೆದ್ದಾರಿಯ ನಡುವೆಯೇ ಸ್ಥಗಿತಗೊಂಡಿತ್ತು. ಚಾಲಕ ತಾಂತ್ರಿಕರನ್ನು ಹುಡುಕಿ ಸಂಜೆ ವೇಳೆಗೆ ಉಡುಪಿಯಿಂದ ಕರೆಸಿದ್ದರು. ಅವರು ದುರಸ್ತಿ ಕಾರ್ಯ ನಡೆಸುತ್ತಿದ್ದಾಗಲೇ ದುರಂತ ಸಂಭವಿಸಿತು.

ಸ್ಥಳೀಯರ ಸಹಕಾರ
ಅಪಘಾತ ಸಂಭವಿಸಿದ ಶಬ್ದ ಕೇಳಿದ ಕೂಡಲೇ ಸ್ಥಳೀಯರು ಧಾವಿಸಿ ಬಂದಿದ್ದರು. ಹೆದ್ದಾರಿ ಬದಿಯಲ್ಲಿಯೇ ಇದ್ದ ಪೂಜಾ ಕೇಟರರ್ ಸಂಸ್ಥೆಧಿಯವರು ತಮ್ಮ ಜೀಪ್‌ನಲ್ಲಿಯೇ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದರು. ಸ್ಥಳೀಯವಾಗಿ ಆ್ಯಂಬುಲೆನ್ಸ್‌ ಸಿಗದೇ ಇದ್ದಾಗ ಹಳೆಯಂಗಡಿಯಲ್ಲಿರುವ ಉಚಿತ ಸೇವಾ ಆ್ಯಂಬುಲೆನ್ಸ್‌ ಅನ್ನು ಅವರೇ ಕರೆಸಿ ನೆರವಾಗಿದ್ದರು.

ಆಪತ್ಕಾಲಕ್ಕೆ ಸಿಗದ ಆ್ಯಂಬುಲೆನ್ಸ್‌
ಮೂಲ್ಕಿಯಲ್ಲಿ 108 ಆ್ಯಂಬುಲೆನ್ಸ್‌ ಇದೆಯಾದರೂ ಅದು ದುರಸ್ತಿಯಲ್ಲಿದ್ದರಿಂದ ಆಪತ್ಕಾಲಕ್ಕೆ ಸಿಗಲಿಲ್ಲ. ಹೆಜಮಾಡಿಯಲ್ಲಿರುವ ನವಯುಗ ಟೋಲ್‌ಗೇಟ್‌ನವರ ಆ್ಯಂಬುಲೆನ್ಸ್‌ ಬಳಿಕ ಸ್ಥಳಕ್ಕೆ ಬಂದರೂ ಅಷ್ಟರಲ್ಲಾಗಲೇ ಗಾಯಾಳುಗಳನ್ನು ಮುಕ್ಕದಲ್ಲಿರುವ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿತ್ತು.

ಉರಿಯದ ದಾರಿದೀಪ
ಹೆದ್ದಾರಿಯ ಈ ಭಾಗದಲ್ಲಿನ ದಾರಿದೀಪ ಕೂಡ ಶುಕ್ರವಾರ ಉರಿಯುತ್ತಿರಲಿಲ್ಲ. ಆದುದರಿಂದ ಬಸ್‌ ಚಾಲಕನಿಗೆ ರಸ್ತೆ ಮಧ್ಯೆ ನಿಂತಿದ್ದ ಲಾರಿ ಕಾಣಿಸದೆ ಇರಬಹುದು ಎಂದು ಸ್ಥಳೀಯರು ಅಭಿಪ್ರಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next