Advertisement

12 ನಿಮಿಷಗಳಿಗೆ 1 ಸಾವು; ಇದು ಮಹಾರಾಷ್ಟ್ರದ ದುಸ್ಥಿತಿ

10:44 AM Jun 11, 2020 | mahesh |

ಮುಂಬಯಿ/ಹೊಸದಿಲ್ಲಿ: ಪ್ರತಿ 12 ನಿಮಿಷಗಳಿಗೆ ಒಂದು ಸಾವು… ಪ್ರತಿ ಗಂಟೆಗೆ 94 ಮಂದಿಗೆ ಸೋಂಕು! ಇದು ದೇಶದ ಕೋವಿಡ್ ಹಾಟ್‌ ಸ್ಪಾಟ್‌ ಆಗಿ ಗುರುತಿಸಿಕೊಂಡಿರುವ ಮಹಾರಾಷ್ಟ್ರದ ಸ್ಥಿತಿ. ಕೋವಿಡ್ ಎಂಬ ಅಗೋಚರ ವೈರಸ್‌ ರಾಜ್ಯಕ್ಕೆ ಪ್ರವೇಶ ಪಡೆದು ಬುಧವಾರಕ್ಕೆ ಸರಿಯಾಗಿ 90 ದಿನಗಳು ತುಂಬುತ್ತಿರುವಂತೆಯೇ, ಇಲ್ಲಿನ ಸೋಂಕಿತರ ಸಂಖ್ಯೆ 91 ಸಾವಿರದ ಗಡಿ ದಾಟಿದೆ. 14 ದಿನಗಳಿಂದ ಮಹಾರಾಷ್ಟ್ರದಲ್ಲಿ ಪ್ರತಿದಿನ ಸರಾಸರಿ 75 ಮಂದಿ ಕೋವಿಡ್ ಗೆ ಬಲಿಯಾಗುತ್ತಿದ್ದು, 2 ಸಾವಿರಕ್ಕೂ ಅಧಿಕ ಮಂದಿಗೆ ಸೋಂಕು ತಗುಲುತ್ತಿದೆ. ಯುನೈಟೆಡ್‌ ಕಿಂಗ್‌ಡಮ್‌ಗಿಂತಲೂ ಹೆಚ್ಚಿನ ದರದಲ್ಲಿ ಮಹಾರಾಷ್ಟ್ರದಲ್ಲಿ ಹೊಸ ಪ್ರಕರಣಗಳು ಪತ್ತೆಯಾಗುತ್ತಿವೆ. ರಾಜ್ಯದ ಒಟ್ಟಾರೆ ಸೋಂಕಿತರ ಸಂಖ್ಯೆ ಹಾಗೂ ಸಾವುಗಳನ್ನು ಪರಿಗಣಿಸಿದರೆ, ಇಲ್ಲಿ ಪ್ರತಿ 12 ನಿಮಿಷಗಳಿಗೆ ಒಂದು ಸಾವು ಸಂಭವಿಸುತ್ತಿದ್ದು, ಪ್ರತಿ ಗಂಟೆಗೆ ಸರಾಸರಿ 94 ಮಂದಿ ಸೋಂಕಿತರಾಗುತ್ತಿದ್ದಾರೆ.

Advertisement

ರಾಜ್ಯದಲ್ಲಿ ಬುಧವಾರ ಸೋಂಕಿತರ ಸಂಖ್ಯೆ 94 ಸಾವಿರದ ಗಡಿ ದಾಟಿದೆ. ಸಾವಿನ ಸಂಖ್ಯೆ 3,200 ದಾಟಿದೆ. ಮಂಗಳವಾರ ಬೆಳಗ್ಗೆ 8ರಿಂದ ಬುಧವಾರ ಬೆಳಗ್ಗೆ 8ರವರೆಗಿನ ಅವಧಿಯಲ್ಲಿ 120 ಮಂದಿ ಸಾವಿಗೀಡಾಗಿದ್ದಾರೆ. ಇಡೀ ದೇಶದ ಒಟ್ಟಾರೆ ಸೋಂಕಿತರ ಪೈಕಿ ಮಹಾರಾಷ್ಟ್ರದ ಪ್ರಮಾಣವೇ ಶೇ.31ರಷ್ಟಿದೆ. ಇಲ್ಲಿ ಮರಣ ಪ್ರಮಾಣ ಶೇ.3.60ರಷ್ಟಿದೆ. ಗುಣಮುಖ ಪ್ರಮಾಣ ಶೇ.46.96ರಷ್ಟಿರುವುದೇ ಸಮಾಧಾನದ ಸಂಗತಿ. ಇದೇ ವೇಳೆ, ಮಹಾರಾಷ್ಟ್ರದಲ್ಲಿ ಕಂಟೈನ್ಮೆಂಟ್‌ ವಲಯಗಳ ಸಂಖ್ಯೆ 3,750ಕ್ಕೇರಿಕೆಯಾಗಿದೆ.

ಸಾಮುದಾಯಿಕವಾಗಿ ವ್ಯಾಪಿಸಿಲ್ಲ: ದಿಲ್ಲಿಯ ಬೆನ್ನಲ್ಲೇ ಮಹಾರಾಷ್ಟ್ರದಲ್ಲೂ ಸೋಂಕು ಸಾಮುದಾಯಿಕವಾಗಿ ವ್ಯಾಪಿಸಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಈ ಕುರಿತು ಸ್ಪಷ್ಟನೆ ನೀಡಿರುವ ರಾಜ್ಯ ಆರೋಗ್ಯ ಸಚಿವ ರಾಜೇಶ್‌ ಟೋಪೆ, ರಾಜ್ಯದಲ್ಲಿ ಕೆಲವರಿಗೆ ಇಂಥದ್ದೊಂದು ಸಂದೇಹವಿದೆ. ಆದರೆ, ನಮ್ಮ ರಾಜ್ಯದಲ್ಲಿ ವೈರಸ್‌ ಸಾಮುದಾಯಿಕವಾಗಿ ವ್ಯಾಪಿಸಿಲ್ಲ. ಇಲ್ಲಿನ ಪ್ರತಿಯೊಂದು ಪ್ರಕರಣದ ಮೂಲವನ್ನೂ ಪತ್ತೆಹಚ್ಚಿದ್ದೇವೆ ಎಂದು ಹೇಳಿದ್ದಾರೆ.

ಚಿಕಿತ್ಸೆಗೆ ನಿರಾಕರಿಸುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಮ
ಕೇಂದ್ರ ಸರಕಾರದ ಆರೋಗ್ಯ ಯೋಜನೆ (ಸಿಜಿಎಚ್‌ಎಸ್‌) ಅಳವಡಿಕೆಯಾದ ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ, ಇತರೆ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ನಿರಾಕರಿಸಲಾಗುತ್ತಿದೆ ಎಂಬ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. ಇಂಥ ಆಸ್ಪತ್ರೆ ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಕೇಂದ್ರ ಆರೋಗ್ಯ ಸಚಿವಾಲಯ ತೀರ್ಮಾನಿಸಿದೆ. ಸಿಜಿಎಚ್‌ಎಸ್‌ ಯೋಜನೆಗೆ ನೊಂದಾಯಿಸಿಕೊಂಡ ಆಸ್ಪತ್ರೆಗಳಲ್ಲಿ ರೋಗಿಗಳು ಎದುರಿಸು ತ್ತಿರುವ ತೊಂದರೆಗಳನ್ನು ಪರಿಶೀಲಿಸಿದ ಬಳಿಕ ಸಚಿವಾಲಯ ಈ ನಿರ್ಧಾರಕ್ಕೆ ಬಂದಿದೆ. ಸಿಜಿಎಚ್‌ಎಸ್‌ಗೆ ಅಳವಡಿಕೆಯಾದ ಎಲ್ಲ ಖಾಸಗಿ ಆಸ್ಪತ್ರೆಗಳು ಕೊರೊನಾ ಚಿಕಿತ್ಸಾ ಕೇಂದ್ರಗಳೆಂದು ಕೇಂದ್ರ ತೀರ್ಮಾನಿಸಿದೆ. ಆಯಾ ರಾಜ್ಯ ಸರಕಾರಗಳು ಕೊರೊನಾ ಸೋಂಕಿತರಿಗೆ ಸಿಜಿಎಚ್‌ಎಸ್‌ ಅಡಿಯಲ್ಲಿ ಸಿಗುವ ಪ್ರಯೋಜನಗಳನ್ನು ತಲುಪಿಸಬೇಕು ಎಂದು ಆದೇಶಿಸಿದೆ.

ನಮ್ಮಲ್ಲಿ ಮರಣ ಪ್ರಮಾಣ ಕಡಿಮೆಯಿದೆ
ಕೋವಿಡ್ ದಿಂದ ಸಂಕಷ್ಟಕ್ಕೀಡಾದ ದೇಶಗಳಿಗೆ ಹೋಲಿ ಸಿದರೆ ಭಾರತವು ಎಷ್ಟೋ ಉತ್ತಮ ಸ್ಥಿತಿಯಲ್ಲಿದೆ. ನಮ್ಮ ದೇಶದಲ್ಲಿ ಮರಣ ಪ್ರಮಾಣವು ಅತ್ಯಂತ ಕಡಿಮೆಯಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್‌ ಹೇಳಿದ್ದಾರೆ. ಬುಧವಾರ ಭಗವಾನ್‌ ಮಹಾವೀರ್‌ ವಿಶ್ವವಿದ್ಯಾಲಯವು ಆಯೋಜಿಸಿದ್ದ ವೆಬಿನಾರ್‌ನಲ್ಲಿ ಅವರು ಮಾತನಾಡಿದರು. “ಜನವರಿ 7ರಂದು ಚೀನಾವು ಕೊರೊನಾ ವೈರಸ್‌ ಕುರಿತಂತೆ ಮಾಹಿತಿ ನೀಡಿದ ಕೂಡಲೇ ಭಾರತ ಸರಕಾರ ಎಚ್ಚೆತ್ತುಕೊಂಡು, ಕ್ರಮ ಕೈಗೊಳ್ಳಲು ಆರಂಭಿಸಿತು. ಸರಕಾರ ಸೂಕ್ತ ಕ್ರಮ ಕೈಗೊಂಡ ಕಾರಣ, ದೇಶದಲ್ಲಿ ಸೋಂಕಿನ ಸಾವು-ನೋವು ಕಡಿಮೆಯಾಗಿದೆ. 130 ಕೋಟಿ ಜನಸಂಖ್ಯೆಯಿರುವ ನಮ್ಮ ದೇಶದಲ್ಲಿ 2.5 ರಿಂದ 3 ಲಕ್ಷದಷ್ಟು ಮಂದಿಗೆ ಮಾತ್ರ ಸೋಂಕು ತಗುಲಿದೆ. ಆರಂಭದಲ್ಲಿ 3 ದಿನಗಳಾಗಿದ್ದ ಸೋಂಕು ದ್ವಿಗುಣಗೊಳ್ಳುವ ಅವಧಿ ಈಗ 16 ದಿನಗಳಿಗೆ ಏರಿಕೆಯಾಗಿದೆ. ಬೇರೆ ದೇಶಗಳಿಗೆ ಹೋಲಿಸಿದರೆ ಮರಣ ಪ್ರಮಾಣವೂ ಕಡಿಮೆಯಿದೆ ಎಂದು ಮಾಹಿತಿ ನೀಡಿದ್ದಾರೆ. ಜತೆಗೆ, ಪ್ರಸ್ತುತ ಈ ಸೋಂಕಿಗಿರುವ ಏಕೈಕ ಲಸಿಕೆಯೆಂದರೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಮತ್ತು ಮಾಸ್ಕ್ ಧರಿಸುವುದು’ ಎಂದರು.

Advertisement

ಯು.ಕೆ. ಮೀರಿಸಲಿದೆ ಭಾರತ ಸೋಂಕು?
ಭಾರತದಲ್ಲಿ ಎಂಟು ದಿನಗಳಿಂದಲೂ ಪ್ರತಿ ದಿನ 10 ಸಾವಿರದಷ್ಟು ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಸೋಂಕಿನ ವ್ಯಾಪಿಸುವಿಕೆಯ ವೇಗ ನೋಡಿದರೆ ಶೀಘ್ರವೇ ಯು.ಕೆ.ಯನ್ನು ಮೀರಿಸುವ ಸಾಧ್ಯತೆ ದಟ್ಟವಾಗಿದೆ. ಬುಧವಾರ ದೇಶಾದ್ಯಂತ ಸೋಂಕಿತರ ಸಂಖ್ಯೆ 2.76 ಲಕ್ಷ ದಾಟಿದೆ. ಯುನೈಟೆಡ್‌ ಕಿಂಗ್‌ಡಮ್‌ನಲ್ಲಿಯೂ ಸೋಂಕಿತರ ಸಂಖ್ಯೆ 2.87 ಲಕ್ಷ ದಾಟಿದೆ. ಅಂದರೆ, ಭಾರತವು ಯು.ಕೆ.ಗಿಂತ ಕೇವಲ 11 ಸಾವಿರ ಪ್ರಕರಣಗಳಿಂದ ಹಿಂದಿದೆ. ಅಲ್ಲದೆ, ಯು.ಕೆ.ಯಲ್ಲಿ ದೈನಂದಿನ ಸೋಂಕಿನ ಪ್ರಮಾಣ ಇಳಿಮುಖವಾಗುತ್ತಿದ್ದು, ಮಂಗಳವಾರ ಕೇವಲ 1300 ಪ್ರಕರಣಗಳಷ್ಟೇ ಪತ್ತೆಯಾಗಿವೆ. ಆದರೆ, ಭಾರತದಲ್ಲಿ ಮಂಗಳವಾರದಿಂದ ಬುಧವಾರಕ್ಕೆ 24 ಗಂಟೆಗಳ ಅವಧಿಯಲ್ಲಿ 9,985 ಹೊಸ ಪ್ರಕರಣ ಪತ್ತೆಯಾಗಿ, 279 ಮಂದಿ ಸಾವಿಗೀಡಾಗಿದ್ದಾರೆ. ಗಮನಾರ್ಹ ಅಂಶವೆಂದರೆ, ಮರಣ ಪ್ರಮಾಣದಲ್ಲಿ ಭಾರತವು ಯು.ಕೆ.ಗಿಂತ ಹಿಂದೆ ಇದೆ. ಅಲ್ಲಿ ಈವರೆಗೆ 40,597 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಆದರೆ, ಭಾರತದಲ್ಲಿ 7,700 ಮಂದಿ ಅಸುನೀಗಿದ್ದಾರೆ.

ವೈರಸ್‌ನ ಅಪಾಯ ಇನ್ನೂ ತಗ್ಗಿಲ್ಲ. ಉದ್ದಿಮೆಗಳು, ಇತರೆ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಲೆಂದಷ್ಟೇ ನಿರ್ಬಂಧ ಸಡಿಲಿಸಲಾಗಿದೆ. ನಿಮ್ಮ ಆರೋಗ್ಯ ಸದೃಢವಾಗಿರಲೆಂದು ಬಾಹ್ಯ ಶಾರೀರಿಕ ಚಟುವಟಿಕೆಗಳಿಗೆ ಅನುಮತಿ ನೀಡಿದ್ದೇವೆಯೇ ಹೊರತು ಆರೋಗ್ಯ ಹಾಳುಮಾಡಿಕೊಳ್ಳಲಿ ಎಂದಲ್ಲ. ಈ ವಿಷಯವನ್ನು ದಯವಿಟ್ಟು ಎಲ್ಲರೂ ಅರಿತುಕೊಳ್ಳಿ.
ಉದ್ಧವ್‌ ಠಾಕ್ರೆ, ಮಹಾರಾಷ್ಟ್ರ ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next