Advertisement

ಪಾಲಿಕೆ ಬಜೆಟ್‌ನಲ್ಲಿ ಕ್ರೀಡೆಗೆ 1 ಕೋಟಿ ಮೀಸಲು

01:20 PM Feb 25, 2017 | Team Udayavani |

ದಾವಣಗೆರೆ: ವೇಟ್‌ ಲಿಫ್ಟಿಂಗ್‌, ಕುಸ್ತಿ ಒಳಗೊಂಡಂತೆ ಹಲವಾರು ಕ್ರೀಡೆಗಳಿಗೆ ಇನ್ನೂ ಹೆಚ್ಚಿನ ಮಟ್ಟದ ಪ್ರೋತ್ಸಾಹ, ಸಹಕಾರ ನೀಡುವ ಉದ್ದೇಶದಿಂದ ಈ ಬಾರಿಯ ಬಜೆಟ್‌ನಲ್ಲಿ 1 ಕೋಟಿ ಅನುದಾನ ಮೀಸಲಿಡಲಾಗುವುದು ಎಂದು ಮೇಯರ್‌ ರೇಖಾ ನಾಗರಾಜ್‌ ಭರವಸೆ ನೀಡಿದ್ದಾರೆ. 

Advertisement

ಶುಕ್ರವಾರ ದಾವಣಗೆರೆ ಐರನ್‌ ನ್ಪೋಟ್‌ ಅಂಡ್‌ ಕಲ್ಚರಲ್‌ ಸೆಂಟರ್‌ನಿಂದ ಆಯೋಜಿಸಿರುವ ದಕ್ಷಿಣ ಭಾರತ ಮಟ್ಟದ ಪುರುಷರ, ಮಹಿಳೆಯರ ವೇಟ್‌ ಲಿಫ್ಟಿಂಗ್‌, ಬೆಂಚ್‌ಪ್ರಸ್‌ ಚಾಂಪಿಯನ್‌ಶಿಪ್‌-2017 ಉದ್ಘಾಟಿಸಿ ಮಾತನಾಡಿದ ಅವರು, ಮಹಾನಗರ ಪಾಲಿಕೆಯ ಬಜೆಟ್‌ನಲ್ಲಿ ಕ್ರೀಡಾ ಚಟುವಟಿಕೆಗೆ ಶೇ. 1 ರಷ್ಟು ಅನುದಾನ ಮೀಸಲಿಡಲಾಗುತ್ತಿತ್ತು. 

ಈ ಬಾರಿಯ ಬಜೆಟ್‌ನಲ್ಲಿ ಶೇ. 1 ರಷ್ಟು ಮೀಸಲಾತಿ ಯನ್ನು ಶೇ. 2ಕ್ಕೆ ಹೆಚ್ಚಿಸಲಾಗುವುದು  ಎಂದು ತಿಳಿಸಿದರು. ದಾವಣಗೆರೆಯಲ್ಲಿ 30 ವರ್ಷದ ನಂತರ ದಕ್ಷಿಣ ಭಾರತ ಮಟ್ಟದ ವೇಟ್‌ ಲಿಫ್ಟಿಂಗ್‌, ಬೆಂಚ್‌ಪ್ರಸ್‌ ಚಾಂಪಿಯನ್‌ಶಿಪ್‌ ನಡೆಸುತ್ತಿರುವುದು ನಿಜಕ್ಕೂ ಸಂತೋಷದ ವಿಚಾರ. ಈ ಕ್ರೀಡಾಕೂಟ ಯಶಸ್ವಿಯಾಗಲಿ, ಮುಂದಿನ ದಿನಗಳಲ್ಲಿ ರಾಷ್ಟ್ರ ಮಟ್ಟದ ಚಾಂಪಿಯನ್‌ಶಿಪ್‌ ನಡೆಯುವಂತಾಗಲಿ. 

ನಗರಪಾಲಿಕೆಯಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ತಿಳಿಸಿದರು. ಅಖೀಲ ಭಾರತ ವೇಟ್‌ ಲಿಫ್ಟಿಂಗ್‌ ಫೆಡರೇಷನ್‌ ಪ್ರಧಾನ ಕಾರ್ಯದರ್ಶಿ ಸುಬ್ರತ ದತ್ತ ಮಾತನಾಡಿ, ದಾವಣಗೆರೆಯಲ್ಲಿ 30 ವರ್ಷದ ನಂತರ ದಕ್ಷಿಣ ಭಾರತ ಮಟ್ಟದ ವೇಟ್‌ ಲಿಫ್ಟಿಂಗ್‌, ಬೆಂಚ್‌ಪ್ರಸ್‌ ಚಾಂಪಿಯನ್‌ ಶಿಪ್‌ ನಡೆಸಲಾಗುತ್ತಿದೆ.

ಇದೇ ಸಂದರ್ಭದಲ್ಲಿ ಮಾರ್ಚ್‌ನಲ್ಲಿ ಇಂಡೋನೇಷ್ಯಾದಲ್ಲಿ ನಡೆಯುವ ಏಷ್ಯನ್‌ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುವ ಭಾರತೀಯ ವೇಟ್‌ ಲಿಫ್ಟಿಂಗ್‌ ತಂಡದ ಆಯ್ಕೆ ಟ್ರಯಲ್ಸ್‌ ನಡೆಯುತ್ತಿದೆ. ಹಾಗಾಗಿ ಪ್ರತಿ ಕ್ರೀಡಾಪಟು ಉತ್ತಮ ಪ್ರದರ್ಶನ ನೀಡಬೇಕು. ಭಾರತೀಯ ತಂಡಕ್ಕೆ ಆಯ್ಕೆಗೆ ಈ ಚಾಂಪಿಯನ್‌ ಶಿಪ್‌ ಪಂದ್ಯಾವಳಿ ಉತ್ತಮ ವೇದಿಕೆಯಾಗಲಿ ಎಂದು ಆಶಿಸಿದರು. 

Advertisement

ಮಹಾನಗರಪಾಲಿಕೆ ಸದಸ್ಯ ದಿನೇಶ್‌ ಕೆ. ಶೆಟ್ಟಿ ಮಾತನಾಡಿ, ದಾವಣಗೆರೆ ಕುಸ್ತಿ, ವೇಟ್‌ ಲಿಫ್ಟಿಂಗ್‌, ಕ್ರಿಕೆಟ್‌ ಆಟಗಾರರ ತವರೂರು. ಇಲ್ಲಿನ ಅನೇಕ ಆಟಗಾರರು ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ ಅಲ್ಲದೆ ಹಲವಾರು ಪ್ರಶಸ್ತಿ ಪಡೆದಿದ್ದಾರೆ. ಎಸ್‌.ಎಸ್‌. ಮಲ್ಲಿಕಾರ್ಜುನ್‌ ಅವರು ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಸಚಿವರಾಗಿದ್ದ ಸಂದರ್ಭದಲ್ಲಿ 30ಕ್ಕೂ ಹೆಚ್ಚು ಕೋಚ್‌ಗಳನ್ನು ನೇಮಕ ಮಾಡಿದ್ದರಿಂದ ಸಾಧನೆಗೆ ಕಾರಣವಾಗಿದೆ.

ಬೆಂಗಳೂರು, ಮೈಸೂರಿಗೆ ಮಾತ್ರವೇ ಸೀಮಿತವಾಗಿದ್ದ ಅನೇಕ ಕ್ರೀಡಾಕೂಟಗಳು ನಡೆಯುವಂತಾಯಿತು. ಕ್ರೀಡಾಂಗಣಗಳು ಸಹ ನಿರ್ಮಾಣವಾದವು ಎಂದು ಸ್ಮರಿಸಿದರು. ಮಹಾನಗರಪಾಲಿಕೆ ಸದಾ ಕ್ರೀಡಾ ಚಟುವಿಟಕೆಗೆ ಎಲ್ಲ ರೀತಿಯ ಪ್ರೋತ್ಸಾಹ, ಸಹಕಾರ ನೀಡುತ್ತಿದೆ. ಬಜೆಟ್‌ನಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಮೀಸಲಿಟ್ಟಿದ್ದ 30-40 ಲಕ್ಷ ಅನುದಾನ ಈ ಬಾರಿಯ ಬಜೆಟ್‌ನಲ್ಲಿ ದ್ವಿಗುಣಗೊಳಿಸಲಾಗುವುದು ಎಂದು ಮೇಯರ್‌ ಭರವಸೆ ನೀಡಿದ್ದಾರೆ.

ಹಾಗಾಗಿ ಮುಂದಿನ ದಿನಗಳಲ್ಲಿ ಕ್ರೀಡಾ ಚಟುವಟಿಕೆಗೆ 1 ಕೋಟಿಯಷ್ಟು ಅನುದಾನ ದೊರೆಯಲಿದೆ. ಕ್ರೀಡಾಪಟುಗಳು ಉತ್ತಮ ಸಾಧನೆಯ ಮೂಲಕ ದಾವಣಗೆರೆಗೆ ಕೀರ್ತಿ ತರಬೇಕು ಎಂದು ಆಶಿಸಿದರು. ದಾವಣಗೆರೆ ಐರನ್‌ ನ್ಪೋರ್ಟ್ಸ್ ಅಂಡ್‌  ಕಲ್ಚರಲ್‌ ಸೆಂಟರ್‌ ಅಧ್ಯಕ್ಷ ಕೆ. ಗಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ವೇಟ್‌ ಲಿಫ್ಟಿಂಗ್‌ ಫೆಡರೇಷನ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಸತೀಶ್‌ಕುಮಾರ್‌ ಕುದ್ರೋಳಿ, ಜೋಸೆಫ್‌ ಫರ್ನಾಂಡಿಸ್‌, ಎಸ್‌. ಘೋಷ್‌, ಕೋಟೇಶ್ವರರಾವ್‌, ಬಿ.ಜಿ. ಅಜಯ್‌ ಕುಮಾರ್‌, ಪಿ.ಜಿ. ಪಾಂಡುರಂಗ, ನಗರಸಭೆ ಮಾಜಿ ಉಪಾಧ್ಯಕ್ಷ ಎ.ನಾಗರಾಜ್‌, ಬಿ. ರಘು, ರಂಗಸ್ವಾಮಿ, ಕೆ.ಆರ್‌. ಗೋವಿಂದಪ್ಪ, ಎಚ್‌. ಎಂ. ಲಕ್ಷ್ಮಿ ಇತರರು ಇದ್ದರು. ಕೆ. ಕುಮಾರ್‌ ಸ್ವಾಗತಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next