Advertisement

ರಸ್ತೆ ಸುರಕ್ಷಾ ಯೋಜನೆಗೆ 1 ಕೋ.ರೂ. ಅನುದಾನ 

01:00 AM Feb 28, 2019 | Team Udayavani |

ಮಣಿಪಾಲ: 2013-18ರ ಅವಧಿಯಲ್ಲಿ 13 ಗಂಭೀರ ಅಪಘಾತಗಳು ಸಂಭವಿಸಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಅಲೆವೂರು ಬ್ಲ್ಯಾಕ್‌ಸ್ಪಾಟ್‌ ರಸ್ತೆಯಲ್ಲಿ ಸಂಚಾರ ಸುರಕ್ಷಿತಗೊಳಿಸುವ ನಿಟ್ಟಿನಲ್ಲಿ 1 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಟೆಂಡರ್‌ ನೀಡಲಾಗಿದೆ. 

Advertisement

ಕಡಿದಾದ ತಿರುವು, ಸೇತುವೆ, ರಸ್ತೆಯ ಇಬ್ಬದಿಯಲ್ಲಿ ತಗ್ಗಿನಲ್ಲಿ ಗದ್ದೆಗಳಿರುವ ಈ ರಸ್ತೆಯಲ್ಲಿ ದಾಖಲಾದ ಅಪಘಾತ ಪ್ರಕರಣ ಗಳಿಷ್ಟಾದರೂ, ಬಿದ್ದು ಗಾಯ ಗೊಂಡಿರುವವರು ಹಲವಾರು ಮಂದಿ ಇದ್ದಾರೆ. ತಿರುವು ಮತ್ತು ರಸ್ತೆಗೆ ತಾಗಿಯೇ ಬಂಡೆ ಇರುವುದೂ ಇದಕ್ಕೆ ಕಾರಣ. ವೇಗವಾಗಿ ಬರುವ ವಾಹನಗಳು ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿರುವ ಪ್ರಕರಣಗಳೂ ನಡೆದಿವೆ. 

ಉಡುಪಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಈ ಭಾಗದಲ್ಲಿ ಸುರಕ್ಷಿತ ಸಂಚಾರ ಕಲ್ಪಿಸುವ ನಿಟ್ಟಿನಲ್ಲಿ 1 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಲೋಕೋಪಯೋಗಿ ಇಲಾಖೆಯಿಂದ ಟೆಂಡರ್‌ ಕೂಡಾ ನೀಡಲಾಗಿದೆ. ಶೀಘ್ರ ಕಾಮಗಾರಿ ಆರಂಭವಾಗಲಿದೆ. 

ಏನಿದು ಸುರಕ್ಷತಾ ಯೋಜನೆ?
ತಿರುವು ಹಾಗೂ ಅವೈಜ್ಞಾನಿಕ ರಸ್ತೆಯಿಂದಾಗಿ ರಾಜ್ಯ ಹೆದ್ದಾರಿಗಳಲ್ಲಿ ಸಂಭವಿಸುವ ಅಪಘಾತಗಳನ್ನು ತಡೆಯುವ ಲೋಕೋಪಯೋಗಿ ಇಲಾಖೆಯ ಯೋಜನೆಯೇ ರಸ್ತೆ ಸುರಕ್ಷತಾ ಯೋಜನೆ. ಈ ಯೋಜನೆಯಲ್ಲಿ ರಸ್ತೆಯನ್ನು ಅಗಲ ಮಾಡುವುದು, ಸುರಕ್ಷಾ ತಡೆ ನಿರ್ಮಿಸುವುದು, ತಿರುವುಗಳನ್ನು ತೆರವುಗೊಳಿ ಸುವ ಕಾಮಗಾರಿಗಳನ್ನು ಮಾಡಲಾಗುತ್ತದೆ. 

ಸುರಕ್ಷಾ ತಡೆ
ಅಲೆವೂರು ಸೇತುವೆ ಬಳಿ ವಾಹನಗಳು ನಿಯಂತ್ರಣ ತಪ್ಪಿ ಕಮರಿಗೆ ಉರುಳುವುದನ್ನು ತಪ್ಪಿಸಲು ಸುರಕ್ಷತಾ ತಡೆ ನಿರ್ಮಿಸಲಾಗುತ್ತಿದೆ. ಈಗಾಗಲೇ ಕಾಮಗಾರಿ ಆರಂಭಗೊಂಡಿದ್ದು ಶೀಘ್ರ ಸಂಪನ್ನಗೊಳ್ಳಲಿದೆ. ಹಿಂದೆ ಟಿಪ್ಪರ್‌ವೊಂದು ಕಮರಿಗೆ ಉರುಳುವ ಸಂದರ್ಭ ತಡೆ ಮುರಿದು ಹೋಗಿತ್ತು. ಹೆಚ್ಚು ಸಾಮರ್ಥ್ಯದ ತಡೆ ಅಳವಡಿಸುವ ನಿಟ್ಟಿನಲ್ಲಿ ಲೋಕೋಪಯೋಗಿ ಇಲಾಖೆ ಕ್ರಮ ಕೈಗೊಂಡಿದೆ. 

Advertisement

ಪೊಲೀಸ್‌ ವರದಿ ಪರಿಣಾಮ 
ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ ಬರುವ ರಾಂಪುರ- ಅಲೆವೂರು ಮಾರ್ಗದಲ್ಲಿ ಹೆಚ್ಚಿನ ಅಪಘಾತ ಪ್ರಕರಣಗಳು ನಡೆಯುತ್ತಿರುವ ಬಗ್ಗೆ ಮಣಿಪಾಲ ಪೊಲೀಸರು ಲೋಕೋಪಯೋಗಿ ಇಲಾಖೆಗೆ ವರದಿ ನೀಡಿದ್ದರು. ಈ ವರದಿಯನ್ನು ಪರಿಶೀಲಿಸಿರುವ ಇಲಾಖೆ ರಸ್ತೆ ಸುರಕ್ಷಾ ಯೋಜನೆ ಅನುಷ್ಠಾನಿಸಿದೆ.

ಏನೇನು ಕಾಮಗಾರಿ?
– 7 ಮೀ. ಅಗಲ ರಸ್ತೆ 
– ಸೈಡ್‌ ಪಿಚ್ಚಿಂಗ್‌
– ತಿರುವು ತೆರವು
– ರಸ್ತೆ ಬದಿಯ ಬಂಡೆ ತೆರವು
– ಸುರಕ್ಷತಾ ತಡೆ; 1.5 ಮೀ. ಎತ್ತರ 
– ಲೇನ್‌ ಮಾರ್ಕಿಂಗ್‌
– ರಿಫ್ಲೆಕ್ಟರ್‌
– ಸುರಕ್ಷಾ ಸಂಜ್ಞೆಗಳು

ಶೀಘ್ರ ಕಾಮಗಾರಿ 
1 ಕೋಟಿ ರೂ. ಅನುದಾನದಲ್ಲಿ ರಸ್ತೆ ಸುರಕ್ಷಾ ಯೋಜನೆ ಅನುಷ್ಠಾನಿಸಲಾಗುತ್ತಿದೆ. ಮಣಿಪಾಲ ಪೊಲೀಸರ ವರದಿಯೊಂದಿಗೆ ಸುರಕ್ಷಾ ರಸ್ತೆ ಯೋಜನೆಗೆ ಪ್ರಸ್ತಾವ ಸಲ್ಲಿಸಿದ್ದು ಅನುಮೋದನೆ ದೊರೆತಿದೆ. ಟೆಂಡರ್‌ ನೀಡಲಾಗಿದ್ದು ಶೀಘ್ರ ಕಾಮಗಾರಿ ಆರಂಭವಾಗಲಿದೆ. 
-ಜಗದೀಶ್‌ ಭಟ್‌, ಎಇಇ, ಲೋಕೋಪಯೋಗಿ ಇಲಾಖೆ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next