Advertisement

ಕುವೆಂಪು ವಿವಿ ಅಭಿವೃದ್ಧಿಗೆ 1 ಕೋಟಿ

04:29 PM Nov 30, 2020 | Suhan S |

ಶಿವಮೊಗ್ಗ: ಕುವೆಂಪು ವಿವಿ ಅಭಿವೃದ್ಧಿ ಕಾಮಗಾರಿಗಳಿಗೆ 1 ಕೋಟಿ ರೂ. ತಕ್ಷಣ ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಿಳಿಸಿದರು.

Advertisement

ಭಾನುವಾರ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ವಿಸ್ತರಣಾ ಕಟ್ಟಡ, ಕಲಾ ಕಾಲೇಜಿನ ದ್ವಾರ ಮತ್ತು ಪುರುಷ ವಿದ್ಯಾರ್ಥಿ ನಿಲಯದ ವಿಸ್ತರಣಾ ಕಟ್ಟಡದ ಉದ್ಘಾಟಿಸಿ ಮಾತನಾಡಿದ ಅವರು, ವಿವಿಧ ಅಭಿವೃದ್ಧಿ  ಕಾರ್ಯಕ್ರಮಗಳಿಗೆ ಅನುದಾನವನ್ನು ಕೇಳಿದ್ದೀರಿ. ತಕ್ಷಣ 1 ಕೋಟಿ ರೂ. ಬಿಡುಗಡೆ ಮಾಡಲಾಗುವುದು. ಅದನ್ನು ಅಗತ್ಯ ಕೆಲಸಗಳಿಗೆ ಬಳಸಿಕೊಳ್ಳಿ. ಬಾಕಿ ಹಣ ನೀಡಲು ಬಜೆಟ್‌ನಲ್ಲಿ ಚರ್ಚಿಸಲಾಗುವುದು ಭರವಸೆ ನೀಡಿದರು.

ಸಹ್ಯಾದ್ರಿ ಕಾಲೇಜು ಜಯಚಾಮರಾಜೇಂದ್ರ ಒಡೆಯರ್‌ ಅವರಿಂದ ಸ್ಥಾಪಿಸಲ್ಪಟ್ಟು ಮಹಾಕವಿ ಕುವೆಂಪು ಅವರಿಂದ ಸಹ್ಯಾದ್ರಿ ಎಂಬ ಅಭಿದಾನವನ್ನು ಪಡೆದಿದೆ. ಮಲೆನಾಡಿನ ಅತ್ಯುನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಹ್ಯಾದ್ರಿ ವಿಜ್ಞಾನ, ಕಲಾ, ವಾಣಿಜ್ಯ ಕಾಲೇಜುಗಳು ಅನೇಕ ಗಣ್ಯರನ್ನು ನಾಡಿಗೆ, ದೇಶಕ್ಕೆ ಕೊಡುಗೆಯಾಗಿ ನೀಡಿದೆ. ಈ ಭಾಗದ ಶೈಕ್ಷಣಿಕ ಅಗತ್ಯಗಳನ್ನು ಮನಗಂಡು ಅದನ್ನು ಪೂರೈಸುವುದರಲ್ಲಿ ಕುವೆಂಪು ವಿಶ್ವವಿದ್ಯಾಲಯ, ಸಹ್ಯಾದ್ರಿ ಕಾಲೇಜು ನಿರಂತರವಾಗಿ ತೊಡಗಿಕೊಂಡಿದೆ ಎಂದರು.

ಕೋವಿಡ್‌-19 ಸಂದರ್ಭದಲ್ಲಿಯೂ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ. ಶಿವಮೊಗ್ಗದ ಸರ್ವಾಂಗೀಣ ಅಭಿವೃದ್ಧಿಗೂ ಒತ್ತು ನೀಡಲಾಗಿದೆ. ಸೇತುವೆ ನಿರ್ಮಾಣ, ವಿಮಾನ ನಿಲ್ದಾಣ, ರಸ್ತೆ ಕಾಮಗಾರಿ, ನೀರಾವರಿ ಯೋಜನೆಗಳು ಭರದಿಂದ ಸಾಗುತ್ತಿದೆ. ನಗರದ ವಾಹನ ದಟ್ಟಣೆ ತಗ್ಗಿಸಲು 450 ಕೋಟಿ ರೂ. ಹಣದಲ್ಲಿ ಹೊರವರ್ತುಲ ರಸ್ತೆ ನಿರ್ಮಿಸಲಾಗುತ್ತಿದೆ ಎಂದರು.

ಸೋಗಾನೆಯ ವಿಮಾನ ನಿಲ್ದಾಣ 2022ರ ಆರಂಭದಲ್ಲಿ ಪೂರ್ಣಗೊಳ್ಳಲಿದ್ದು, ವಿಮಾನ ಹಾರಾಟ ಪ್ರಾರಂಭವಾಗಲಿದೆ. 3200 ಮೀಟರ್‌ ಉದ್ದದ ರನ್‌ ವೇ ಹೆಚ್ಚಿಸಲಾಗಿದೆ. ಹೊಳೆ ಹನಸವಾಡಿಯಲ್ಲಿ ತುಂಗ ಏತನೀರಾವರಿ ಯೋಜನೆ ಮಾಡಲು ಉದ್ದೇಶಿಸಲಾಗಿದ್ದು, ಇದರಿಂದ 20 ಕೆರೆಗಳು ತುಂಬಿಸುವ ಯೋಜನೆ ಇದಾಗಿದೆ ಎಂದರು.

Advertisement

ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಸಿಎಂ ಬಿ.ಎಸ್‌.ಯಡಿಯೂರಪ್ಪ ಜಿಲ್ಲೆಯ ಅಭಿವೃದ್ಧಿ ಸಂಕಲ್ಪ ಮಾಡಿ ಅನೇಕ ಶಿಕ್ಷಣ ಸಂಸ್ಥೆಗಳನ್ನು ಕೊಟ್ಟಿದ್ದಾರೆ. ಶಿಕ್ಷಣಕ್ಕೆ ಆದ್ಯತೆ ಕೊಟ್ಟಂತೆ ಪಠ್ಯೇತರ ಚಟುವಟಿಕೆಗಳಿಗೂ ಆದ್ಯತೆ ನೀಡಲಾಗುತ್ತಿದೆ. ಕೇಂದ್ರ ಸರಕಾರ ಒಳಾಂಗಣ ಕ್ರೀಡಾಂಗಣ ಸಂಕೀರ್ಣ ನಿರ್ಮಾಣ ಮಾಡಲು 4 ಕೋಟಿ ರೂ. ಮಂಜೂರು ಮಾಡಿದೆ. ಮಾಜಿ ರಾಷ್ಟ್ರಪತಿ ಅಬ್ದುಲ್‌ ಕಲಾಂ ಅವರ ಆಶಯ ಈಡೇರಿಸುವ ನಿಟ್ಟಿನಲ್ಲಿ ಸೈನ್ಸ್ ಲ್ಯಾಬ್‌ ಮಂಜೂರಾಗಿದೆ ಎಂದು ತಿಳಿಸಿದರು. ಕುಲಪತಿ ಪ್ರೊ.ಬಿ.ಪಿ.ವೀರಭದ್ರಪ್ಪ ಮಾತನಾಡಿ, ಕುವೆಂಪು ವಿವಿ ರಾಜ್ಯದ ಪ್ರತಿಷ್ಠಿತ ವಿವಿಗಳಲ್ಲಿ ಒಂದಾಗಿದೆ. ಇಲ್ಲಿ ಸಹ್ಯಾದ್ರಿ ಸ್ಕೂಲ್‌ ಆಫ್‌ ಎಕನಾಮಿಕ್ಸ್‌, ಅಂತಾರಾಷ್ಟ್ರೀಯ ಸಂಶೋಧನಾ ಲ್ಯಾಬ್‌, ಒಳಾಂಗಣ ಕ್ರೀಡಾಂಗಣ, ಐಎಎಸ್‌, ಐಪಿಎಸ್‌ ಕೋಚಿಂಗ್‌ಸೆಂಟರ್‌, ಹಾಲಿ ಕಟ್ಟಡಗಳ ದುರಸ್ತಿ, ಲ್ಯಾಬ್‌ಗಳಉನ್ನತೀಕರಣಕ್ಕೆ 28 ಕೋಟಿ ರೂ. ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದರು.

ಈ ವೇಳೆ ಪರಿಷತ್‌ ಉಪಸಭಾಪತಿ ಎಸ್‌. ಎಲ್‌.ಧರ್ಮೇಗೌಡ, ಜಿಪಂ ಅಧ್ಯಕ್ಷೆ ಜ್ಯೋತಿ ಎಸ್‌. ಕುಮಾರ್‌, ಶಾಸಕ ಆರಗ ಜ್ಞಾನೇಂದ್ರ, ಎಂಎಲ್‌ಸಿ ಆರ್‌.ಪ್ರಸನ್ನಕುಮಾರ್‌, ಎಸ್‌.ರುದ್ರೇಗೌಡ, ಎಸ್‌.ಎಲ್‌ .ಭೋಜೇಗೌಡ, ಡಿ.ಎಸ್‌.ಅರುಣ್‌, ಗುರುಮೂರ್ತಿ. ಕೆ.ಎಸ್‌, ಮೇಯರ್‌ ಸುವರ್ಣ ಶಂಕರ್‌, ಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯ, ಸೂಡಾ ಅಧ್ಯಕ್ಷ ಎಸ್‌.ಎಸ್‌. ಜ್ಯೋತಿ ಪ್ರಕಾಶ್‌, ಕುಲಸಚಿವ ಎಸ್‌.ಎಸ್‌.ಪಾಟೀಲ್‌, ಪ್ರಾಚಾರ್ಯೆ ಡಾ.ಕೆ.ಆರ್‌.ಶಶಿರೇಖಾ, ಡಾ.ಎಚ್‌. ಎಂ.ವಾಗ್ದೇವಿ, ಡಾ.ಕೆ.ಬಿ.ಧನಂಜಯ, ಸಿಂಡಿಕೇಟ್‌ ಸದಸ್ಯರಾದ ಬಳ್ಳೇಕೆರೆ ಸಂತೋಷ್‌, ಧರ್ಮಪ್ರಸಾದ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next