Advertisement

ಅಭಿವೃದ್ಧಿ ಕಾಮಗಾರಿಗೆ 1.94 ಕೋಟಿ ಅನುದಾನ ಬಿಡುಗಡೆ

08:49 PM Jan 11, 2020 | Team Udayavani |

ಯಳಂದೂರು: ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಎಸ್‌ಇಪಿ, ಟಿಎಸ್‌ಪಿ ಯೋಜನೆಯಡಿ 1.94 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಗುಣಮಟ್ಟದ ಕಾಮಗಾರಿ ನಡೆಸಬೇಕು ಎಂದು ಶಾಸಕ ಎನ್‌. ಮಹೇಶ್‌ ಸೂಚನೆ ನೀಡಿದರು. ತಾಲೂಕಿನ ಕೆಸ್ತೂರು, ಮೆಳ್ಳಹಳ್ಳಿ, ಯರಗಂಬಳ್ಳಿ, ಟಿ. ಹೊಸೂರು ಯರಗಂಬಳ್ಳಿ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

Advertisement

ಕ್ಷೇತ್ರದ ಗ್ರಾಮೀಣ ಭಾಗದಲ್ಲಿ ಮೂಲ ಸೌಲಭ್ಯ ಕಲ್ಪಿಸಲು ಆದ್ಯತೆ ನೀಡಲಾಗಿದೆ. ಎಸ್‌ಇಪಿ ಯೋಜನೆಯಡಿ 84.79 ಲಕ್ಷ, ಟಿಎಸ್‌ಪಿ ಯೋಜನೆಯಡಿ 110 ಲಕ್ಷ ರೂ. ಗಳ ವೆಚ್ಚವನ್ನು ಮಾಡಲಾಗಿದೆ. ಈ ಕೆಲಸಗಳನ್ನು ಕೆಆರ್‌ಐಡಿಎಲ್‌, ಕಾಡಾ, ನೀರಾವರಿ ಇಲಾಖೆ ವ್ಯಾಪ್ತಿಗೆ ನೀಡಲಾಗಿದೆ. ಸಂಬಂಧಪಟ್ಟ ಇಲಾಖೆಯ ಎಂಜಿನಿಯರ್‌ಗಳು ಸ್ಥಳದಲ್ಲಿದ್ದು, ಕಾಮಗಾರಿಯನ್ನು ಗುಣಮಟ್ಟದಿಂದ ಮಾಡಿಸಬೇಕು ಎಂದು ಹೇಳಿದರು.

ನಾನು ಕಾಮಗಾರಿ ನಡೆಯುವ ವೇಳೆ ಭೇಟಿ ನೀಡಿ ಪರಿಶೀಲಿಸುತ್ತೇನೆ. ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ. ಸ್ಥಳೀಯರೂ ಕೂಡ ಇವರಿಗೆ ಬೇಕಾಗಿರುವ ಅಗತ್ಯ ನೆರವು ನೀಡಬೇಕು. ಮುಖಂಡರ ವಿಶ್ವಾಸ ಪಡೆದುಕೊಂಡು ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಸಲಹೆ ನೀಡಿದರು.

ಕ್ಷೇತ್ರ ವ್ಯಾಪ್ತಿಯಲ್ಲಿ ಇನ್ನಷ್ಟು ಅಭಿವೃದ್ಧಿ ಕಾಮಗಾರಿಗಳಿಗೆ ರಾಜ್ಯಕ್ಕೆ ನೆರವನ್ನು ಕೋರಲಾಗಿದೆ. ಇತರೆ ಜನಾಂಗಗಳು ವಾಸ ಮಾಡುವ ಬಡಾವಣೆಗಳಿಗೂ ಅಗತ್ಯ ಅನುದಾನ ತಂದು, ಅದರ ಅಭಿವೃದ್ಧಿಗೂ ಆದ್ಯತೆ ನೀಡಲಾಗುವುದು ಎಂದು ಭರವಸೆ ನೀಡಿದರು.

ಈ ವೇಳೆ ಯರಗಂಬಳ್ಳಿ ಗ್ರಾಪಂ ಅಧ್ಯಕ್ಷೆ ದಾಕ್ಷಾಯಣಿ, ಉಪಾಧ್ಯಕ್ಷ ಸಿದ್ದರಾಜು, ತಾಪಂ ಸದಸ್ಯೆ ಪುಟ್ಟುಕುಮಾರ್‌, ಎಇಇ ಉಮೇಶ್‌, ಜೆಇ ರಂಗಸ್ವಾಮಿ, ಕೆಸ್ತೂರು ಪರಮೇಶ್‌, ಸಿದ್ಧರಾಮು, ಪಿಡಿಒ ವೆಂಕಟಾಚಲಮೂರ್ತಿ, ರವಿ ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next