Advertisement

ಶೇ. 16 ಮಂದಿಯಲ್ಲಿ ಪ್ರತಿಕಾಯ!

12:31 AM Nov 05, 2020 | mahesh |

ಬೆಂಗಳೂರು: ರಾಜ್ಯದ ಸುಮಾರು 1.93 ಕೋಟಿ ಮಂದಿಗೆ ಕೋವಿಡ್ ಸೋಂಕು ಬಂದು ಹೋಗಿರುವ ಅಂದಾಜು ಇದೆ. ಹಾಗೆಯೇ ರಾಜ್ಯದ ಶೇ. 16 ಮಂದಿಯಲ್ಲಿ ಕೊರೊನಾ ತಡೆಯುವ ರೋಗ ನಿರೋಧಕ ಶಕ್ತಿ ಸೃಷ್ಟಿಯಾಗಿದೆ!

Advertisement

ಇದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ| ಕೆ. ಸುಧಾಕರ್‌ ಅವರು ಬಿಡುಗಡೆಗೊಳಿಸಿದ ಸಿರೋ ಸಮೀಕ್ಷೆಯ ಮಾಹಿತಿ. ರಾಜ್ಯದ 30 ಜಿಲ್ಲೆ ಮತ್ತು ಬೆಂಗಳೂರಿನ 8 ವಲಯಗಳಲ್ಲಿ ಸಿರೋ ಸಮೀಕ್ಷೆ ನಡೆಸಲಾಗಿದೆ. ಇದರ ಪ್ರಕಾರ ಶೇ. 16 ಜನರಲ್ಲಿ ಕೋವಿಡ್‌ ಪ್ರತಿಕಾಯ ಇದೆ ಎಂಬ ಅಂಶ ತಿಳಿದುಬಂದಿದೆ ಎಂದು ಬುಧವಾರ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಡಾ| ಕೆ. ಸುಧಾಕರ್‌ ಹೇಳಿದರು. 16,585 ಜನರ ಮಾದರಿಗಳನ್ನು ಪಡೆದು ಪರೀಕ್ಷೆ ಮಾಡಿದ್ದು, 15,624 ಜನರ ಫಲಿತಾಂಶ ಬಂದಿದೆ ಎಂದವರು ವಿವರಿಸಿದರು.

ಈ ಹಿಂದೆ ಸಮೀಕ್ಷೆ ಮಾಡಿದ ಸಂದರ್ಭದಲ್ಲಿ ಸೋಂಕಿಗೆ ಒಳಗಾಗಿದ್ದವರ ಪ್ರಮಾಣ ಶೇ. 27.3ರಷ್ಟಿತ್ತು. ಈಗ ಕಡಿಮೆ ರಿಸ್ಕ್, ಮಧ್ಯಮ ರಿಸ್ಕ್ ಮತ್ತು ಹೆಚ್ಚು ರಿಸ್ಕ್ ಎಂದು ವರ್ಗೀಕರಿಸಿ ಪರೀಕ್ಷೆ ನಡೆಸಲಾಗಿದೆ. ಐಜಿಜಿ (ಇಮ್ಯುನೋಗ್ಲೋಬ್ಯುಲಿನ್‌ ಜಿ – ರೋಗ ನಿರೋಧಕ ಅಂಶ) ಹೊಂದಿದವರು ಮತ್ತು ಸಕ್ರಿಯ ಸೋಂಕುಪೀಡಿತರನ್ನು ಪತ್ತೆ ಮಾಡುವ ಮೂಲಕ ಕ್ರಮಬದ್ಧವಾಗಿ ಸಮೀಕ್ಷೆ ನಡೆಸಲಾಗಿದೆ ಎಂದರು.

15,624 ಜನರಲ್ಲಿ ಐಜಿಜಿ ಪ್ರತಿಕಾಯ ಇರುವವರ ಪ್ರಮಾಣ ಶೇ. 16.4ರಷ್ಟಿದೆ. ಸಮೀಕ್ಷೆಯನ್ನು ಸೆ. 3ರಿಂದ ಸೆ. 16ರ ವರೆಗೆ ನಡೆಸಲಾಗಿತ್ತು. ಕೋವಿಡ್‌ ಮರಣ ಪ್ರಮಾಣ ಸೋಂಕುಪೀಡಿತರ ಒಟ್ಟು ಸಂಖ್ಯೆಗೆ ಹೋಲಿಸಿದರೆ ಬಹಳ ಕಡಿಮೆ ಇದ್ದು, ಮರಣ ಪ್ರಮಾಣ ಶೇ. 0.5 ಇದೆ. ಇದೇ ರೀತಿ ಡಿಸೆಂಬರ್‌ ಅಂತ್ಯ ಮತ್ತು ಮಾರ್ಚ್‌ ಅಂತ್ಯಕ್ಕೆ ಮತ್ತೂಂದು ಸಮೀಕ್ಷೆ ನಡೆಸಲಾಗುವುದು ಎಂದರು.

ಶೇ. 27.3 ಜನರಿಗೆ ಸದ್ದಿಲ್ಲದೆ ಸೋಂಕು
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೊರೊನಾ ವಿವಿಧ ಹಂತಗಳಲ್ಲಿ ಬಂದು ಹೋಗುತ್ತಿದೆ. ರಾಜ್ಯದ ಅಂದಾಜು 7.07 ಕೋಟಿ ಜನಸಂಖ್ಯೆಯ ಪೈಕಿ ಸೆ. 16ರ ಹೊತ್ತಿಗೆ 1.93 ಕೋಟಿ (ಶೇ. 27.3) ಜನರಿಗೆ ಸೋಂಕು ಬಂದು ಹೋಗಿದೆ. ಕೊರೊನಾದಿಂದ ಉಂಟಾಗುವ ಸಾವಿನ ಪ್ರಮಾಣ ಶೇ. 0.05ರಷ್ಟಿದೆ ಎಂದು ಕೊರೊನಾ ಸಮೀಕ್ಷೆ ಸಮಿತಿಯ ಮುಖ್ಯಸ್ಥ ಡಾ| ಗಿರಿಧರ ಬಾಬು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next