ಜಿನೆವಾ: ಜಗತ್ತಿನ ಇಡೀ ಮನುಕುಲವೆ ಕೋವಿಡ್ ವೈರಸ್‌ನ ಕಪಿಮುಷ್ಟಿಯಿಂದಾಗಿ ತತ್ತರಿಸಿದೆ. ಸೋಮವಾರ ಪ್ರಪಂಚದ ಬೇರೆ ಬೇರೆ ರಾಷ್ಟ್ರಗಳಲ್ಲಿ ಕೋವಿಡ್ -19 ಸೋಂಕಿತರ ಸಂಖ್ಯೆ 90 ಲಕ್ಷ ದಾಟಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಕೋವಿಡ್ ಸೋಂಕು ಹಡುವಿಕೆ ಪ್ರತಿ ದಿನ ಏರುಮುಖವಾಗಿ ಸಾಗುತ್ತಿದ್ದು, ರವಿವಾರ ಜಾಗತಿಕ ಪ್ರಕರಣಗಳಲ್ಲಿ ದಾಖಲೆಯ ಏರಿಕೆ ಕಂಡಿದೆ.
ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದ ಪ್ರಕಾರ, ಕಳೆದ 24 ಗಂಟೆಗಳ ಅವಧಿಯಲ್ಲಿ ಜಗತ್ತಿನಾದ್ಯಂತ ಒಟ್ಟು 1,83,020ರಷ್ಟು ಸೋಂಕು ಪ್ರಕರಣಗಳು ದೃಢಪಟ್ಟಿವೆ.
ಒಂದೇ ದಿನದಲ್ಲಿ ಉತ್ತರ ಮತ್ತು ದಕ್ಷಿಣ ಅಮೆರಿಕಗಳಲ್ಲೇ 1,16,000ಕ್ಕೂ ಹೆಚ್ಚು ಹೊಸ ಪ್ರಕರಣಗಳು ದಾಖಲಾಗಿವೆ. ಬ್ರೆಜಿಲ್ ದೇಶವೊಂದರಲ್ಲೇ 54,771 ಹೊಸ ಪ್ರಕರಣಗಳು ದಾಖಲಾಗಿವೆ. ದಿನವೊಂದರಲ್ಲಿ ವಿಶ್ವಾದ್ಯಂತ ಪತ್ತೆಯಾದ ಹೊಸ ಪ್ರಕರಣಗಳ ಹಿಂದಿನ ದಾಖಲೆ ಜೂ. 18ರಂದು 1,81,232 ಆಗಿತ್ತು ಎಂದು ಡಬ್ಲ್ಯುಎಚ್‌ಒ ತಿಳಿಸಿದೆ. ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ ಗರಿಷ್ಠ 15,400 ಹೊಸ ಪ್ರಕರಣಗಳು ದಾಖಲಾಗಿವೆ.
ಮೆಕ್ಸಿಕೋ ಕಳೆದ 24 ಗಂಟೆಗಳಲ್ಲಿ 1,044ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಇದು ಅಲ್ಲಿನ ಜನರ, ಸರಕಾರದ ಆತಂಕ ಮತ್ತಷ್ಟು ಹೆಚ್ಚಿಸಿದೆ. ಈ ರಾಷ್ಟ್ರದಲ್ಲಿ ಒಟ್ಟು 1,80,545 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, 21,825 ಮಂದಿ ಮೃತಪಟ್ಟಿದ್ದಾರೆ.
ರಾಷ್ಟ್ರಗಳು ವೈರಸ್ ಹರಡುವುದನ್ನು ತಡೆಯಲು ಜಾರಿಗೆ ತಂದ ನಿರ್ಬಂಧಗಳಿಂದ ದೈನಂದಿನ ಚಟುವಟಿಕೆ ಮತ್ತು ವಾಣಿಜ್ಯ ವ್ಯವಹಾರಗಳು ನಡೆಯದೆ ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ಹಾಗಾಗಿ ಇತ್ತೀಚೆಗೆ ಹಲವು ರಾಷ್ಟ್ರಗಳು ಲಾಕ್‌ಡೌನ್ ಸಹಿತ ಕೆಲವು ನಿರ್ಬಂಧಗಳನ್ನು ಸಡಿಲಿಸಿದೆ. ಪರಿಣಾಮ ಹಲವು ರಾಷ್ಟ್ರಗಳಲ್ಲಿ ಕೋವಿಡ್ ವೈರಸ್ ಸೋಂಕಿನ ಪ್ರಕರಣಗಳು ವ್ಯಾಪಕವಾಗಿ ವೃದ್ಧಿಸುತ್ತಿವೆ.
ಸೋಮವಾರ ರಾತ್ರಿಯ ವೇಳೆಗೆ ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 91,01,688 ಅಧಿಕವಾಗಿದೆ. ಅಲ್ಲದೆ 4,71,592 ಮಂದಿ ಮಹಾಮಾರಿ ವೈರಸ್‌ಗೆ ಬಲಿಯಾಗಿದ್ದಾರೆ. ಈ ವರೆಗೆ ಜಗತ್ತಿನಲ್ಲಿ 48,75,015 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, 37,55,081 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಅಮೆರಿಕದಲ್ಲಿ ಕೋವಿಡ್ ವೈರಸ್ ಸೋಂಕಿತರ ಪ್ರಮಾಣ ಅತ್ಯಧಿಕವಾಗಿದೆ. ಸೋಮವಾರ ರಾತ್ರಿಯ ವೇಳೆಗೆ ಆ ರಾಷ್ಟ್ರದಲ್ಲಿ 23,65,934ಕ್ಕೂ ಅಧಿಕ ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, 1,22,318 ಮಂದಿ ಬಲಿಯಾಗಿದ್ದಾರೆ. 9,81,280 ಮಂದಿ ಗುಣಮುಖರಾಗಿದ್ದು, 12,62,336 ಮಂದಿ ಆಸ್ಪತ್ರೆ ಗಳಲ್ಲಿ ಚಿಕಿತ್ಸೆ ಪಡೆಯು ತ್ತಿದ್ದಾರೆ.