ಯಾದಗಿರಿ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಜಲಾಶಯದ ಒಳಹರಿವು 1.60 ಲಕ್ಷ ಕ್ಯೂಸೆಕ್ ಗೆ ಏರಿಕೆಯಾಗಿದ್ದು, ಹಂತ ಹಂತವಾಗಿ ಏರಿಕೆಯಾಗುತ್ತಿರುವುದರಿಂದ ಯಾದಗಿರಿ ಜಿಲ್ಲೆಯ ನಾರಾಯಣಪೂರ ಬಸವಸಾಗರ ಜಲಾಶಯದಿಂದ ಮಧ್ಯಾಹ್ನ12 ಗಂಟೆ ವೇಳೆಗೆ 1.80 ಲಕ್ಷ ಕ್ಯೂಸೆಕ್ ನೀರನ್ನು ಕೃಷ್ಣಾ ನದಿಗೆ ಹರಿಯ ಬಿಡಲಾಗಿದೆ.
ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸುವದರಿಂದ ನದಿ ಮಾರ್ಗದಲ್ಲಿ ಬರುವ ರಾಯಚೂರು, ಯಾದಗಿರಿ ಜಿಲ್ಲೆಗಳ ವ್ಯಾಪ್ತಿಯಲ್ಲಿನ ಕೆಳ ಹಂತದ ಸೇತುವೆಗಳಿಗೆ ಪ್ರವಾಹದ ನೀರಿನಿಂದ ಧಕ್ಕೆಯಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಕಳೆದ ವರ್ಷ ಬಸವಸಾಗರ ಜಲಾಶಯಕ್ಕೆ 4 ಲಕ್ಷ ಕ್ಯೂಸೆಕ್ ಪ್ರಮಾಣ ನೀರಿನ ಒಳಹರಿವು ಹರಿದು ಬಂದ ಸಂದರ್ಭದಲ್ಲಿ ಅಷ್ಟೇ ಪ್ರಮಾಣದ ನೀರನ್ನು ಜಲಾಶಯದ 24 ಕ್ರಸ್ಟಗೇಟ್‌ಗಳ ಮೂಲಕ ನೀರನ್ನು ಕೃಷ್ಣಾ ನದಿಗೆ ಹರಿಸಿದ್ದರಿಂದ ನದಿ ಪಾತ್ರದ ಗ್ರಾಮಗಳಿಗೆ ಪ್ರವಾಹದ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿತ್ತು ಜೊತೆಗೆ ಪ್ರವಾಹದ ನೀರು ಜಮೀನುಗಳಿಗೆ ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿತ್ತು.
ಪ್ರಸ್ತುತ ಬಸವಸಾಗರ ಜಲಾಶಯದ ಗರಿಷ್ಠ 491.46 ಮೀಟರ್ 30 ಟಿಎಂಸಿ ನೀರು ಸಂಗ್ರಹವಿದೆ. ಜಲಾಶಯದಿಂದ 2 ಲಕ್ಷ ಕ್ಯೂಸೆಕ್‌ಗಿಂತ ಹೆಚ್ಚಿನ ನೀರು ಹರಿಸಿದ್ದಲ್ಲಿ ಪ್ರವಾಹದಿಂದ ದೇವದುರ್ಗ ತಾಲೂಕಿನ ಹೂವಿನಹೆಡಗಿ ಸೇತುವೆ (ರಾಜ್ಯ ಹೆದ್ದಾರಿ 15) ರ ಜಿಲ್ಲಾ ಹೆದ್ದಾರಿ ಸೇತುವೆ ಮುಳುಗಡೆಯಾಗಿ ವಾಹನ ಸಂಚಾರಕ್ಕೆ ಅಡೆತಡೆಯಾಗುವ ಸಾಧ್ಯತೆಯಿದೆ.
ಇನ್ನು ಹೊರಹರಿವು 3 ಲಕ್ಷ ಕ್ಯೂ. ತಲುಪಿದರೆ ಸುರಪುರ ತಾಲೂಕಿನ ನೀಲಕಂಠರಾಯನಗಡ್ಡಿ ಗ್ರಾಮ ನಡುಗಡ್ಡೆಯಾಗಲಿದೆ. ಇದಕ್ಕೂ ಹೆಚ್ಚಾದರೆ ಕೃಷ್ಣಾ ನದಿ ಇಕ್ಕಲು ಪ್ರದೇಶದಲ್ಲಿ ಪ್ರವಾಸ ನೀರು ಉಕ್ಕು ಹರಿಯುವುದರಿಂದ ನದಿ ಪಾತ್ರದ ಗ್ರಾಮಗಳ ಜಮೀನುಗಳಿಗೆ ನೀರು ನುಗ್ಗಲಿದೆ.