ಬಳ್ಳಾರಿ: ತುಂಗಭದ್ರಾ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಹೆಚ್ಚುವರಿ 1.70 ಲಕ್ಷ ಕ್ಯೂಸೆಕ್ ನೀರನ್ನು ಹೊರಬಿಡಲಾಗಿದ್ದು, ಕಂಪ್ಲಿ-ಗಂಗಾವತಿ ಸಂಪರ್ಕ ಸೇತುವೆ ಮೇಲೂ ನೀರು ಹರಿದ ಪರಿಣಾಮ ಸೇತುವೆಯಲ್ಲಿ ವಾಹನ ಸಂಚಾರವನ್ನು ಭಾನುವಾರದಿಂದ ಸ್ಥಗಿತಗೊಳಿಸಲಾಗಿದೆ.
ಕಂಪ್ಲಿ ಸೇತುವೆ ಬಳಿ ಶಾಸಕ ಜೆ.ಎನ್.ಗಣೇಶ್, ಹೊಸಪೇಟೆ ಸಹಾಯಕ ಆಯುಕ್ತ ಲೋಕೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಶಾಸಕ ಗಣೇಶ್ ಮಾತನಾಡಿ, ಪ್ರಸಕ್ತ ವರ್ಷ ಜಿಲ್ಲೆಯ ಜನರಲ್ಲಿ ಸಮರ್ಪಕ ಮಳೆಯಿಲ್ಲ ಎಂದು ರೈತರಲ್ಲಿ ಕೊರಗು ಇತ್ತು. ಆದರೆ, ಜಲಾಶಯ ತುಂಬಿ ಹರಿಯುತ್ತಿರುವುದು ಸಂತಸ ಮೂಡಿಸಿದೆ. ರೈತಾಪಿ ಜನರಲ್ಲೂ ಖುಷಿ ಮೂಡಿಸಿದೆ. ಮತ್ತೊಂದೆಡೆ ಉತ್ತರ ಕರ್ನಾಟಕವೇ ನೀರಲ್ಲಿ ಮುಳುಗಡೆಯಾಗಿದೆ. ಹೀಗಾಗಿ ತುಂಗಭದ್ರಾ ಜಲಾಶಯದಿಂದಲೂ ಈಗಾಗಲೇ 1.70 ಲಕ್ಷ ಕ್ಯೂಸೆಕ್ ನೀರು ಹರಿಸಿದ್ದು, ಇಂದು ಸಂಜೆಯೊಳಗೆ ಇನ್ನು 1.50ಲಕ್ಷ ಕ್ಯೂಸೆಕ್ ನೀರನ್ನು ನದಿಗೆ ಹರಿಸುವ ಸಾಧ್ಯತೆ ಇದೆ ಎಂದು ಜಲಾಶಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಯಾವುದೇ ಸಮಸ್ಯೆಯಾಗಬಾರದು ಎಂಬ ಉದ್ದೇಶದಿಂದ , ನದಿಪಾತ್ರದ ಜನರನ್ನು ಸ್ಥಳಾಂತರಿಸಲು, ಅವರಿಗೆ ಗಂಜಿಕೇಂದ್ರವನ್ನು ತೆರೆಯಲು ಸೇರಿ, ಇರಲು ಸ್ಥಳಾವಕಾಶ ಸೇರಿದಂತೆ ಇನ್ನಿತರೆ ಮುಂಜಾಗ್ರತಾ ಕ್ರಮ ವಹಿಸಿದ್ದಾರೆ ಎಂದು ತಿಳಿಸಿದರು.
ಕಂಪ್ಲಿ-ಗಂಗಾವತಿ ಸಂಪರ್ಕ ಸೇತುವೆಯನ್ನು 1941ರಲ್ಲಿ ನಿರ್ಮಿಸಿದ್ದು 80 ವರ್ಷಗಳು ಕಳೆದಿದೆ. ಅದರ ಆಯುಷ್ಯ ಸಹ ಮುಗಿದಿದೆ. ಪ್ರತಿವರ್ಷ ಜಲಾಶಯದಿಂದ ನೀರು ಬಿಟ್ಟರೂ ಸೇತುವೆ ಭರ್ತಿಯಾಗಲಿದೆ. ಸರ್ಕಾರ ಸೇತುವೆಯನ್ನು ನಿರ್ಮಿಸಿಕೊಡಬೇಕು. ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಗಮನಕ್ಕೂ ತರಲಾಗಿದೆ. ನೆರೆಯಿಂದ ಹಾನಿಯಾದ ಬೆಳೆಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕಂದಾಯ, ಕೃಷಿ ಇಲಾಖೆಯಿಂದ ಸಮೀಕ್ಷೆ ನಡೆಸಿ ಪರಿಹಾರ ವಿತರಿಸಲಾಗುವುದು. ಪರಿಹಾರ ಹಳೇ ಪದ್ದತಿಯಲ್ಲೇ ಇದ್ದು, ಅದನ್ನು ಬದಲಾವಣೆ ಮಾಡಬೇಕಾಗಿದೆ ಎಂದರು.
ಹೊಸಪೇಟೆ ಸಹಾಯಕ ಆಯುಕ್ತ ಲೋಕೇಶ್ ಮಾತನಾಡಿ, ತುಂಗಭದ್ರಾ ಜಲಾಶಯದ ಜಲಾನಯನ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಜಲಾಶಯಕ್ಕೂ ಹೆಚ್ಚಿನ ಪ್ರಮಾಣದಲ್ಲಿ ನೀರು ಬರುತ್ತಿದೆ. ಈ ನಿಟ್ಟಿನಲ್ಲಿ ಹೆಚ್ಚುವರಿ ನೀರನ್ಜು ನದಿಗೆ ಹರಿಸಲಾಗುತ್ತಿದ್ದು, ಯಾವುದೇ ನಷ್ಟ ಸಂಭವಿಸದಂತೆ ಮುಂಜಾಗ್ರತಾ ಕ್ರಮ ವಹಿಸಲಾಗಿದೆ. ನದಿಪಾತ್ರದ ಹೊಸಪೇಟೆ, ಕಂಪ್ಲಿ ತಾಲೂಕಿನ ತಲಾ ಐದು ಗ್ರಾಮಗಳಲ್ಲಿ ಕುಟುಂಬಗಳ ಸ್ಥಳಾಂತರ, ಗಂಜಿಕೇಂದ್ರ ಕಲ್ಪಿಸಲು ಜಿಲ್ಲಾಡಳಿತ ಸನ್ನದ್ಧವಾಗಿದೆ ಎಂದರು.