Advertisement
ಕೋವಿಡ್ 19 ಭೀತಿಯಿಂದ ಜನರು ಆತಂಕಗೊಂಡಿದ್ದು, ಮನೆಯಿಂದ ಹೊರಬರಲು ಹೆದರುವ ಸ್ಥಿತಿ ನಿರ್ಮಾಣವಾಗಿದೆ. ಇನ್ನೂ ಬೇರೆ ಊರುಗಳಿಗೆ ಹೊರಡಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದಾಗಿ ಸಾರಿಗೆ ಬಸ್‌ಗಳಲ್ಲಿ ಪ್ರಯಾಣಿಸುವವರ ಸಂಖ್ಯೆ ಸಾಕಷ್ಟು ಪ್ರಮಾಣದಲ್ಲಿ ಕುಸಿದಿದೆ. ಸೋಂಕು ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ವಾಯವ್ಯ ಸಾರಿಗೆ ಸಂಸ್ಥೆ ಕೆಲವೊಂದು ಅನುಸೂಚಿಗಳನ್ನು ಸ್ಥಗಿತಗೊಳಿಸಿದರೆ ಸರಕಾರ ಅಂತಾರಾಜ್ಯ ಬಸ್ ಸಂಚಾರಕ್ಕೆ ನಿರ್ಬಂಧ ಹೇರಿದೆ. ಈ ಹಿನ್ನೆಲೆಯಲ್ಲಿ ವಾಯವ್ಯ ಸಾರಿಗೆ ಸಂಸ್ಥೆಯ ಆದಾಯ ದಿಢೀರ್ ಕುಸಿತಗೊಂಡಿದ್ದು, ಅನುಸೂಚಿಗಳು ರದ್ಧತಿ 900 ತಲುಪಿದೆ. ಇದರಿಂದ ಸುಮಾರು 1.50 ಕೋಟಿ ರೂ. ಆದಾಯ ಖೋತಾ ಆಗುತ್ತಿದೆ.
Related Articles
Advertisement
ಮಹಾರಾಷ್ಟ್ರ ಬಸ್‌ಗೆ ನಿರ್ಬಂಧ : ವಿಜಯಪುರ ಮಾರ್ಗವಾಗಿ ಮಹಾರಾಷ್ಟ್ರಕ್ಕೆ ತೆರಳುವ ಹಾಗೂ ಆಗಮಿಸುವ ವಾಹನಗಳಿಗೆ ನಿರ್ಬಂಧ ಹೇರಿದ ಬೆನ್ನಲ್ಲೆ ಬೆಳಗಾವಿ ಜಿಲ್ಲೆಯ ಮೂಲಕ ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳಿಗೆ ತೆರಳುವ-ಆಗಮಿಸುವ
ವಾಹನಗಳ ಮೇಲೆ ಬೆಳಗಾವಿ ಜಿಲ್ಲಾಡಳಿತ ಕಡಿವಾಣ ಹೇರಿದೆ. ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಗ್ರಾಮೀಣ ವಿಭಾಗದಿಂದ ಬೆಳಗಾವಿ ಮೂಲಕ ಸಂಚರಿಸುವ ಮಿರಜ್-3, ಪಿಂಪ್ರಿ-3, ಶಿರಡಿ-2, ಮುಂಬಯಿ-2, ಪುಣಾ-1, ಇಚಲಕರಂಜಿ-1, ಬೋರವಿಲಿ-1, ಗೋವಾ ರಾಜ್ಯದ ಪಣಜಿ-7, ವಾಸ್ಕೋ2, ಮಡಗಾಂವ-1, ಮಾಪ್ಸಾ-1 ಬಸ್‌ಗಳು ಕಾರ್ಯಾಚರಣೆ ಮಾ. 20ರಿಂದ ಸ್ಥಗಿತಗೊಂಡಿವೆ. ವಾಯವ್ಯ ಸಾರಿಗೆ ಸಂಸ್ಥೆಯಿಂದ ಬೆಳಗಾವಿ ಮೂಲಕ ಮಹಾರಾಷ್ಟ್ರ-503, ಗೋವಾ-20 ಬಸ್‌ಗಳ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ.
ನಾಳೆ ಬಸ್ ಸಂಚಾರ ವಿರಳ : ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕರೆ ನೀಡಿರುವ ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಮಾ. 22ರಂದು ಬಸ್‌ಗಳ ಸಂಚಾರ ಸಾಕಷ್ಟು ಕಡಿಮೆಯಾಗಲಿವೆ. ಈಗಾಗಲೇ ಬೆಂಗಳೂರು ಕೇಂದ್ರ ಕಚೇರಿಯಿಂದ ಸುತ್ತೋಲೆ ಬಂದಿದ್ದು, ಅಂದಿನ ದಿನ ಅಗತ್ಯವಿದ್ದಲ್ಲಿ ಹಾಗೂ ನಿಲ್ದಾಣಗಳಲ್ಲಿ ಜನಸಂದಣಿ ಹೆಚ್ಚಾಗದಂತೆ ಹಾಗೂ ರಾತ್ರಿ 9 ನಂತರ ಮುಂಗಡ ಟಿಕೆಟ್ ಕಾಯ್ದಿರಿಸಿರುವುದರ ಮೇಲೆ ಬಸ್ ಕಾರ್ಯಾಚರಣೆಗೊಳಿಸುವಂತೆ ಸೂಚಿಸಲಾಗಿದೆ. ಸಂಸ್ಥೆ ವ್ಯಾಪ್ತಿಯ ಎಲ್ಲಾ ವಿಭಾಗಗಳ ಘಟಕದವರು ಇದನ್ನು ಪಾಲನೆ ಮಾಡಬೇಕು ಎಂದು ತಿಳಿಸಲಾಗಿದೆ. ಹೀಗಾಗಿ ಮಾ.22ರಂದು ಶೇ.10-15 ಮಾತ್ರ ಬಸ್ ಸಂಚಾರ ಇರಲಿದೆ.
ಕೋವಿಡ್ 19 ವೈರಸ್ ಹರಡುವುದನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ವ್ಯವಸ್ಥಾಪಕ ನಿರ್ದೇಶಕರ ಆದೇಶದ ಮೇರೆಗೆ ಅನುಸೂಚಿಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತದೆ. ಅಗತ್ಯತೆ ಮೇರೆಗೆ ಮಾತ್ರ ಬಸ್‌ಗಳ ಸಂಚಾರವಿದೆ. ಮಾ. 22ರಂದು ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ತೀರಾ ಅಗತ್ಯವಿದ್ದಲ್ಲಿ ಮಾತ್ರ ಬಸ್ ಕಾರ್ಯಾಚರಣೆಗೊಳ್ಳಲಿವೆ. ಮುಂದಿನ ದಿನಗಳಲ್ಲಿ ಪ್ರಯಾಣಿಕರ ಸಾಂದ್ರತೆ ಗಮನಿಸಿ ಬಸ್ ಕಾರ್ಯಾಚರಣೆ ಕುರಿತು ನಿರ್ಧಾರ ಕೈಗೊಳ್ಳಲಾಗುವುದು. -ಸಂತೋಷಕುಮಾರ, ಮುಖ್ಯ ಸಂಚಾರ ವ್ಯವಸ್ಥಾಪಕ