ನವದೆಹಲಿ: ಇದೇ ಮೊದಲ ಬಾರಿಗೆ ಜೂನ್ ತಿಂಗಳ ಮೊದಲಾರ್ಧದಲ್ಲಿ ಜಾಗತಿಕ ತಾಪಮಾನವು 1.5 ಡಿಗ್ರಿ ಸೆಲ್ಸಿಯಸ್ ಗಡುವನ್ನು ಮೀರಿದೆ.
ಹವಾಮಾನ ವೈಪರೀತ್ಯವು ಭೂಮಿಯ ಮೇಲೆ ಗಂಭೀರ ಪರಿಣಾಮ ಬೀರುವುದನ್ನು ತಡೆಯುವ ನಿಟ್ಟಿನಲ್ಲಿ ವಿಶ್ವಸಂಸ್ಥೆಯು ಜಾಗತಿಕ ತಾಪಮಾನಕ್ಕೆ 1.5 ಡಿ.ಸೆ.ನ ಗಡುವು ನೀಡಿತ್ತು. ಆದರೆ, ಪ್ರಸಕ್ತ ತಿಂಗಳ ಆರಂಭದಲ್ಲಿ ಜಾಗತಿಕ ತಾಪಮಾನವು 1.5 ಡಿ.ಸೆ.ನ ಮಿತಿಯನ್ನು ಮೀರಿದೆ.
ವಿಶ್ವಸಂಸ್ಥೆಯ ಈ ಮಿತಿಯು ಮೊದಲ ಬಾರಿಗೆ ಉಲ್ಲಂಘನೆಯಾಗಿದ್ದು 2015ರ ಡಿಸೆಂಬರ್‌ನಲ್ಲಿ. ಬಳಿಕ 2016 ಮತ್ತು 2020ರಲ್ಲಿ ಉತ್ತರ ಗೋಳಾರ್ಧದ ಚಳಿಗಾಲ ಮತ್ತು ವಸಂತ ಮಾಸದಲ್ಲಿ ತಾಪಮಾನ ಮಿತಿಯನ್ನು ದಾಟಿತ್ತು.
ಪ್ಯಾರಿಸ್ ಒಪ್ಪಂದ:
2016ರಲ್ಲಿ ಜಾರಿಯಾದ ಪ್ಯಾರಿಸ್ ಒಪ್ಪಂದದಲ್ಲಿ, ಅನಿಲ ಹೊರಸೂಸುವಿಕೆ ತಗ್ಗಿಸುವ ಮತ್ತು ಈ ಶತಮಾನದಲ್ಲಿ ಜಾಗತಿಕ ತಾಪಮಾನ ಏರಿಕೆಯನ್ನು 2 ಡಿ.ಸೆ.ಗೆ ಮಿತಿಗೊಳಿಸುವ ನಿಟ್ಟಿನಲ್ಲಿ ದೀರ್ಘಾವಧಿ ಧ್ಯೇಯವನ್ನು ಹಾಕಿಕೊಳ್ಳಲಾಗಿತ್ತು. ಆದರೆ, ದೀರ್ಘಾವಧಿ ಎಚ್ಚರಿಕೆಯ ರೂಪದಲ್ಲಿ ಈ ಮಿತಿಯನ್ನು ವಿಧಿಸಲಾಗಿತ್ತು. ಇದರಲ್ಲಿ ಎಲ್ಲೂ ದೈನಂದಿನ ಅಥವಾ ವಾರ್ಷಿಕ ತಾಪಮಾನ ಎಂದು ಉಲ್ಲೇಖ ಮಾಡಿರಲಿಲ್ಲ.