ಕನಕಪುರ: ಖಾತೆ ಮಾಡಿಸಿ ಕೊಡುವುದಾಗಿ ನಂಬಿಸಿ ಕುಟುಂಬದಿಂದ 1.42 ಲಕ್ಷ ಹಣ ಪಡೆದು ವಂಚಿಸಿರುವ ಘಟನೆ ನಗರ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.
ಬೆಂಗಳೂರಿನ ಟೀಚರ್ ಕಾಲೋನಿ, ಬನಶಂಕರಿ ನಿವಾಸಿ ಹೊನ್ನಮ್ಮ , ಕೆ.ಎಲ್. ಶಿವಪ್ರಸಾದ್ ಮತ್ತು ಬೆಂಗಳೂರಿನ ನಿವಾಸಿ ನಂಜಮ್ಮಣ್ಣಿ ವಂಚನೆಗೊಳಗಾದವರು. ಒಂದೇ ಪರಿವಾರದ ಅವರು ಕನಕಪುರದ ಬೂದಿಕೇರಿ ರಸ್ತೆಯ ತಮ್ಮ ಆಸ್ತಿಗೆ ಪೌತಿ ಖಾತೆ ಮಾಡಿಸಿಕೊಳ್ಳಲು ನಗರಸಭೆಗೆ ಅರ್ಜಿ ಸಲ್ಲಿಸಿದರು.
ಫೆ. 5ರಂದು ಪೌತಿ ಖಾತೆ ಅರ್ಜಿ ವಿಚಾರಣೆಗೆ ನಗರಸಭೆಗೆ ಬಂದಾಗ ಅಲ್ಲೇ ಇದ್ದ ಹೇರಿಂದ್ಯಾಪನಹಳ್ಳಿ ಹರೀಶ್ ಎಂದು ಪರಿಚಯ ಮಾಡಿಕೊಂಡ ವ್ಯಕ್ತಿ ನಾನು ನಗರಸಭೆ ಪೌರಾಯುಕ್ತರ ಪಿಎ ಪೌರಯುಕ್ತರ ಬಳಿ ಮಾತನಾಡಿ ನಿಮಗೆ ಖಾತೆ ಮಾಡಿಸಿಕೊಡುತ್ತೇನೆ ಎಂದು ನಂಬಿಸಿದ್ದಾನೆ. ಅಲ್ಲಿಯೇ ಅನಾಮ ದೇಯ ವ್ಯಕ್ತಿಗೆ ಕರೆ ಮಾಡಿ ಇವರೇ ಪೌರಾಯುಕ್ತರೆಂದು ತಿಳಿಸಿ ಶಿವಪ್ರಸಾದ್ ಜತೆ ಮಾತನಾಡಿಸಿದ್ದಾನೆ. ಅವರು ನಿಮ್ಮ ಖಾತೆ ಕೆಲಸ ಪೂರ್ಣಗೊಂಡಿದೆ ಖಾತೆಗೆ ಶುಲ್ಕ 1,42,900 ಹಣವನ್ನು ಅಲ್ಲೇ ಇರುವ ನಮ್ಮ ಪಿಎ ಹರೀಶ್ ಅವರಿಗೆ ನೀಡಿ ಎಂದಿದ್ದಾರೆ.
ಕುಟುಂಬಸ್ಥರು 9,000ಗಳನ್ನು ಆತನಿಗೆ ಸ್ಥಳದಲ್ಲೇ ಕೊಟ್ಟು ಉಳಿದ ಹಣವನ್ನು ಬೆಂಗಳೂರಿನ ಬಿಬಿಎಂಪಿ ಕಚೇರಿ ಹತ್ತಿರ ಬಂದು ತಲುಪಿಸುವುದಾಗಿ ಹೇಳಿ ಹೋಗಿದ್ದಾರೆ. ಅದೇ ದಿನ ಮಧ್ಯಾಹ್ನ 1 ಗಂಟೆ ವೇಳೆಗೆ ಬೆಂಗಳೂರಿನ ಬಿಬಿಎಂಪಿ ಕಚೇರಿ ಮುಂಭಾಗ ಇರುವ ಆರ್‌ಟಿಒ ಕಚೇರಿ ಗೇಟ್ ಬಳಿ ಕುಟುಂಬ ಹೋಗುತ್ತಿದ್ದಂತೆ ಪಿಎ ಎಂದು ಹೇಳಿಕೊಂಡಿದ್ದ ವ್ಯಕ್ತಿಯೇ 1,33,900ಗಳನ್ನು ಪಡೆದು ಖಾತೆಯನ್ನು ನಿಮ್ಮ ಮನೆಗೆ ತಲುಪಿಸುವುದಾಗಿ ಹೇಳಿ ಪರಾರಿಯಾಗಿದ್ದಾನೆ. ಮರುದಿನ ಕರೆ ಮಾಡಿದಾಗ ಮೊಬೈಲ್ ಸ್ವಿಚ್‌ಆಫ್ ಆಗಿದ್ದು, ತಾವು ಮೋಸಹೋಗಿರುವುದು ಬೆಳಕಿಗೆ ಬಂದಿದೆ.
ಬಳಿಕ ನಗರಸಭೆ ಪೌರಾಯುಕ್ತ ಮಹಾದೇವ್ ಅವರಿಗೆ ತಿಳಿಸಿದ್ದು, ಆಯು ಕ್ತರು ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ನಗರ ಸಭೆಯ ಸಿಸಿ ಟಿವಿ ದೃಶ್ಯಾವಳಿಗಳನ್ನು ಆಧರಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.