ಬೆಂಗಳೂರು: “ನಮ್ಮ ಮೆಟ್ರೋ’ ಎರಡನೇ ಹಂತದಲ್ಲಿ ಬರುವ ಡೈರಿ ವೃತ್ತ-ವೆಲ್ಲಾರ ಜಂಕ್ಷನ್ ಹಾಗೂ ಟ್ಯಾನರಿ ರಸ್ತೆ ನಾಗವಾರ ನಡುವಿನ ಸುರಂಗ ಮಾರ್ಗ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ ಗುತ್ತಿಗೆ ಪಡೆದ ಕಂಪನಿಗಳಿಗೆ ಗುರುವಾರ ಬಿಎಂಆರ್‌ಸಿಎಲ್ ಒಪ್ಪಿಗೆ ಪತ್ರ ನೀಡಿತು.
ಈ ಮೂಲಕ ಇಡೀ 14 ಕಿ.ಮೀ. ಸುರಂಗ ಮಾರ್ಗದ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಂತಾಗಿದೆ. ಉದ್ದೇಶಿತ ಮಾರ್ಗವನ್ನು ನಾಲ್ಕು ಪ್ಯಾಕೇಜ್‌ಗಳಾಗಿ ವಿಂಗಡಿಸಲಾಗಿತ್ತು. ಈ ಪೈಕಿ ಈಗಾಗಲೇ ಪ್ಯಾಕೇಜ್ 2 ಮತ್ತು 3ರಲ್ಲಿ ಕಾಮಗಾರಿ ಆರಂಭಗೊಂಡಿದೆ. ಉಳಿದ ಪ್ಯಾಕೇಜ್ 1 ಮತ್ತು 4ರ (ಕ್ರಮವಾಗಿ ಡೈರಿ ವೃತ್ತದಿಂದ ವೆಲ್ಲಾರ ಜಂಕ್ಷನ್ ಮತ್ತು ಟ್ಯಾನರಿ ರಸ್ತೆಯಿಂದ ನಾಗವಾರ) ನಿರ್ಮಾಣ ಕಾಮಗಾರಿ ಟೆಂಡರ್ ಪ್ರಕ್ರಿಯೆಯೂ ಪೂರ್ಣಗೊಂಡಿದೆ.
ಪ್ಯಾಕೇಜ್-1 ಅನ್ನು ಮುಂಬೈನ ಎಎಫ್ಕಾನ್ಸ್ ಇನ್‌ಫ್ರಾಸ್ಟ್ರಕ್ಚರ್ ಲಿ.ಹಾಗೂ ಪ್ಯಾಕೇಜ್-4 ಅನ್ನು ಕೊಲ್ಕತ್ತದ ಐಟಿಡಿ ಸಿಮೆಂಟೇಶನ್ ಇಂಡಿಯಾ ಲಿ., ಗುತ್ತಿಗೆ ಪಡೆದಿವೆ. ಎರಡು ತಿಂಗಳಲ್ಲಿ ಕಾರ್ಯಾರಂಭ ಕೂಡ ಮಾಡಲಿವೆ. ಡೈರಿ ವೃತ್ತದ ಸೌತ್‌ರ್‍ಯಾಂಪ್ ನಂತರ ಬರುವ ಸ್ವಾಗತ್ ರಸ್ತೆಯ ಎತ್ತರಿಸಿದ ಮಾರ್ಗದಿಂದ ವೆಲ್ಲಾರ ಜಂಕ್ಷನ್‌ವರೆಗೆ 3.655 ಕಿ.ಮೀ. ಉದ್ದದಲ್ಲಿ 1,526.33 ಕೋಟಿ ವೆಚ್ಚದಲ್ಲಿ ಸುರಂಗ ನಿರ್ಮಾಣಗೊಳ್ಳುತ್ತಿದೆ. 2.68 ಕಿ.ಮೀ. ಉದ್ದದಲ್ಲಿ ಡೈರಿ ವೃತ್ತ, ಮೈಕೋ ಇಂಡಸ್ಟ್ರೀಸ್ ಮತ್ತು ಲ್ಯಾಂಗ್‌ಫೋರ್ಡ್ ಟೌನ್ ಎಂಬ ಮೂರು ಸುರಂಗ ನಿಲ್ದಾಣಗಳು ಬರಲಿವೆ.
ಟನಲ್ ಬೋರಿಂಗ್ ಮಷಿನ್ (ಟಿಬಿಎಂ) ಸೇರಿದಂತೆ ಎಲ್ಲ ವೆಚ್ಚವನ್ನೂ ಇದು ಒಳಗೊಂಡಿದೆ. ಅದೇ ರೀತಿ, ಟ್ಯಾನರಿ ರಸ್ತೆಯಿಂದ ನಾಗವಾರವರೆಗೆ 4.59 ಕಿ.ಮೀ. ಉದ್ದದಲ್ಲಿ 1,771.25 ಕೋಟಿ ವೆಚ್ಚದಲ್ಲಿ ಸುರಂಗ ಮಾರ್ಗ ನಿರ್ಮಾಗೊಳ್ಳುತ್ತಿದೆ. ಇಲ್ಲಿ 3.12 ಕಿ.ಮೀ. ಉದ್ದದಲ್ಲಿ ಟ್ಯಾನರಿ ರಸ್ತೆ, ವೆಂಕಟೇಶಪುರ, ಅರೇಬಿಕ್ ಕಾಲೇಜು ಮತ್ತು ನಾಗವಾರ ಎಂಬ ನಾಲ್ಕು ನಿಲ್ದಾಣಗಳು ತಲೆಯೆತ್ತಲಿವೆ ಎಂದು ನಿಗಮದ ಪ್ರಕಟಣೆಯಲ್ಲಿ ತಿಳಿಸಿದೆ. ಒಟ್ಟಾರೆ ಇಡೀ ಮಾರ್ಗವನ್ನು 2024ಕ್ಕೆ ಪೂರ್ಣಗೊಳಿಸುವ ಗುರಿಯನ್ನು ಬಿಎಂಆರ್ ಸಿಎಲ್ ಹೊಂದಿದೆ. 2014-15ರಲ್ಲಿ ಇದಕ್ಕೆ ಅನುಮೋದನೆ ದೊರಕಿತ್ತು.