ಗದಗ: ಕೇಂದ್ರ ಸರಕಾರದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿಯಡಿ ರೈತರ ಖಾತೆಗೆ ನೇರವಾಗಿ ಹಣ ಸಂದಾಯ ಮಾಡುವ ಪರಿಷ್ಕೃತ ಯೋಜನೆಯಿಂದ ಜಿಲ್ಲೆಯಲ್ಲಿ ಫಲಾನುಭವಿಗಳ ಸಂಖ್ಯೆ ದುಪ್ಪಟ್ಟಾಗಿದೆ. ಯೋಜನೆಗೆ ರೈತರಿಂದ ದಾಖಲೆ ಸಂಗ್ರಹ ಪ್ರಗತಿ ಶೇ.72ರಷ್ಟಾಗಿದ್ದು, ಈಗಾಗಲೇ ಮೊದಲ ಕಂತಿನಲ್ಲಿ 9 ಸಾವಿರ ರೈತರ ಖಾತೆಗಳಿಗೆ 2 ಸಾವಿರ ರೂ. ಜಮಾ ಆಗಿದೆ. ಇನ್ನುಳಿದವರಿಗೆ ಕೆಲವೇ ದಿನಗಳಲ್ಲಿ ಹಣ ಬಿಡುಗಡೆಯಾಗಲಿದೆ.
ಕೇಂದ್ರ ಸರಕಾರ ದೇಶದ ಸಣ್ಣ ಮತ್ತು ಅತಿಸಣ್ಣ ರೈತರ ಬ್ಯಾಂಕ್ ಖಾತೆಗೆ ನೇರವಾಗಿ ವಾರ್ಷಿಕ ಮೂರು ಕಂತುಗಳಲ್ಲಿ ಒಟ್ಟು 6 ಸಾವಿರ ರೂ. ಜಮೆ ಮಾಡುವುದಾಗಿ ಬಜೆಟ್‌ನಲ್ಲಿ ಪ್ರಕಟಿಸಿತ್ತು. ಲೋಕಸಭಾ ಸಾರ್ವತ್ರಿಕಾ ಚುನಾವಣಾ ಹೊಸ್ತಿಲಲ್ಲಿ ಕೇಂದ್ರ ಸರಕಾರ ಘೊಷಿಸಿದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಭಾರೀ ಚರ್ಚೆಗೆ ಗ್ರಾಸ ವಾಗಿತ್ತು. ಯೋಜನೆ ಅರ್ಜಿ ಸ್ವೀಕರಿಸುವ ಪ್ರಕ್ರಿಯೆ ಪ್ರಗತಿಯಲ್ಲಿದ್ದಾಗಲೇ ಲೋಕಸಭೆ ಚುನಾವಣೆ ಘೋಷಣೆಯಾಗಿತ್ತು. ಮಾದರಿ ನೀತಿ ಸಂಹಿತೆ ಹಿನ್ನೆಲೆಯಲ್ಲಿ ನೋಂದಣಿ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಈ ವೇಳೆಗೆ ಜಿಲ್ಲೆಯಲ್ಲಿ ನೋಂದಾಯಿಸಿಕೊಂಡಿದ್ದ 18 ಸಾವಿರ ರೈತರಲ್ಲಿ 9 ಸಾವಿರ ರೈತರ ಖಾತೆಗಳಿಗೆ ಮೊದಲ ಕಂತಿನಲ್ಲಿ ತಲಾ 2 ಸಾವಿರ ರೂ. ಜಮಾ ಆಗಿದೆ.
ಬಳಿಕ ನಡೆದ 17ನೇ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರವೇ ಮತ್ತೆ ಗದ್ದುಗೆ ಏರಿದ್ದು, ಮೋದಿ ಸರಕಾರದ ಮಹತ್ವಾಕಾಂಕ್ಷಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅನುಷ್ಠಾನವನ್ನು ಮತ್ತಷ್ಟು ಚುರುಕುಗೊಳಿಸಿದೆ. ಚುನಾವಣಾ ಪೂರ್ವದಲ್ಲಿ ಈ ಯೋಜನೆಯನ್ನು ಸಣ್ಣ ಹಿಡುವಳಿದಾರರಿಗೆ ಸೀಮಿತಗೊಳಿಸಲಾಗಿತ್ತು. ಇದೀಗ ಸರಕಾರಿ ನೌಕರರು ಮತ್ತು ಆದಾಯ ತೆರಿಗೆ ಪಾವತಿದಾರರು ಹಾಗೂ ಸಾಂವಿಧಾನಿಕ ಹುದ್ದೆಯನ್ನು ಹೊಂದಿರುವವರನ್ನು ಹೊರತಾಗಿ ಇನ್ನುಳಿದ ಎಲ್ಲ ರೈತರಿಗೆ ವಿಸ್ತರಿಸಲಾಗಿದೆ. ಹೀಗಾಗಿ ಜಿಲ್ಲೆಯಲ್ಲಿ ಸುಮಾರು 1.80 ಲಕ್ಷ ರೈತರ ಪೈಕಿ ಸುಮಾರು 1.50 ಲಕ್ಷ ರೈತರಿಗೆ ಇದರ ಲಾಭವಾಗಬಹುದು ಎನ್ನುತ್ತಾರೆ ಕೃಷಿ ಇಲಾಖೆಗಳ ಅಧಿಕಾರಿಗಳು.
ಅರ್ಜಿ ಸಲ್ಲಿಕೆ ಕಡ್ಡಾಯ: ಪ್ರಧಾನಮಂತ್ರಿ ಕಿಸಾನ್ ನಿಧಿ ಸಮ್ಮಾನ್ ಯೋಜನೆ ಪ್ರಯೋಜನ ಪಡೆಯಲು ರೈತರು ಅರ್ಜಿ ಸಲ್ಲಿಸಲೇಬೇಕು. ಅರ್ಜಿಯೊಂದಿಗೆ ಉತಾರ(ಪಹಣಿ), ಆಧಾರ್ ಕಾರ್ಡ್ ಪ್ರತಿ ಸಲ್ಲಿಸುವುದು ಕಡ್ಡಾಯ. ಆದರೆ, ಯೋಜನೆಗೆ ಅರ್ಹರಾಗಿದ್ದರೂ, ಆಧಾರ್ ತಿದ್ದುಪಡಿ, ಹೊಸ ಆಧಾರ್ ಕಾರ್ಡ್ ನೋಂದಣಿಗಾಗಿ ಜನರು ಆಧಾರ್ ನೋಂದಣಿ ಕೇಂದ್ರಗಳಿಗೆ ಪ್ರದಕ್ಷಿಣೆ ಹಾಕುವಂತಾಗಿದೆ. ಸರ್ವರ್ ಸಮಸ್ಯೆ, ವಿವಿಧ ಕಾರಣಗಳಿಂದಾಗಿ ಬ್ಯಾಂಕ್‌ಗಳಲ್ಲಿ ಆಧಾರ್ ನೋಂದಣಿ ಸ್ಥಗಿತಗೊಳಿಸಿದ್ದರಿಂದ ಸಾರ್ವಜನಿಕರು ಪರದಾ ಡುವಂತಾಗಿದೆ. ಇನ್ನುಳಿದಂತೆ ಈಗಾಗಲೇ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿರುವ ರೈತರಿಗೆ ಜುಲೈ ಅಥವಾ ಆಗಸ್ಟ್ ಮೊದಲ ವಾರದಲ್ಲಿ ‘ಪ್ರಧಾನಮಂತ್ರಿ ರೈತ ಸಮ್ಮಾನ್ ನಿಧಿ’ ಯೋಜನೆ ಮೊದಲ ಕಂತಿನ ಹಣ ಜಮಾ ಆಗಲಿದೆ ಎನ್ನಲಾಗಿದೆ.
•ವೀರೇಂದ್ರ ನಾಗಲದಿನ್ನಿ