ಪಣಜಿ: 2023-24ನೇ ಸಾಲಿನಲ್ಲಿ 23 ಸಾವಿರ ವಿದ್ಯಾರ್ಥಿಗಳಿಗೆ ರೈನ್‍ಕೋಟ್ ಮತ್ತು ಸಮವಸ್ತ್ರಕ್ಕಾಗಿ ರಾಜ್ಯ ಸರ್ಕಾರ 1 ಕೋಟಿ 29 ಲಕ್ಷ ರೂಪಾಯಿಗಳನ್ನು ವಿದ್ಯಾರ್ಥಿಗಳ ಪೋಷಕರ ಬ್ಯಾಂಕ್ ಖಾತೆಗೆ ಜಮಾ ಮಾಡಿದೆ ಎಂದು ಶಿಕ್ಷಣ ಸಚಿವ ಮತ್ತು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮಾಹಿತಿ ನೀಡಿದ್ದಾರೆ.
ಶಾಸಕ ವಿಜಯ್ ಸರ್ದೇಸಾಯಿ ವಿಧಾನಸಭಾ ಅಧಿವೇಶನದಲ್ಲಿ ಕೇಳಿದ ಪ್ರಶ್ನೆಗೆ ಮುಖ್ಯಮಂತ್ರಿ ಸಾವಂತ್ ಲಿಖಿತ ಉತ್ತರ ನೀಡಿದ್ದಾರೆ. ರಾಜ್ಯ ಸರ್ಕಾರವು ಸರ್ಕಾರಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ಮತ್ತು ರೈನ್‍ಕೋಟ್‍ಗಳನ್ನು ಖರೀದಿಸಲು ವಾರ್ಷಿಕವಾಗಿ ಹಣವನ್ನು ನೀಡುತ್ತದೆ ಎಂದರು.
ಶಾಲೆಗಳಿಗೆ ಗುಣಮಟ್ಟದ ಮಧ್ಯಾಹ್ನದ ಊಟ ಒದಗಿಸಲು ‘ಅಕ್ಷಯ ಪಾತ್ರ’ದೊಂದಿಗೆ ಗೋವಾ ಪಾಲುದಾರಿಕೆಯನ್ನು ಒಳಗೊಂಡಂತೆ, ಮಧ್ಯಾಹ್ನದ ಊಟದ ಬಗ್ಗೆಯೂ ಸರ್ದೇಸಾಯಿ ಪ್ರಶ್ನೆಗಳನ್ನು ಕೇಳಿದರು.
ಮುಖ್ಯಮಂತ್ರಿ ಈ ಕುರಿತು ಉತ್ತರ ನೀಡಿ, ಪ್ರಧಾನ ಮಂತ್ರಿ ಪೌಷ್ಠಿಕ ಯೋಜನೆಯಡಿ ನೀಡಲಾಗುವ ಮಧ್ಯಾಹ್ನದ ಊಟ, ಅಕ್ಷಯಪಾತ್ರ ಊಟವನ್ನು 5 ಸಾವಿರ ವಿದ್ಯಾರ್ಥಿಗಳಿಗೆ ತಲುಪಿಸಲಾಗುತ್ತದೆ. ಪ್ರಾಥಮಿಕ ವಿದ್ಯಾರ್ಥಿಗಳಿಗೆ 8 ರೂ., ಪ್ರೌಢ ವಿದ್ಯಾರ್ಥಿಗಳಿಗೆ 10 ರೂ. ದರ ನಿಗದಿಪಡಿಸಿದೆ. ಅಲ್ಲದೆ, ಕೇಂದ್ರದಿಂದ ಈ ಉದ್ದೇಶಕ್ಕಾಗಿ 1,363.49 ಲಕ್ಷ ರೂ. ಹಣ ಬಂದಿದೆ ಎಂಬ ಮಾಹಿತಿ ನೀಡಿದ ಅವರು ಕಳೆದ ವರ್ಷ 11 ಸಾವಿರದ 500 ವಿದ್ಯಾರ್ಥಿಗಳು ಪ್ರಯೋಜನ ಪಡೆದಿದ್ದರು ಎಂದು ವಿವರಿಸಿದರು.
ಕಳೆದ ವರ್ಷ ರಾಜ್ಯದ 11 ಸಾವಿರದ 500 ವಿದ್ಯಾರ್ಥಿಗಳಿಗೆ ಸಮವಸ್ತ್ರಕ್ಕೆ ತಲಾ 600 ರೂ. ಒಟ್ಟು 69 ಲಕ್ಷ ರೂ.ಗಳನ್ನು ನೀಡಲಾಗಿದೆ. 12 ಸಾವಿರ ವಿದ್ಯಾರ್ಥಿಗಳಿಗೆ ರೈನ್‍ಕೋಟ್‍ಗಾಗಿ ನೆರವು ನೀಡಲಾಗಿದೆ. ಪ್ರತಿ ವಿದ್ಯಾರ್ಥಿಗೆ 500 ರೂ.ನಂತೆ ಫಲಾನುಭವಿ ವಿದ್ಯಾರ್ಥಿಗಳ ಪೋಷಕರ ಬ್ಯಾಂಕ್ ಖಾತೆಗೆ 60 ಲಕ್ಷ ರೂ. ಇದನ್ನು ಸಿಎಜಿ ಆಡಿಟ್ ಮಾಡಿಲ್ಲ. ಆದಾಗ್ಯೂ, ನಿಯಮಿತವಾಗಿ ಆಂತರಿಕ ತಪಾಸಣೆಗಳನ್ನು ಇಲಾಖೆಯು ನಡೆಸುತ್ತದೆ. ಸಿಎಜಿಯಿಂದ ಆಡಿಟ್ ಕೂಡ ನಡೆಸಲಾಗುವುದು ಎಂದು ಮುಖ್ಯಮಮಂತ್ರಿ ಉತ್ತರಿಸಿದರು.