ಕಲಬುರಗಿ: ನಗರದ ತಾಲೂಕು ಪಂಚಾಯಿತಿ ಆವರಣದಲ್ಲಿ ವ್ಯಕ್ತಿಯೊಬ್ಬರ ಸ್ಕೂಟರ್‌ನಲ್ಲಿಟ್ಟಿದ್ದ 1.25 ಲಕ್ಷ ರೂ. ನಗದು ಹಣವನ್ನು ಕಳ್ಳತನ ಪ್ರಕರಣ ಸಂಬಂಧ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಇಬ್ಬರು ಆರೋಪಿಗಳನ್ನು ಸ್ಟೇಷನ್ ಬಜಾರ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ನೆಲ್ಲೂರು ಜಿಲ್ಲೆ ಬೊಗುಲ ಮಂಡಲಂ ಬಳಿಯ ಕಪರಾಲ ತಿಪ್ಪ ಸಂಗಮದ ರಾಜು ಅಲಿಯಾಸ್ ಪೆಟ್ಲಾ ಚಿನ್ನ ಹಾಗೂ ಕಾವಲಿ ತಾಲೂಕಿನ ಕಪರಾಲ ತಿಪ್ಪ ಪಾತೂರಿನ ಸಾಗರ ಡೇವಿಡ್ ದಾನಿಯಲ್ ಎಂಬುವವರೇ ಬಂಧಿತ ಆರೋಪಿಗಳು.
ಇದೇ ಫೆ.5ರಂದು ನಂದಿಕೂರ ತಾಂಡಾದ ಖಾಸಗಿ ಶಾಲೆ ಶಿಕ್ಷಕ ಹಮೀರಸಾಬ್ ಉತ್ನಾಳ ಸರ್ದಾರ ವಲ್ಲಭಾಭಾಯಿ ಪಟೇಲ್ ವೃತ್ತದ ಸಮೀಪ ಕೆನರಾ ಬ್ಯಾಂಕ್ ಶಾಖೆಯಿಂದ 1.25 ಲಕ್ಷ ಹಣ ಡ್ರಾ ಮಾಡಿಕೊಂಡು ಸ್ಕೂಟರ್‌ನ ಡಿಕ್ಕಿಯಲ್ಲಿ ಇರಿಸಿಕೊಂಡಿದ್ದರು. ಬಿಸಿಯೂಟದ ನೌಕರರ ಬಿಲ್ ಕೊಡಲೆಂದು ತಾಪಂ ಕಚೇರಿಗೆ ತೆರಳಿದ್ದರು. ಈ ಸಂದರ್ಭದಲ್ಲಿ ಡಿಕ್ಕಿಯಲ್ಲಿದ್ದ ಹಣ ಕಳುವಾಗಿತ್ತು.
ಈ ಕುರಿತ ದೂರಿನ ಅನ್ವಯ ಡಿಸಿಪಿ ಅಡ್ಮೂರು ಶ್ರೀನಿವಾಸಲು ಮಾರ್ಗದರ್ಶನದಲ್ಲಿ ಸ್ಟೇಶನ್ ಬಜಾರ್ ಠಾಣೆಯ ಇನ್‌ಸ್ಟೆಕ್ಟರ್ ಸಿದ್ದರಾಮೇಶ್ವರ ಗಡೇದ, ಎಎಸ್‌ಐ ನಜಮೋದ್ದೀನ್, ಹೆಡ್ ಕಾನ್ ಸ್ಟೆಬಲ್ ಶಿವಾನಂದ ಮತ್ತು ಸಿಬ್ಬಂದಿಯಾದ ಮೊಹಸಿನ್, ಭೋಗೇಶ ಅವರನ್ನೊಳಗೊಂಡ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಬಂಧಿತ ಆರೋಪಿಗಳಿಂದ ಕಳುವಾಗಿದ್ದ ನಗದು ಹಾಗೂ ಕೃತ್ಯಕ್ಕೆ ಬಳಸಿದ ಬೈಕ್ ವಶಕ್ಕೆ ಪಡೆದಿದ್ದಾರೆ.