Advertisement

ವರ್ಷಕ್ಕೆ 1.20 ಕೋಟಿ ನಿರುದ್ಯೋಗ ಸೃಷ್ಟಿ: ಡಾ.ಹರೀಶ್‌

12:00 PM Jul 12, 2019 | Suhan S |

ಮಂಡ್ಯ: ಭಾರತದಲ್ಲಿ ಜನಸಂಖ್ಯಾ ಸ್ಫೋಟ ಮಿತಿ ಮೀರುತ್ತಿದೆ. ಪ್ರತಿ ತಿಂಗಳಿಗೆ 18 ವರ್ಷ ಮೀರಿದ ಯುವಕರ ಸಂಖ್ಯೆ 10 ಲಕ್ಷಕ್ಕೆ ಹೆಚ್ಚಳವಾಗುತ್ತಿದ್ದರೆ ವಾರ್ಷಿಕ 1.20 ಕೋಟಿ ನಿರುದ್ಯೋಗಿಗಳು ಸೃಷ್ಟಿಯಾಗುತ್ತಿದ್ದಾರೆ ಎಂದು ಮಿಮ್ಸ್ ಸಮುದಾಯಶಾಸ್ತ್ರ ವೈದ್ಯ ವಿಭಾಗದ ಮುಖ್ಯಸ್ಥ ಡಾ.ಹರೀಶ್‌ ಆತಂಕ ವ್ಯಕ್ತಪಡಿಸಿದರು.

Advertisement

ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಭಾರತೀಯ ರೆಡ್‌ ಕ್ರಾಸ್‌ ಸಂಸ್ಥೆ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಕುಟುಂಬ ಕಲ್ಯಾಣ ನಿಭಾಯಿಸುವ ಜವಾಬ್ದಾರಿ, ತಾಯಿ ಮತ್ತು ಮಗುವಿನ ಆರೋಗ್ಯದ ಪೂರ್ಣ ತಯಾರಿ ಘೋಷಣೆಯೊಂದಿಗೆ ನಡೆದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹವಾಮಾನ-ಸಂಸ್ಕೃತಿ ಪೂರಕ: ಭಾರತದ ಹವಾಮಾನ ಮತ್ತು ಸಂಸ್ಕೃತಿ ಜನಸಂಖ್ಯೆ ಹೆಚ್ಚಳಕ್ಕೆ ಅನುಕೂಲವಾಗಿದೆ. ಗ್ರಾಮೀಣ ಜನರು ಹೆಚ್ಚು ಸಂತಾನ ಮಾಡಿಕೊಳ್ಳುವತ್ತ ಆಸಕ್ತಿ ವಹಿಸಿದ್ದಾರೆ. ಬಾಲ್ಯ ವಿವಾಹ, ಸಂತಾನ ಹರಣ ಚಿಕಿತ್ಸೆ ಪಡೆಯದಿರುವುದು, ಗಂಡು ಮಕ್ಕಳ ಬಯಕೆ, ಕೃಷಿ ಮೇಲಿನ ವಿಪರೀತ ಅವಲಂಬನೆ ಹಾಗೂ ಧಾರ್ಮಿಕ ಅಪನಂಬಿಕೆ ಹೀಗೆ ಅನೇಕಾನೇಕ ಕಾರಣಗಳೂ ಕೂಡ ಜನಸಂಖ್ಯೆ ಬೆಳೆಯಲು ಕಾರಣವಾಗಿದೆ ಎಂದು ತಿಳಿಸಿದರು.

ಒಂದು ಮಗುವಿಗೆ ಬದ್ಧ: ವಿಶ್ವದ 770 ಕೋಟಿ ಜನಸಂಖ್ಯೆಯಲ್ಲಿ 137 ಕೋಟಿ ಭಾರತೀಯರೇ ಇದ್ದಾರೆ. ಪ್ರಪಂಚದ ಪ್ರತಿ ನಾಲ್ಕು ಮಕ್ಕಳ ಜನನದಲ್ಲಿ ಒಂದು ಭಾರತೀಯ ಮಗು ಇದೆ. ಜನಸಂಖ್ಯಾ ಬೆಳವಣಿಗೆ ಅಭಿವೃದ್ಧಿಗೆ ಮಾರಕವಾಗಿದೆ. ಹೀಗಾಗಿ ಒಂದು ಕುಟುಂಬಕ್ಕೆ ಒಂದು ಮಗು ಪಡೆಯುವ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರಾಗುವುದು ಅನಿವಾರ್ಯವಾಗಿದೆ ಎಂದು ಹೇಳಿದರು.

ವಿಶ್ವದಲ್ಲಿ ಎರಡನೇ ಸ್ಥಾನ: ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಪಿ.ಕೆ.ಗಾಯತ್ರಿ ಮಾತನಾಡಿ, ವಿಶ್ವದ ಜನಸಂಖ್ಯೆಯಲ್ಲಿ ನಮ್ಮ ದೇಶ ಎರಡನೇ ಸ್ಥಾನದಲ್ಲಿದೆ. ಇದರಿಂದ ದೇಶದ ಅಭಿವೃದ್ಧಿಗೆ ತೊಡಕಾಗಿದ್ದು, ನಿರು ದ್ಯೋಗ, ಬಡತನ, ಆಹಾರ ಸೇರಿ ಮೂಲ ಸೌಕರ್ಯದ ಕೊರತೆಯಾಗಿದೆ. ಯುವಜನತೆ ಹೆಚ್ಚಾಗಿದ್ದರೂ ದುಡಿಯುವ ಕೈಗಳಿಗೆ ಕೆಲಸವಿಲ್ಲದಂತಾಗಿದೆ. ಹೀಗಾಗಿ ಜನಸಂಖ್ಯೆ ನಿಯಂತ್ರಣ ಅಗತ್ಯವಾಗಿದ್ದು, ಜಿಲ್ಲಾಡಳಿತ ಈ ಕುರಿತು ಅಗತ್ಯ ಕ್ರಮ ಕೈಗೊಂಡು ದೇಶದ ಅಭಿವೃದ್ಧಿಗೆ ಪೂರಕ ವಾತಾವರಣ ಸೃಷ್ಟಿಸಬೇಕು ಎಂದು ಹೇಳಿದರು.

Advertisement

ಜಾಗೃತಿ ಜಾಥಾ: ನಗರದ ಸರ್‌ ಎಂ.ವಿಶ್ವೇಶ್ವರಯ್ಯ ಬಳಿ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಯಾಲಕ್ಕಿಗೌಡ ಅವರು ಜನಸಂಖ್ಯಾ ದಿನಾಚರಣೆ ಕುರಿತು ಜಾಗೃತಿ ಜಾಥಾಕ್ಕೆ ಚಾಲನೆ ನೀಡಿದರು. ಆಶಾ ಕಾರ್ಯಕರ್ತರು, ಶುಶ್ರೂಷಕಿಯರು, ನರ್ಸಿಂಗ್‌ ವಿದ್ಯಾರ್ಥಿಗಳು ಡಾ.ಬಿ.ಆರ್‌.ಅಂಬೇಡ್ಕರ್‌ ಭವನ ದವರೆಗೆ ಜಾಗೃತಿ ಜಾಥಾ ಮೆರವಣಿಗೆ ನಡೆಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಚ್.ಪಿ.ಮಂಚೇಗೌಡ, ಭಾರತೀಯ ರೆಡಾಸ್‌ ಸಂಸ್ಥೆ ಜಿಲ್ಲಾ ಘಟಕದ ಉಪಾಧ್ಯಕ್ಷೆ ಮೀರಾಶಿವಲಿಂಗಯ್ಯ, ವೈದ್ಯಾಧಿಕಾರಿಗಳಾದ ಡಾ.ಸುಭಾಷ್‌, ಡಾ.ಕೆ.ಆರ್‌.ಶಶಿಧರ್‌, ಡಾ.ಜವರೇ ಗೌಡ, ಡಾ.ಭವಾನಿ ಶಂಕರ್‌, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಪಿ.ಶಿವಾನಂದ ಮತ್ತಿತರರು ಹಾಜರಿದ್ದರು.

ದಕ್ಷಿಣ ಭಾರತದಲ್ಲಿ ಜನಸಂಖ್ಯಾ ನಿಯಂತ್ರಣ:

ದಕ್ಷಿಣ ಭಾರತದಲ್ಲಿ ಜನಸಂಖ್ಯಾ ನಿಯಂತ್ರಣಕ್ಕೆ ಬೇಕಾದ ಎಲ್ಲಾ ಅಂಶಗಳನ್ನು ಪಾಲನೆ ಮಾಡಲಾಗುತ್ತಿದೆ. ಜೊತೆಗೆ ಜನಸಂಖ್ಯೆಯೂ ನಿಯಂತ್ರಣವಾಗುತ್ತಿದೆ. ಆದರೆ, ಉತ್ತರ ಭಾರತದ ಬಿಹಾರ, ಜಾರ್ಖಂಡ್‌, ಛತ್ತೀಸಘಡ, ಅಸ್ಸಾಂ, ಉತ್ತರ ಪ್ರದೇಶ ಸೇರಿ ಅನೇಕ ರಾಜ್ಯಗಳಲ್ಲಿ ಜನಸಂಖ್ಯೆ ದುಷ್ಪರಿಣಾಮದ ಅರಿವಿಲ್ಲದೆ, ನಾಲ್ಕಕ್ಕಿಂತಲೂ ಹೆಚ್ಚು ಮಕ್ಕಳನ್ನು ಪಡೆಯುತ್ತಿದ್ದಾರೆ. ಉತ್ತರ ಭಾರತದಿಂದ ಉದ್ಯೋಗಕ್ಕಾಗಿ ದಕ್ಷಿಣ ಭಾರತಕ್ಕೆ ಬರುವವರ ಪ್ರಮಾಣ ಏರಿಕೆಯಾಗಿದೆ. ದೇಶಾದ್ಯಂತ ನಿರುದ್ಯೋಗ ಸಮಸ್ಯೆ ಕಾಡುತ್ತಿದೆ. ಜೊತೆಗೆ ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಅಭದ್ರತೆಗೆ ಕಾರಣವಾಗುತ್ತಿದೆ ಎಂದು ಡಾ.ಹರೀಶ್‌ ಆತಂಕ ವ್ಯಕ್ತಪಡಿಸಿದರು.
ಹೆಚ್ಚುತ್ತಿರುವ ಬಾಲ್ಯ ವಿವಾಹ: ವಿಷಾದ

ನಮ್ಮ ಜಿಲ್ಲೆಯಲ್ಲಿಯೂ ಬಾಲ್ಯ ವಿವಾಹ ಪ್ರಮಾಣ ಹೆಚ್ಚಾಗಿದ್ದು, ಅದರಿಂದ ಸಂತಾನ ಅವಧಿ ದೀರ್ಘ‌ವಾಗಿ ಹೆಚ್ಚು ಸಂತಾನಕ್ಕೆ ಅವಕಾಶ ಸಿಗುತ್ತಿದೆ. ಗ್ರಾಮೀಣ ಜನರಿಗೆ ಜನಸಂಖ್ಯೆ ಸ್ಫೋಟದಿಂದಾಗುವ ಸಮಸ್ಯೆ ತಿಳಿಸುವ ಮೂಲಕ, ನಿಯಂತ್ರಣಕ್ಕೆ ಅಗತ್ಯವಾದ ಎಲ್ಲಾ ಅಂಶಗಳನ್ನು ಅಳವಡಿಸಿಕೊಳ್ಳಲು ಜಾಗೃತಿ ಮೂಡಿಸಬೇಕಿದೆ. ಆರೋಗ್ಯ ಇಲಾಖೆ ಸಿಬ್ಬಂದಿ ಜೊತೆಗೆ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರು ಹೆಚ್ಚು ಶ್ರಮ ವಹಿಸಬೇಕಾದ ಅಗತ್ಯವಿದೆ. ಹೆಣ್ಣಾಗಲಿ-ಗಂಡಾಗಲಿ ಸಮವೆಂದು ತಿಳಿದು ಆ ಮಗುವಿಗೆ ಉತ್ತಮ ಶಿಕ್ಷಣ ಒದಗಿಸುವ ಮೂಲಕ ದೇಶಕ್ಕೆ ಸತøಜೆಯನ್ನಾಗಿ ರೂಪಿಸಬೇಕು. ಆಗ ಮಾತ್ರ ನಮ್ಮ ದೇಶದ ಸುಸ್ಥಿರ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಡಾ.ಹರೀಶ್‌ ತಿಳಿಸಿದರು.
Advertisement

Udayavani is now on Telegram. Click here to join our channel and stay updated with the latest news.

Next