ಚಿಕ್ಕಬಳ್ಳಾಪುರ: ಜಿಲ್ಲಾ ಕೇಂದ್ರದ ಪ್ರತಿಷ್ಠಿತ ಸರ್ಕಾರಿ ಕಾಲೇಜಿನ ಪ್ರಭಾರಿ ಪ್ರಾಂಶುಪಾಲರು ಪ್ರಚಲಿತ ಆರ್ಥಿಕ ನಿಯಮ ಉಲ್ಲಂ ಸಿ ಅಧಿಕಾರ ದುರ್ಬಳಕೆ ಮಾಡಿಕೊಂಡು ಕಾಲೇಜಿನ ಅರೆ ಸರ್ಕಾರಿ ಖಾತೆಗಳಿಂದ ಕೋಟ್ಯಂತರ ರೂ, ವೆಚ್ಚ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ನಗರದ ಎಂ.ಜಿ. ರಸ್ತೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅರ್ಥಶಾಸ್ತ್ರ ಸಹ ಪ್ರಾಧ್ಯಾಪಕರಾಗಿರುವ ಎಲ್.ನಾರಾಯಣಸ್ವಾಮಿ, ಕಾಲೇಜಿನ ಹಿರಿಯ ಉಪನ್ಯಾಸಕರಾಗಿರುವುದರಿಂದ ಅವರನ್ನು ಪ್ರಾಂಶುಪಾಲರ ಹುದ್ದೆಗೆ ಪ್ರಭಾರಿಯಾಗಿ ನಿಯೋಜಿಸಲಾಗಿತ್ತು.
ದೋಷಾರೋಪ ಪಟ್ಟಿ ಜಾರಿ: ಆದರೆ, ನಾರಾಯಣಸ್ವಾಮಿ, 2016 ಜು.1 ರಿಂದ 31, ಡಿಸೆಂಬರ್ 2018ರ ಅವಧಿಯಲ್ಲಿ ಕಾಲೇಜು ಪ್ರಾಂಶುಪಾಲರ ಹುದ್ದೆಯಲ್ಲಿ ಪ್ರಭಾರಿಯಾಗಿ ಕಾರ್ಯ ನಿರ್ವಹಿಸಿದರು. ಈ ವೇಳೆ ಕಾಲೇಜಿನ ಅರೆ ಸರ್ಕಾರಿ ಖಾತೆಗಳಿಂದ ಒಟ್ಟು ಸುಮಾರು 1,11,73,982 ರೂ, ಗಳನ್ನು ಪ್ರಚಲಿತ ಆರ್ಥಿಕ ನಿಯಮ ಉಲ್ಲಂ ಸಿ ವೆಚ್ಚ ಮಾಡಿರುವ ಗಂಭೀರ ಆರೋಪ ಕೇಳಿ ಬಂದಿದೆ. ಈಗಾಗಲೇ ಪ್ರಭಾರಿ ಪ್ರಾಂಶುಪಾಲ ಎಲ್.ನಾರಾಯಣಸ್ವಾಮಿ, ಕಾಲೇಜಿನ ವಿವಿಧ ಖಾತೆಗಳಿಂದ ಕೋಟ್ಯಂತರ ರೂ, ಹಣವನ್ನು ನಿಯಮ ಮೀರಿ ವೆಚ್ಚ ಮಾಡಿರುವ ಆರೋಪಕ್ಕೆ ಸಂಬಂಧಿಸಿದ್ದಂತೆ ಅವರ ವಿರುದ್ಧ ದೋಷಾರೋಪ ಪಟ್ಟಿಯನ್ನು ರಾಜ್ಯ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರು ಜಾರಿ ಮಾಡಿದ್ದಾರೆ. ಈ ಪ್ರಕರಣ ಶಿಕ್ಷಣ ವಲಯದಲ್ಲಿ ಹಾಗೂ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಪರೀಕ್ಷಾ ಅಕ್ರಮಕ್ಕೆ ಖ್ಯಾತಿ: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಬಂದ ಹಣ ಈ ಪರಿ ಆರ್ಥಿಕ ನಿಯಮಾವಳಿ ಮೀರಿ ವೆಚ್ಚ ಮಾಡಿರುವುದು ಸಾಕಷ್ಟು ಕುತೂಹಲ ಕೆರಳಿಸಿದೆ. ಈ ಹಿಂದೆ ಪದವಿ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳಿಂದ ನಕಲಿ ಮಾಡಿಸಿ ಅಕ್ರಮ ಪರೀಕ್ಷೆಗೆ ಸಾಕಷ್ಟು ಸಾಕ್ಷಿಯಾಗಿದ್ದ ಚಿಕ್ಕಬಳ್ಳಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಈಗ, ಸರ್ಕಾರದಿಂದ ಕಾಲೇಜು ಅಭಿವೃದ್ಧಿಗೆ ಬಂದ ಕೋಟ್ಯಂತರ ರೂ, ಹಣವನ್ನು ಆರ್ಥಿಕ ನಿಯಮ ಮೀರಿ ವೆಚ್ಚ ಮಾಡಿರುವುದರಿಂದ ಕಾಲೇಜು ಈಗ ಆರ್ಥಿಕ ಅಕ್ರಮಗಳಿಗೆ ಕುಖ್ಯಾತಿ ಆಗುವಂತೆ ಮಾಡಿದೆ.
ಕರ್ತವ್ಯದಿಂದ ಬಿಡುಗಡೆಗೆ ಆಯುಕ್ತರ ಆದೇಶ: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುವ ವೇಳೆ ಎಲ್.ನಾರಾಯಣಸ್ವಾಮಿ ವಿರುದ್ಧ ಪ್ರಚಲಿತ ಆರ್ಥಿಕ ನಿಯಮ ಉಲ್ಲಂ ಸಿ 1,11 ಕೋಟಿ ರೂ, ವೆಚ್ಚ ಮಾಡಿರುವ ಆರೋಪ ಕೇಳಿ ಬಂದಿದೆ. ಅಲ್ಲದೇ, ಅವರ ವಿರುದ್ಧ ದೋಷಾರೋಪ ಪಟ್ಟಿ ಜಾರಿಗೊಳಿಸಿದ ಬೆನ್ನಲ್ಲೇ ರಾಜ್ಯ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರಾದ ಅನಿರುದ್ಧ್ ಶ್ರವಣ್, ಕಳೆದ ಡಿ.18 ರಂದು ಕಾಲೇಜು ಜಂಟಿ ನಿರ್ದೇಶಕರಿಗೆ ಪತ್ರ ಬರೆದು ತಾವು ಕೂಡಲೇ ಚಿಕ್ಕಬಳ್ಳಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಭೇಟಿ ನೀಡಿ ಪ್ರಾಂಶುಪಾಲರಾಗಿ ಪ್ರಭಾರಿಯಲ್ಲಿರುವ ಎಲ್.ನಾರಾಯಣಸ್ವಾಮಿ ಅವರನ್ನು ಕೂಡಲೇ ಕಾಲೇಜಿನ ಕರ್ತವ್ಯದಿಂದ ಬಿಡುಗಡೆಗೊಳಿಸುವಂತೆ ಸೂಚಿಸಿದ್ದಾರೆ. ಆದರೆ, ಆಯುಕ್ತರು ಆದೇಶ ಮಾಡಿದರೂ ಎಲ್.ನಾರಾಯಣಸ್ವಾಮಿ, ಕಾಲೇಜಿನ ಪ್ರಾಂಶುಪಾಲರ ಹುದ್ದೆಗೆ ಅಂಟಿಕೊಂಡು ಇರುವುದು ಸಾಕಷ್ಟು ಅನುಮಾನ ಹಾಗೂ ಚರ್ಚೆಗೆ ಕಾರಣವಾಗಿದೆ.
ಸಾಕ್ಷ್ಯನಾಶದ ಸಾಧ್ಯತೆ ಹಿನ್ನೆಲೆ; ಶಿರಾಗೆ ವರ್ಗ: ಸದ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಭಾರಿ ಪ್ರಾಂಶುಪಾಲರಾಗಿದ್ದ ಎಲ್.ನಾರಾಯಣಸ್ವಾಮಿ ವಿರುದ್ಧ ಆರ್ಥಿಕ ನಿಯಮ ಉಲ್ಲಂಘನೆ ಆರೋಪ ಕೇಳಿ ಬಂದ ಕೂಡಲೇ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರು, ಪ್ರಭಾರಿ ಪ್ರಾಂಶುಪಾಲರು ಅಲ್ಲಿಯೇ ಇದ್ದರೆ ಸಾಕ್ಷಿನಾಶ ಮಾಡುವ ಸಾಧ್ಯತೆ ಇರುತ್ತದೆ ಎಂದು ಆಡಳಿತಾತ್ಮಕ ದೃಷ್ಟಿಯಿಂದ ಅವರನ್ನು ತುಮಕೂರು ಜಿಲ್ಲೆಯ ಶಿರಾದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ತಕ್ಷಣದಿಂದ ಜಾರಿಗೆ ಬರುವಂತೆ ನಿಯೋಜಿಸಿ ಆದೇಶಿಸಲಾಗಿದೆ. ಆದರೆ ಇದುವರೆಗೂ ಎಲ್.ನಾರಾಯಣಸ್ವಾಮಿ, ಇಲ್ಲಿನ ಪ್ರಾಂಶುಪಾಲರ ಪ್ರಭಾರವನ್ನು ಕಾಲೇಜಿನ ಇತರೇ ಹಿರಿಯ ಪ್ರಾಧ್ಯಾಪಕರಿಗೆ ವಹಿಸಿ ಬಿಡುಗಡೆಗೊಂಡಿಲ್ಲ.
ಕಾಲೇಜು ಪ್ರಾಂಶುಪಾಲ ಮೊಬೈಲ್ ಸ್ವಿಚ್‌ಆಫ್: ತಮ್ಮ ಮೇಲಿನ ಆರೋಪಗಳ ಬಗ್ಗೆ ಹಾಗೂ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರು ಜಾರಿ ಮಾಡಿರುವ ದೋಷಾರೋಪ ಪಟ್ಟಿ ಹಾಗೂ ಶಿರಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ನಿಯೋಜಿಸಿರುವ ಕುರಿತು ಪ್ರತಿಕ್ರಿಯೆ ಪಡೆಯಲು ಚಿಕ್ಕಬಳ್ಳಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಭಾರಿ ಪ್ರಾಂಶುಪಾಲ ಎಲ್.ನಾರಾಯಣಸ್ವಾಮಿ ಅವರ ಮೊ.9964540518ಕ್ಕೆ ಹಲವು ಬಾರಿ ಕರೆ ಮಾಡಿದರೂ ಅವರು ತಮ್ಮ ಮೊಬೈಲ್ ಸ್ವಿಚ್‌ಆಫ್ ಮಾಡಿದ್ದರು.
* ಕಾಗತಿ ನಾಗರಾಜಪ್ಪ