ನವದೆಹಲಿ: ಉದಯಪುರದಲ್ಲಿ ಹಾಡಹಗಲೇ ಟೈಲರ್ ಶಿರಚ್ಛೇದನ ಘಟನೆ ನಡೆದ ನಂತರ ಹತ್ಯೆಗೀಡಾಗಿದ್ದ ಹಿಂದೂ ಸಮಾಜ್ ಪಕ್ಷದ ಮುಖ್ಯಸ್ಥ ಕಮಲೇಶ್ ತಿವಾರಿ ಪತ್ನಿಗೆ ಅನಾಮಧೇಯ ಬೆದರಿಕೆ ಪತ್ರ ಬಂದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಸಾಗರ : ಬೆಳ್ಳಂಬೆಳಗ್ಗೆ ರಸ್ತೆ ಅಪಘಾತ : ಪೇಪರ್ ವಿತರಣೆಗೆ ಹೋಗಿದ್ದ ಯುವಕ ಸ್ಥಳದಲ್ಲೇ ಸಾವು
ಜೂನ್ 22ರಂದು ತಮ್ಮ ಲಕ್ನೋ ಮನೆಯಲ್ಲಿ ಬಿಳಿ ಬಣ್ಣದ ಲಕೋಟೆಯನ್ನು ಪಡೆದಿದ್ದು, ಇದರಲ್ಲಿ ಉರ್ದು ಭಾಷೆಯಲ್ಲಿ ಬರೆಯಲಾಗಿದೆ ಎಂದು ಕಮಲೇಶ್ ತಿವಾರಿ ಪತ್ನಿ ಕಿರಣ್ ತಿವಾರಿ ತಿಳಿಸಿದ್ದಾರೆ. ಬೆದರಿಕೆ ಪತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ, ಸಿಎಂ ಯೋಗಿ ಆದಿತ್ಯನಾಥ್ ಸೇರಿದಂತೆ ಹಲವು ಜನರ ಕಪ್ಪು-ಬಿಳುಪಿನ ಫೋಟೋಗಳು ಇದ್ದು, ನಮ್ಮ ಮುಂದಿನ ಗುರಿ ನೀವೇ… ಎಂದು ಉರ್ದುವಿನಲ್ಲಿ ಬರೆಯಲಾಗಿದೆ ಎಂದು ವರದಿ ವಿವರಿಸಿದೆ.
ಈ ಬಗ್ಗೆ ತಮಗೆ ದೂರು ಬಂದಿದ್ದು, ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಬಲಪಂಥೀಯ ಹಿಂದೂ ಸಮಾಜ್ ಪಕ್ಷದ ಅಧ್ಯಕ್ಷ ಕಮಲೇಶ್ ತಿವಾರಿ ಅವರನ್ನು 2018ರ ಅಕ್ಟೋಬರ್ 18ರಂದು ಲಕ್ನೋದಲ್ಲಿ ಗಂಟಲು ಸೀಳಿ ಹತ್ಯೆಗೈಯಲಾಗಿತ್ತು. ಉತ್ತರಪ್ರದೇಶದ ಲಕ್ನೋದಲ್ಲಿ ತಿವಾರಿ ಕಚೇರಿಯಲ್ಲಿದ್ದಾಗ ಈ ಘಟನೆ ನಡೆದಿತ್ತು.
2015ರ ಡಿಸೆಂಬರ್ ನಲ್ಲಿ ಕಮಲೇಶ್ ತಿವಾರಿ ಪ್ರವಾದಿ ಮೊಹಮ್ಮದ್ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡುವ ಮೂಲಕ ವಿವಾದಕ್ಕೀಡಾಗಿದ್ದರು. ಇದರಿಂದಾಗಿ ದೇಶದ ಹಲವೆಡೆ ಪ್ರತಿಭಟನೆ ನಡೆದಿದ್ದು, ತಿವಾರಿ ಶಿರಚ್ಛೇದನ ಮಾಡುವಂತೆ ಕೆಲವು ಸಂಘಟನೆಗಳು ಕರೆ ನೀಡಿದ್ದವು.