ಕೋಲ್ಕತಾ: ಶಿಕ್ಷಕರ ನೇಮಕಾತಿ ಹಗರಣದ ಆರೋಪಿಯಾಗಿರುವ ಪಶ್ಚಿಮ ಬಂಗಾಳದ ಕೈಗಾರಿಕಾ ಸಚಿವ ಪಾರ್ಥ ಚಟರ್ಜಿಯವರ ಆಪ್ತೆ ಅರ್ಪಿತಾಗೆ ಸೇರಿದ ಎರಡನೇ ಫ್ಲ್ಯಾಟ್ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದು, ಬರೋಬ್ಬರಿ 29 ಕೋಟಿ ರೂಪಾಯಿ ನಗದು ಹಾಗೂ 5 ಕೆಜಿ ಚಿನ್ನಾಭರಣ ವಶಪಡಿಸಿಕೊಂಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ: ʼಸಾವಿನಲ್ಲೂ ಸಿಂಪಥಿʼ ಗಿಟ್ಟಿಸುವ ಸರ್ಕಾರದ ವ್ಯರ್ಥ ಪ್ರಯತ್ನ ವಾಕರಿಕೆ ತರಿಸುತ್ತಿದೆ: HDK
ಸುದೀರ್ಘ 18 ಗಂಟೆಗಳ ಕಾಲ ಶೋಧ ಕಾರ್ಯಾಚರಣೆ ನಂತರ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಗುರುವಾರ (ಜುಲೈ 28) ಮುಂಜಾನೆ ಕೋಲ್ಕತಾದ ಬೆಘ್ಗಾರಿಯ ಪ್ರದೇಶದಲ್ಲಿರುವ ಅರ್ಪಿತಾ ನಿವಾಸದಿಂದ 10 ಟ್ರಂಕ್ ಗಳಲ್ಲಿ ನಗದನ್ನು ಕೊಂಡೊಯ್ದಿರುವುದಾಗಿ ವರದಿ ವಿವರಿಸಿದೆ.
ಅರ್ಪಿತಾ ಮುಖರ್ಜಿಯ ಎರಡನೇ ಫ್ಲ್ಯಾಟ್ ನಲ್ಲಿ ದೊರೆತ ನಗದನ್ನು ಲೆಕ್ಕ ಹಾಕಲು ಮೂರು ಯಂತ್ರಗಳನ್ನು ಬಳಸಿಕೊಳ್ಳಲಾಗಿತ್ತು ಎಂದು ಜಾರಿ ನಿರ್ದೇಶನಾಲಯದ ಮೂಲಗಳು ತಿಳಿಸಿವೆ. ಶಿಕ್ಷಕರ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜುಲೈ 23ರಂದು ಪಾರ್ಥ ಚಟರ್ಜಿಯನ್ನು ಬಂಧಿಸಲಾಗಿತ್ತು.
ಕಳೆದ ವಾರ ಚಟರ್ಜಿ ಆಪ್ತೆ ಅರ್ಪಿತಾ ಮುಖರ್ಜಿ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದ್ದು, 21 ಕೋಟಿ ರೂ. ನಗದು, 2 ಕೋಟಿ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿತ್ತು. ಅಲ್ಲದೇ 40 ಪುಟಗಳ ಡೈರಿಯೊಂದು ಸಿಕ್ಕಿದ್ದು, ತನಿಖಾಧಿಕಾರಿಗಳಿಗೆ ಮಹತ್ವದ ಸುಳಿವು ಸಿಕ್ಕಂತಾಗಿತ್ತು ಎಂದು ವರದಿ ವಿವರಿಸಿದೆ.
ಅರ್ಪಿತಾ ಮೊದಲ ಹಾಗೂ ಎರಡನೇ ಫ್ಲ್ಯಾಟ್ ಗಳಲ್ಲಿ ಒಟ್ಟು ಈವರೆಗೆ 50 ಕೋಟಿ ರೂಪಾಯಿ ನಗದು. 5 ಕೆಜಿ ಚಿನ್ನ ಮತ್ತು ಕೆಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇ.ಡಿ ಮೂಲಗಳು ಹೇಳಿವೆ.