ಮುಂಬಯಿ: ಕೇಂದ್ರ ರೈಲ್ವೇಯ ಮುಂಬೈ ವಿಭಾಗವು ಟಿಕೆಟ್ ಇಲ್ಲದೆ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಂದ ಬರೋಬ್ಬರಿ 100 ಕೋಟಿಗಳಷ್ಟು ಬೃಹತ್ ಮೊತ್ತ ದಂಡವನ್ನು ಸಂಗ್ರಹಿಸಿದೆ. ಇದರೊಂದಿಗೆ ಮುಂಬೈ ಭಾರತೀಯ ರೈಲ್ವೇಯಲ್ಲಿ ಈ ಗಮನಾರ್ಹ ಸಾಧನೆ ಮಾಡಿದ ಮೊದಲ ವಿಭಾಗವಾಗಿದೆ.
ಈ ಮೊತ್ತವನ್ನು ಏಪ್ರಿಲ್ 2022 ರಿಂದ ಈ ವರ್ಷದ ಫೆಬ್ರವರಿ ವರೆಗೆ 18 ಲಕ್ಷ ಟಿಕೆಟ್ ರಹಿತ ಪ್ರಯಾಣಿಕರಿಂದ ದಂಡ ಸಂಗ್ರಹಿಸಲಾಗಿದೆ. ಕಳೆದ ವರ್ಷ ಈ ಪ್ರಮಾಣ 60 ಕೋಟಿ ಇತ್ತು. ಟಿಕೆಟ್ ಇಲ್ಲದೆ ರೈಲುಗಳಲ್ಲಿ ಪ್ರಯಾಣಿಸುವುದನ್ನು ತಪ್ಪಿಸಲು ಸೆಂಟ್ರಲ್ ರೈಲ್ವೇ ಜನರಿಗೆ ಸಾಕಷ್ಟು ಎಚ್ಚರಿಕೆ ನೀಡುತ್ತಿದ್ದು ಆದರೆ ಪ್ರಯಾಣಿಕರು ಎಲ್ಲಾ ಸಲಹೆಗಳನ್ನು ನಿರ್ಲಕ್ಷಿಸುತ್ತಿದ್ದಾರೆ, ಇದರ ಪರಿಣಾಮ ಇಂದು ಇಷ್ಟು ದೊಡ್ಡ ಮಟ್ಟದಲ್ಲಿ ದಂಡ ಸಂಗ್ರಹಿಸಲು ಕಾರಣವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಕೇಂದ್ರ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಶಿವಾಜಿ ಸುತಾರ್, ದಂಡ ಸಂಗ್ರಹಿಸಿ ಯಾವುದೇ ಗುರಿ ಮುಟ್ಟುವ ಉದ್ದೇಶ ಇಲ್ಲ, ಜನ ಅವರಾಗಿಯೇ ಟಿಕೆಟ್ ಖರೀದಿಸಿ ರೈಲು ಪ್ರಯಾಣ ಮಾಡಿದರೆ ಅವರಿಗೂ ಉತ್ತಮ ಜೊತೆಗೆ ರೈಲಿನಲ್ಲಿ ಪ್ರಯಾಣಿಸುವ ಇತರ ಪ್ರಯಾಣಿಕರಿಗೂ ಯಾವುದೇ ತೊಂದರೆ ಆಗುವುದಿಲ್ಲ, ನಮ್ಮ ಉದ್ದೇಶವೆಂದರೆ ಪ್ರಯಾಣಿಕರ ಪ್ರಯಾಣವನ್ನು ಆರಾಮದಾಯಕ ಮತ್ತು ಅನುಕೂಲಕರವಾಗಿಸುವುದು.
ಇತ್ತೀಚಿನ ದಿನಗಳಲ್ಲಿ ಟಿಕೆಟ್ ರಹಿತ ಪ್ರಯಾಣ ಮಾಡುವ ಪ್ರಯಾಣಿಕರ ಬಗ್ಗೆ ಹಲವಾರು ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಟಿಕೆಟ್ ತಪಾಸಣೆ ನಡೆಸಲು ನಿರ್ಧರಿಸಿದ್ದೇವೆ ಆದುದರಿಂದ ಇಷ್ಟು ದಂಡ ಸಂಗ್ರಹವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ, ಅಲ್ಲದೆ ದೂರದ ಊರಿಗೆ ಪ್ರಯಾಣಿಸುವ ಪ್ರಯಾಣಿಕರ ಟಿಕೆಟ್ ತಪಾಸಣೆ ಖಡ್ಡಾಯವಾಗಿ ಮಾಡುತ್ತಿದ್ದೇವೆ ಇತ್ತೀಚಿನ ದಿನಗಳಲ್ಲಿ ಎಲ್ಲ ಪ್ರಯಾಣಿಕರ ಟಿಕೆಟ್ ಪರಿಶೀಲನೆ ತೀವ್ರಗೊಳಿಸಿದ್ದೇವೆ ಎಂದು ಹೇಳಿದ್ದಾರೆ.
ಹವಾನಿಯಂತ್ರಿತ ಲೋಕಲ್ ರೈಲುಗಳಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸಿದ 25,781 ಪ್ರಯಾಣಿಕರಿಂದ 100 ಕೋಟಿ 87.43 ಲಕ್ಷ ರೂ. ಮತ್ತು ಪ್ರಥಮ ದರ್ಜೆ ಕೋಚ್‌ಗಳಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸಿದ 1.45 ಲಕ್ಷ ಪ್ರಯಾಣಿಕರಿಂದ 5.05 ಕೋಟಿ ರೂ. ದಂಡ ಸಂಗ್ರಹವಾಗಿದೆ ಎಂದು ಕೇಂದ್ರ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಯೋಧನ ಕುಟುಂಬದೊಂದಿಗೆ ಅನುಚಿತ ವರ್ತನೆ : ನಿತೀಶ್ ರಿಗೆ ರಾಜನಾಥ್ ಕರೆ