Advertisement

ಪ್ರಧಾನಿ ಮೋದಿ ಬಳಿ ಕೋಲಿ ನಿಯೋಗ

12:16 PM Dec 02, 2019 | Naveen |

ಕಲಬುರಗಿ: ಕರ್ನಾಟಕದಲ್ಲಿ ಕೋಲಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ ಬಳಿಗೆ ಜನವರಿ ತಿಂಗಳೊಳಗೆ ನಿಯೋಗ ತೆಗೆದುಕೊಂಡು ಹೋಗಲಾಗುವುದು ಎಂದು ಅಖೀಲ ಭಾರತೀಯ ಕೋಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ, ಗುಜರಾತ್‌ನ ಕುಡಿಯುವ ನೀರು ಸರಬರಾಜು, ಪಶುಸಂಗೋಪನಾ ಮತ್ತು ಗ್ರಾಮೀಣ ವಸತಿ ಖಾತೆ ಸಚಿವ ಕುನಾವರ್‌ಜೀ ಬಾಯಿ ಭಾವಲಿಯಾ ಭರವಸೆ ನೀಡಿದರು.

Advertisement

ನಗರದ ರಾಮಮಂದಿರ ಸಮೀಪದ ಜಿಡಿಎ ಲೇಔಟ್‌ನಲ್ಲಿರುವ ನೂತನ ನಿಜಶರಣ ಅಂಬಿಗರ ಚೌಡಯ್ಯ ಸಮುದಾಯ ಭವನದಲ್ಲಿ ರವಿವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಕಾರ್ಯಕಾರಿಣಿ, ಜನಜಾಗೃತಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದ 16 ರಾಜ್ಯದಲ್ಲಿ ಈಗಾಗಲೇ ಕೋಲಿ ಸಮಾಜ ಎಸ್‌ಸಿ ಹಾಗೂ ಒಂಭತ್ತು ರಾಜ್ಯದಲ್ಲಿ ಎಸ್‌ಟಿ ಸೌಲಭ್ಯ ಪಡೆಯುತ್ತಿದೆ. ಅದೇ ರೀತಿ ಕರ್ನಾಟಕ ರಾಜ್ಯದ ಕೋಲಿ ಸಮಾಜದ ಜನರಿಗೂ ಸಾಮಾಜಿಕ ನ್ಯಾಯ ದೊರೆಯಬೇಕಿದೆ. ಈ ನಿಟ್ಟಿನಲ್ಲಿ ಕರ್ನಾಟಕದಲ್ಲಿ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿರುವ ಕೋಲಿ ಸಮುದಾಯವನ್ನು ಶೀಘ್ರ ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಸಂಬಂಧ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮೇಲೆ ಒತ್ತಡ ಹಾಕಲಾಗುವುದು ಎಂದರು.

ಈಗ ಸಂಸತ್‌ ಅಧಿವೇಶನ ಆರಂಭ ಆಗಿರುವುದರಿಂದ ಪ್ರಧಾನಿ ಹಾಗೂ ಗೃಹ ಸಚಿವರ ಭೇಟಿಗೆ ಸಮಯ ಸಿಗುವುದು ಕಷ್ಟವಾಗಲಿದೆ. ಆದ್ದರಿಂದ ಜನವರಿಯೊಳಗೆ ಭೇಟಿಗೆ ಕಾಲಾವಕಾಶ ಕೇಳುತ್ತೇವೆ. ದೇಶದ ಎಲ್ಲ ಕೋಲಿ ಸಮಾಜದ ಸಂಸದರು ಹಾಗೂ ಕರ್ನಾಟಕದ ಎಲ್ಲ ಪಕ್ಷಗಳ ಸಂಸದರನ್ನು ಒಳಗೊಂಡ ನಿಯೋಗದೊಂದಿಗೆ ಭೇಟಿ ಮಾಡಲಾಗುವುದು ಎಂದು ಹೇಳಿದರು.

ವಿಧಾನ ಪರಿಷತ್‌ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಮಾತನಾಡಿ, ಕೋಲಿ ಸಮಾಜವನ್ನು ಎಸ್‌ಟಿಗೆ ಸೇರ್ಪಡೆ ಮಾಡುವುದು ಮೂರು ದಶಕಗಳ ಪ್ರಮುಖ ಬೇಡಿಕೆಯಾಗಿದೆ. ಬೇಡಿಕೆ ಈಡೇರಿಕೆ ಸಂಬಂಧ ರಾಷ್ಟ್ರಪತಿ ರಾಮನಾಥ ಕೋವಿಂದ, ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿಯಾಗಿ ಮನವರಿಕೆ ಮಾಡಿಕೊಡಲಾಗುವುದು ಎಂದು ಹೇಳಿದರು.

Advertisement

ಅಖೀಲ ಭಾರತೀಯ ಕೋಲಿ ಸಮಾಜದ ರಾಜ್ಯಾಧ್ಯಕ್ಷ ತಿಪ್ಪಣ್ಣ ರೆಡ್ಡಿ ಮಾತನಾಡಿ, ಕೋಲಿ ಸಮಾಜದ ಬಡ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕೋಲಿ ಭವನದ ಆವರಣದಲ್ಲಿ 21 ಕೋಣೆಯುಳ್ಳ ಹಾಸ್ಟೆಲ್‌ ನಿರ್ಮಿಸುವ ಬಗ್ಗೆ ಚಿಂತಿಸಲಾಗಿದೆ. ಸಮಾಜದಲ್ಲಿ ಗೊಂದಲ ಮೂಡಿಸುವ ಹಾಗೂ ಜನರನ್ನು ದಾರಿ ತಪ್ಪಿಸುವ ಕೆಲಸವನ್ನು ಯಾರೂ ಮಾಡಬಾರದು. ಹಾವೇರಿಯ ಚೌಡಯ್ಯ ಗುರುಪೀಠದ ಸಮಾರಂಭಕ್ಕೆ ರಾಷ್ಟ್ರಪತಿಗೆ ಆಹ್ವಾನ ಮಾಡಲು ಪ್ರಯತ್ನಿಸಲಾಗುವುದು ಎಂದರು.

ರಾಜಸ್ಥಾನ ಸಂಸದ ಬಹಾದ್ದೂರ ಸಿಂಗ್‌ ಕೋಲಿ, ಉತ್ತರ ಪ್ರದೇಶದ ಸಂಸದ ಘನಶ್ಯಾಮ್‌ ಅನುರಾಗಿ, ಮಹಾರಾಷ್ಟ್ರದ ಸಿದ್ದಾರ್ಥ ಕೋಲಿ, ಬಿಜೆಪಿ ಮುಖಂಡ ಶರಣಪ್ಪ ತಳವಾರ, ಕಾಂಗ್ರೆಸ್‌ ಮುಖಂಡ ರಾಜಗೋಪಾಲರೆಡ್ಡಿ ಮಾತನಾಡಿದರು. ಸಾನ್ನಿಧ್ಯ ವಹಿಸಿದ್ದ ಹಾವೇರಿಯ ನರಸಿಪುರ ಪೀಠದ ಪೀಠಾ ಧಿಪತಿ ಶಾಂತಭೀಷ್ಮ ಸ್ವಾಮೀಜಿ, ತೋನಸನಹಳ್ಳಿಯ ಮಲ್ಲಣ್ಣಪ್ಪ ಮುತ್ಯಾ, ಭಾರದ್ವಾಜ ಮಹಾರಾಜರು ಆಶೀವರ್ಚನ ನೀಡಿದರು.

ಸಂಘಟನಾ ಕಾರ್ಯದರ್ಶಿ ಶಿವಲಿಂಗಪ್ಪ ಕಿನ್ನೂರ, ಸರ್ಕಾರಿ ಕೋಲಿ ನೌಕರರ ಸಂಘದ ರಾಜ್ಯಾಧ್ಯಕ್ಷ ಬಾಬುರಾವ್‌ ಜಮಾದಾರ ಬಾದನಹಳ್ಳಿ, ನಿಕಟ ಪೂರ್ವ ಅಧ್ಯಕ್ಷ ಸತ್ಯನಾರಾಯಣ ಪವಾರ, ದತ್ತಾತ್ರೇಯ ರೆಡ್ಡಿ ಮುದಿರಾಜ, ರಂಜಿತಾ ಕೋಲಿ, ವೀರೇಂದ್ರ ಕಶ್ಯಪ, ಡಾ| ಭಾರತಿಬಹನ್‌, ಭಾನುಪ್ರತಾಪ ವರ್ಮಾ, ಕಿಶೋರಬಾಯಿ, ಅನಿಲಬಾಯಿ, ಮುಖೇಶ ಕೋರಿ ಇಂದಿರಾ ಶಕ್ತಿ, ಶಿವಶರಣಪ್ಪ ಕೊಬಾಳ, ಆರ್‌. ಎಂ.ನಾಟೀಕಾರ್‌, ವಸಂತರಾವ ನರಿಬೋಳ,
ಜಯಪ್ರಕಾಶ ಕಮಕನೂರ, ಹುಲಿಕಂಠರಾವ ಹೆರೂರ, ಶರಣು ಕೋಲಿ, ಬಾಬುರಾವ ಕೊಬಾಳ ಹಾಗೂ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಕೋಲಿ ಸಮಾಜದ ಮುಖಂಡರು, ಸಮಾಜ ಬಾಂಧವರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next