Advertisement

Jeera Water ; ಜೀರಿಗೆ ನೀರು ಕುಡಿಯುವುದರಿಂದ ಆರೋಗ್ಯಕ್ಕೆ ಹಲವಾರು ಉಪಯೋಗವಿದೆ…

03:07 PM May 16, 2023 | Team Udayavani |

ಈಗಿನ ಕಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಎಲ್ಲರ ಮುಖ್ಯ ಗುರಿಗಳಲ್ಲಿ ಒಂದು. ಅದಕ್ಕಾಗಿ ಹಲವರು ನಾನಾ ರೀತಿಯಾಗಿ ಪ್ರಯತ್ನಪಡುತ್ತಿರುತ್ತಾರೆ. ಅಂಥಹವರಿಗೊಂದು ಮುಖ್ಯ ಕಾಳು ಎಂದರೆ ಜೀರಿಗೆ.

Advertisement

ಜೀರಿಗೆ ನಮ್ಮ ಅಡುಗೆ ಮನೆಯಲ್ಲಿ ಸಿಗುವ ಸಾಮಾನ್ಯ ಕಾಳು ಎನಿಸಿದರೂ ಅದರ ಪ್ರಯೋಜನಗಳು ಹಲವಾರು ಎಂದೇ ಹೇಳಬಹುದು. ನಮ್ಮ ಪ್ರತಿನಿತ್ಯದ ಆಹಾರದಲ್ಲಿ ಬಳಕೆಯಾಗುವ ಜೀರಿಗೆ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಉಪಯೋಗವಾಗುವ ಕಾಳುಗಳಲ್ಲಿ ಒಂದು. ಬೆಳಿಗ್ಗೆ ಎದ್ದು ಖಾಲಿ ಹೊಟ್ಟೆಗೆ ಜೀರಿಗೆ ನೀರನ್ನು ಕುಡಿಯುವುದರಿಂದ ಹಲವು ಪ್ರಯೋಜನಗಳಿವೆ ಎಂದರೆ ತಪ್ಪಲ್ಲ.

ಖಾಲಿ ಹೊಟ್ಟೆಯಲ್ಲಿ ಏನೇ ಕುಡಿದರೂ ಅದು ನಮ್ಮ ಆರೋಗ್ಯಕ್ಕೆ ಹೆಚ್ಚಿನ ಲಾಭ ನೀಡುತ್ತದೆ.ಅದರಲ್ಲಿ ಜೀರಿಗೆ ನೀರು ಅಥವಾ ಜೀರಿಗೆ ಕಷಾಯ ಕೂಡಾ ಒಂದು. ಇದನ್ನು ಯಾವ ರೀತಿ ತಯಾರಿಸುವುದು ಎಂದು ಪ್ರಾರಂಭದಲ್ಲಿ ತಿಳಿದುಕೊಳ್ಳೋಣ.

ಒಂದು ಕಪ್ ನೀರಿನಲ್ಲಿ 1 ಟೀ ಚಮಚ ಜೀರಿಗೆ ಹಾಕಿ ರಾತ್ರಿಯಿಡೀ ನೆನೆಸಿ. ಬೆಳಿಗ್ಗೆ 5 ನಿಮಿಷಗಳ ಕಾಲ ಇದನ್ನು ಕುದಿಸಿ, ಸೋಸಿ ನಂತರ ಕುಡಿಯಿರಿ. ಅಥವಾ ಜೀರಿಗೆ ನೆನೆಸಿಟ್ಟ ನೀರನ್ನು ಹಾಗೇಯೆ ಕುದಿಸದೆಯೂ ಕುಡಿಯಬಹುದು.

ಜೀರಿಗೆ ನೀರಿಗೆ ಬೇಕಾದರೆ ಜೇನುತುಪ್ಪ ಸೇರಿಸಬಹುದು. ಉತ್ತಮ ಫಲಿತಾಂಶಕ್ಕಾಗಿ ಜೀರಿಗೆ ನೀರನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದು ಉತ್ತಮ.

Advertisement

ಜೀರಿಗೆ ನೀರು ಅಥವಾ ಜೀರಿಗೆ ಕಷಾಯ ಕುಡಿದರೆ ದೇಹವು ತಂಪಾಗಿರುತ್ತದೆ ಮತ್ತು ಇದು ದೇಹದಲ್ಲಿ ಉಷ್ಣತೆಯನ್ನು ಕಾಪಾಡಲು ನೆರವಾಗುತ್ತದೆ. ಆಯುರ್ವೇದದಲ್ಲಿ ಕೂಡ ಜಲಜೀರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಇದರಲ್ಲಿ ಇರುವಂತಹ ದೇಹವನ್ನು ತಂಪಾಗಿಸುವ ಗುಣವೇ ಇದಕ್ಕೆ ಕಾರಣ. ಇದು ಹಲವಾರು ಆರೋಗ್ಯ ಸಮಸ್ಯೆಗಳಿಗೆ ನೈಸರ್ಗಿಕ ಪರಿಹಾರ ಕೂಡಾ ಹೌದು.

ಜೀರಿಗೆಯ ಇತರ ಉಪಯೋಗಗಳು ಏನೆಂದರೆ..

ಜೀರ್ಣಕ್ರಿಯೆ ಸುಧಾರಣೆ :

ಜೀರಿಗೆ ನೀರು ಹೊಟ್ಟೆಯ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಆಹಾರಗಳಲ್ಲಿ ಒಂದು. ಇದು  ಹಲವಾರು ಜೀರ್ಣಕ್ರಿಯೆ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಹೊಟ್ಟೆಯುಬ್ಬರ, ಮಲಬದ್ಧತೆ ಅಥವಾ ವಾಕರಿಕೆಯಂಥ ಸಮಸ್ಯೆಗಳಿಗೆ ಪರಿಣಾಮಕಾರಿ ಮನೆ ಮದ್ದು ಈ ಜೀರಿಗೆ ಕಷಾಯ.

ತೂಕ ಇಳಿಸಲು:

ಖಾಲಿ ಹೊಟ್ಟೆಗೆ ಜೀರಿಗೆ ನೀರು ಕುಡಿದರೆ ತೂಕ ಇಳಿಸಲು ತುಂಬಾ ಸಹಕಾರಿ. ಯಾಕೆಂದರೆ ಇದರಲ್ಲಿ ಆಹಾರದ ನಾರಿನಾಂಶವು ಹೆಚ್ಚಾಗಿದೆ ಮತ್ತು ಜೀರ್ಣಕ್ರಿಯೆ ವ್ಯವಸ್ಥೆಯು ಸರಾಗವಾಗಿ ಆಗಲು ನೆರವಾಗುತ್ತದೆ. ಜೀರಿಗೆಯಲ್ಲಿ ಕ್ಯಾಲರಿ ಕಡಿಮೆ ಇರುವುದರಿಂದ ತೂಕ ಇಳಿಕೆಗೆ ಸಹಾಯ ಮಾಡುತ್ತದೆ. ತೂಕ ಇಳಿಸಲು ಜೀರಿಗೆ ನೀರು ಸೇವಿಸಲು ಸರಿಯಾದ ಸಮಯ, ಬೆಳಗ್ಗೆ ಖಾಲಿ ಹೊಟ್ಟೆಗೆ ಎನ್ನಲಾಗುತ್ತದೆ.

ತಾಯಿಗೆ ಎದೆಹಾಲು ವೃದ್ಧಿಸಲು ಸಹಕಾರಿ:

ಜೀರಿಗೆಯಲ್ಲಿ ಕಬ್ಬಿಣಾಂಶ ಹೆಚ್ಚಾಗಿರುವುದರಿಂದ ಗರ್ಭಿಣಿ ಮತ್ತು ಬಾಣಂತಿಯರಿಗೆ ಜೀರಿಗೆ ನೀರು ಆರೋಗ್ಯಕರ ಪಾನೀಯ. ಈ ನೀರು ಕುಡಿಯುವುದರಿಂದ ತಾಯಿಯ ಎದೆಹಾಲು ವೃದ್ಧಿಯಗಲು ಸಹಾಯ ಮಾಡುತ್ತದೆ. ಮಗುವಿಗೆ ಅಗತ್ಯವಿರುವ ಎಲ್ಲಾ ಪೋಷಕಾಂಶ ದೊರೆಯಲು ಜೀರಿಗೆ ನೀರು ಸಹಾಯ ಮಾಡುತ್ತದೆ.

ಮುಖದ ಸುಕ್ಕು ನಿವಾರಣೆ:

ಜೀರಿಗೆ ನೀರಿನಲ್ಲಿ ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಮ್ಯಾಂಗನೀಸ್ ಖನಿಜಗಳು ಸಮೃದ್ಧವಾಗಿವೆ. ಇದು ಚರ್ಮದ ಕಾಂತಿ ಹೆಚ್ಚಳವಾಗಲು ಸಹಾಯ ಮಾಡುತ್ತದೆ. ಇದರಲ್ಲಿ ವಿಟಮಿನ್‌ ಇ ಅಂಶ ಇರುವುದರಿಂದ ಚರ್ಮಕ್ಕೆ ಹೊಳಪು ನೀಡಲು ಸಹಾಯ ಮಾಡುತ್ತದೆ. ನಿತ್ಯ ತಪ್ಪದೆ ಕುದಿಸಿದ ಜೀರಿಗೆ ನೀರನ್ನು ಕುಡಿಯುತ್ತ ಬಂದರೆ ಮುಖದಲ್ಲಿನ ಸುಕ್ಕುಗಳು ನಿವಾರಣೆಯಾಗುತ್ತದೆ.

ರೋಗ ನಿರೋಧಕ ಶಕ್ತಿ ವೃದ್ಧಿ:

ಜೀರಿಗೆ ಜೀರ್ಣಕ್ರಿಯೆ ವ್ಯವಸ್ಥೆಯನ್ನು ಆರೋಗ್ಯವಾಗಿಡುವುದರೊಂದಿಗೆ ಪ್ರತಿರೋಧಕ ಶಕ್ತಿ ವೃದ್ಧಿಸುತ್ತದೆ. ಜೀರಿಗೆಯಲ್ಲಿ ಹೆಚ್ಚಿನ ಮಟ್ಟದ ವಿಟಮಿನ್ ಎ ಮತ್ತು ಸಿ ಇದೆ. ಇವುಗಳು ರೋಗನಿರೋಧಕಗಳಾಗಿ ಕೆಲಸ ಮಾಡಿ ಸೋಂಕಿನ ವಿರುದ್ಧ ಹೋರಾಡಲು ಸಹಕಾರಿಯಾಗಿದೆ.

ಚಯಾಪಚಯ ಹೆಚ್ಚಿಸುತ್ತದೆ:

ಜೀರಿಗೆ ನೀರು ಚಯಾಪಚಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಹೀಗಾಗಿ, ಜೀರಾ ನೀರು ತೂಕ ನಷ್ಟಕ್ಕೆ ಪ್ರಯೋಜನಕಾರಿ ಎಂದು ಸಾಬೀತಾಗಿದೆ. ಏಕೆಂದರೆ ಇದು ಕ್ಯಾಲೋರಿ ಕಡಿಮೆ ಮಾಡುವ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ. ಒಂದು ಟೀ ಚಮಚ ಜೀರಿಗೆ 7-8 ಕ್ಯಾಲೋರಿಗಳನ್ನು ಹೊಂದಿರುತ್ತದೆ.

*ಕಾವ್ಯಶ್ರೀ

Advertisement

Udayavani is now on Telegram. Click here to join our channel and stay updated with the latest news.

Next