Advertisement

ಹನಿ ನೀರಿಗಾಗಿ ಪರಿತಪಿಸುತ್ತಿವೆ ಜೀವ

09:58 AM Apr 04, 2019 | Naveen |

ಔರಾದ: ಬಿಸಿಲಿನ ತಾಪ ಹೆಚ್ಚಾಗುತ್ತಿದಂತೆ ದಿನದಿಂದ ದಿನಕ್ಕೆ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗುತ್ತಿದ್ದು, ಧೂಪತಮಗಾಂವ ಗ್ರಾಪಂ ವ್ಯಾಪ್ತಿಯ ಚಂದ್ರನಾಯ್ಕ ತಾಂಡಾದಲ್ಲಿ ಕಳೆದೆರಡು ವಾರಗಳಿಂದ ನೀರಿಗಾಗಿ ನಿವಾಸಿಗಳ ಪರದಾಟ ಪ್ರಾರಂಭವಾಗಿದೆ.

Advertisement

ಚಂದ್ರನಾಯ್ಕ ತಾಂಡಾದಲ್ಲಿ 12 ಕುಟುಂಬಗಳಿದ್ದು, 120 ಜನರು ಹಾಗೂ 200ಕ್ಕೂ ಹೆಚ್ಚು ಜಾನುವಾರುಗಳಿವೆ. ಈ ಜನರಿಗೆ ತಾಂಡಾದಲ್ಲಿದ್ದ ಒಂದೇ ಒಂದು ಕೊಳವೆ ಬಾವಿ ಇದ್ದು, ಇದೀಗ ಅದರ ನೀರೂ ಕೂಡ ಪಾತಾಳ ಕಂಡಿದೆ. ಇದರಿಂದ ಜನ-ಜಾನುವಾರುಗಳು ಹನಿ ನೀರಿಗಾಗಿ ಗುಟುರುತ್ತಿವೆ.

ಒಣಗಿದ ಜಲಮೂಲ: ಕಳೆದ ಹದಿನೈದು ದಿನಗಳ
ಹಿಂದೆ ಗ್ರಾಮದಲ್ಲಿನ ಏಕೈಕ ಕೊಳವೆಬಾವಿ ಒಣಗಿದೆ. ಇರುವ ಒಂದೇ ನೀರಿನ ಮೂಲ ಕೈಕೊಟ್ಟಿದ್ದರಿಂದ ನಿವಾಸಿಗಳು ಎರಡು ಕಿ.ಮೀ ದೂರದಲ್ಲಿರುವ ನಾಗುರ(ಬಿ) ಹಾಗೂ ಧೂಪತಮಗಾಂವ ಗ್ರಾಮದಿಂದ ಕಾಲ್ನಡಿಗೆ ಮೂಲಕ ನೀರು ತರುವ ದಯನೀಯ ಸ್ಥಿತಿ ನಿರ್ಮಾಣವಾಗಿದೆ. ಮನೆ ಮಾಡಿದ ಆತಂಕ: ಸದ್ಯ ನಿವಾಸಿಗಳು ಎರಡು ಕಿ.ಮೀ ದೂರದಿಂದ ನೀರು ತರುತ್ತಿದ್ದಾರೆ ನಿಜ. ಆದರೆ, ಜಾನುವಾರುಗಳಿಗೆ ನಿತ್ಯ ನೀರು ಹೇಗೆ ಪೂರೈಸಬೇಕು ಎನ್ನುವ ಆತಂಕ ಜನರಲ್ಲಿ ಮನೆ ಮಾಡಿದೆ.

ನೀರಿನ ಸಮಸ್ಯೆ ಬಗ್ಗೆ ಔರಾದ ಶಾಸಕ ಪ್ರಭು ಚವ್ಹಾಣ, ಧೂಪತಮಗಾಂವ ಗ್ರಾಪಂ ಅಭಿವೃದ್ಧಿ ಅಧಿಕಾರಿ ಹಾಗೂ ಅಧ್ಯಕ್ಷರಿಗೆ ಲಿಖಿತವಾಗಿ ಮನವಿ ಸಲ್ಲಿಸಿದರೂ ಯಾವೊಬ್ಬ ಅಧಿಕಾರಿಗಳು ಮುಂದೆ ಬಾರದಿರುವುದು ಜನರ ಕೆಂಗಣ್ಣಿಗೆ ಗುರಿಯಾಗಿದೆ.

ಸರ್ಕಾರ ಬರ ಪೀಡಿತ ಪ್ರದೇಶದ ಜನ- ಜಾನುವಾರುಗಳಿಗೆ ಕುಡಿಯುವ ನೀರು ಸೇರಿದಂತೆ ಅಗತ್ಯ ಸೌಕರ್ಯ ಕಲ್ಪಿಸಲು ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಸಭೆ, ಸಮಾರಂಭಗಳಲ್ಲಿ ಅಧಿಕಾರಿಗಳು, ಜನನಾಯಕರು ಹೇಳುತ್ತಿದ್ದಾರೆ. ಜಿಲ್ಲಾಧಿಕಾರಿ ನೇತೃತ್ವದಲ್ಲಿ ತಾಲೂಕು ಸೇರಿದಂತೆ ಜಿಲ್ಲಾ ಕೇಂದ್ರಸ್ಥಾನದಲ್ಲಿ ಸಭೆ ನಡೆಸಿ ಜನರಿಗೆ ಸಮಸ್ಯೆಯಾಗದಂತೆ ಕರ್ತವ್ಯ ನಿರ್ವಹಿಸಲು ಖಡಕ್‌ ಸಂದೇಶ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುವ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತದೆ. ಗ್ರಾಮದಲ್ಲಿರುವ ಒಂದೇ ಒಂದು ಕೊಳವೆ ಬಾವಿ ನೀರು ಒಣಗಿದೆ. ಹೀಗಾಗಿ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣವಾಗುತ್ತಿದ್ದು, ಈ ಕೂಡಲೇ ನೀರಿನ ಸಮಸ್ಯೆಗೆ ಮುಕ್ತಿ ನೀಡಬೇಕೆನ್ನುವುದು ತಾಂಡಾ ನಿವಾಸಿಗಳ ಒತ್ತಾಸೆಯಾಗಿದೆ.

Advertisement

ಕೊಳವೆಬಾವಿ ನೀರು ಒಣಗಿದೆ. ಅಧಿಕಾರಿಗಳು ಕೂಡಲೇ ತಾತ್ಕಾಲಿಕವಾಗಿ ತಾಂಡಾಕ್ಕೆ ನೀರು ಪೂರೈಸಲು ಮುಂದಾಗಬೇಕು. ಈ ಬಗ್ಗೆ ಹಿಂದೇಟು ಹಾಕಿದರೆ ವಾರದಲ್ಲಿ ನಾವುಗಳೇ ತಾಂಡಾ ಬಿಟ್ಟು ಬೇರೆ ಕಡೆಗೆ ವಲಸೆ ಹೊಗುತ್ತೇವೆ.
ಕಾಶಿನಾಥ ರಾಠೊಡ,
ತಾಂಡಾ ನಿವಾಸಿ

ನಾನೂ ನಾಲ್ಕು ದಿನಗಳ ಹಿಂದಷ್ಟೇ ಧೂಪತಮಗಾಂವ ಗ್ರಾಪಂ ಅಭಿವೃದ್ಧಿ ಅಧಿಕಾರಿಯಾಗಿ ಬಂದಿದ್ದೇನೆ. ಆದಷ್ಟು ಶೀಘ್ರ ನೀರಿನ ಸಮಸ್ಯೆ ಬಗೆಹರಿಸುವ ಮೂಲಕ ಜನರ ಸಮಸ್ಯೆಗೆ ಮುಕ್ತಿ ನೀಡುತ್ತೇನೆ.
ಶಿವಾನಂದ ಔರಾದೆ, ಗ್ರಾಪಂ ಅಭಿವೃದ್ಧಿ
ಅಧಿಕಾರಿ,ಧೂಪತಮಗಾಂವ

ರವೀಂದ್ರ ಮುಕ್ತೇದಾರ್‌

Advertisement

Udayavani is now on Telegram. Click here to join our channel and stay updated with the latest news.

Next