ಬೀದರ: ಕೋವಿಡ್ ಸಂಕಷ್ಟದ ನಡುವೆಯೂ ಉತ್ತಮ ಮಳೆಯಿಂದಾಗಿ ಸೋಯಾಬಿನ್ ಬಿತ್ತನೆ ಮಾಡಿ ಹಣ ಗಳಿಸಬೇಕೆಂಬ ಜಿಲ್ಲೆಯ ಅನ್ನದಾತರಿಗೆ “ಬೀಜ ನೋ ಸ್ಟಾಕ್’ ತಣ್ಣೀರೆರಚಿದೆ. ಸೋಯಾಬಿನ್ ಬೀಜಕ್ಕಾಗಿ ರೈತರು ರೈತ ಸಂಪರ್ಕ ಕೇಂದ್ರಕ್ಕೆ ಅಲೆದಾಡುತ್ತಿದ್ದು, ಅಧಿ ಕಾರಿಗಳಿಗೆ ದಿಗ½ಂಧನ ಹಾಕಿ ಬಿಸಿ ಮುಟ್ಟಿಸಿದ್ದಾರೆ.
ಇನ್ನೊಂದೆಡೆ ಕೃಷಿ ಇಲಾಖೆ ಬೀಜದ ಕೊರತೆ ಇದೆ ಎಂದು ಕೈಚಲ್ಲಿ ಕುಳಿತಿದೆ. ಸೋಯಾಬಿನ್ ಮಳೆ ಹೆಚ್ಚಾದರೂ ಇಲ್ಲ ಕಡಿಮೆಯಾದರೂ ಉತ್ತಮ ಇಳುವರಿ ನೀಡುವ ಕಾರಣ ರೈತರಿಗೆ “ಭರವಸೆ’ಯ ಬೆಳೆ ಎಂದೆನಿಸಿಕೊಂಡಿದೆ. ಹಾಗಾಗಿ ವರ್ಷದಿಂದ ವರ್ಷಕ್ಕೆ ಜಿಲ್ಲೆಯಲ್ಲಿ ಸೋಯಾ ಕ್ಷೇತ್ರ ಗಣನೀಯವಾಗಿ ಹೆಚ್ಚಿದ್ದು, ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯ ಒಟ್ಟು ಬಿತ್ತನೆ ಪ್ರದೇಶ (3.60 ಲಕ್ಷ ಹೆಕ್ಟೇರ್) ಪೈಕಿ ಅರ್ಧದಷ್ಟು (1.80 ಲಕ್ಷ ಹೆಕ್ಟೇರ್) ಪ್ರದೇಶದಲ್ಲಿ ಸೋಯಾ ಆವರಿಸಿಕೊಂಡಿದೆ.
ಇಂದು ಬೀದರ ರಾಜ್ಯದಲ್ಲೇ ಅತಿ ಹೆಚ್ಚು ಸೋಯಾಬಿನ್ ಬೆಳೆಯುವ ಜಿಲ್ಲೆಯಾಗಿದೆ. ಪ್ರತಿ ಹೆಕ್ಟೇರ್‌ಗೆ 75 ಕೆ.ಜಿಯಂತೆ ಜಿಲ್ಲೆಯಲ್ಲಿ 1.80 ಲಕ್ಷ ಹೆಕ್ಟೇರ್ ಭೂಮಿಗೆ 1.15 ಲಕ್ಷ ಕ್ವಿಂಟಲ್ ಸೋಯಾ ಬೀಜದ ಅವಶ್ಯಕತೆ ಇದೆ. ಪ್ರತಿ ವರ್ಷ ದೇಶದಲ್ಲೇ ಅತಿ ಹೆಚ್ಚಿನ ಪ್ರಮಾಣದಲ್ಲಿ ಸೋಯಾ ಬೆಳೆಯುವ ಮಧ್ಯಪ್ರದೇಶದಿಂದ ರಾಜ್ಯಕ್ಕೆ ಸುಧಾರಿತ ಬೀಜ ತರಿಸಿಕೊಳ್ಳಲಾಗುತ್ತದೆ. ಆದರೆ, ಅಲ್ಲಿಯೂ ಉತ್ಪಾದನೆ ಕುಸಿತವಾಗಿರುವುದು ನಿರೀಕ್ಷಿತ ಪ್ರಮಾಣದಲ್ಲಿ ದಾಸ್ತಾನು ಸಾಧ್ಯವಾಗಿಲ್ಲ.
ಕೃಷಿ ಇಲಾಖೆ ಮಾಹಿತಿ ಪ್ರಕಾರ ಈ ವರ್ಷ ಕರ್ನಾಟಕಕ್ಕೆ 1.50 ಲಕ್ಷ ಕ್ವಿಂಟಲ್ ಸೋಯಾ ಬೀಜ ಖರೀದಿಸಿದ್ದು, ಅದರಲ್ಲಿ 91 ಸಾವಿರ ಕ್ವಿಂಟಲ್ ಬೀಜ ಬೀದರ ಜಿಲ್ಲೆಗೆ ಪೂರೈಸಲಾಗಿದೆ. ಆದರೆ, ಜಿಲ್ಲೆಯಲ್ಲಿ ಸೋಯಾ ಬಿತ್ತನೆ ಪ್ರದೇಶ ಹೆಚ್ಚಿರುವುದರಿಂದ ಬೇಡಿಕೆಯಷ್ಟು ಬೀಜ ಪೂರೈಕೆ ಆಗಿಲ್ಲ. ಈವರೆಗೆ 91 ಸಾವಿರ ಕ್ವಿಂಟಲ್ ಬೀಜ ರೈತರಿಗೆ ವಿತರಿಸಲಾಗಿದೆ.
ಬೇಡಿಕೆ ಹಿನ್ನೆಲೆ ಕೊಳಾರ ಕೈಗಾರಿಕಾ ವಲಯದ ಖಾಸಗಿ ಕಂಪನಿಯಿಂದ 14850 ಕ್ವಿಂಟಲ್ ದೃಢೀಕೃತ ಬೀಜ ಖರೀದಿಸಿದ್ದು, ಶನಿವಾರದವರೆಗೆ ವಿವಿಧ ತಾಲೂಕುಗಳಲ್ಲಿ ವಿತರಣೆ ಮಾಡಲಾಗುತ್ತಿದೆ. ಈಗ ಒಟ್ಟು 93 ಸಾವಿರ ಕ್ವಿಂಟಲ್ ಸೋಯಾ ಬೀಜ ನೀಡಿದಂತಾಗಿದೆ. ಜಿಲ್ಲೆಯಲ್ಲಿ ಶನಿವಾರದ ಬಳಿಕ ಸೋಯಾಬಿನ್ ಬೀಜದ ದಾಸ್ತಾನು ಸಂಪೂರ್ಣ ಖಾಲಿ ಆಗಲಿದೆ.
ಸರ್ಕಾರಕ್ಕೆ ಸಲ್ಲಿಸಿದ್ದ 1 ಲಕ್ಷ ಕ್ವಿಂಟಲ್ ಬೇಡಿಕೆಗಿಂತ ಕಡಿಮೆ ಹಂಚಿಕೆ ಆಗಿದೆ. ಇನ್ನೂ ಅಂದಾಜು 10 ಸಾವಿರಕ್ಕೂ ಹೆಚ್ಚು ಕ್ವಿಂಟಲ್ ಬೀಜದ ಕೊರತೆ ಎದುರಾಗಿದೆ. ಸುಧಾರಿತ ಬೀಜ ಸದ್ಯ ಯಾವುದೇ ಕಂಪನಿಗಳಲ್ಲಿ ಲಭ್ಯವಿಲ್ಲದ ಕಾರಣ, ಹೆಚ್ಚುವರಿ ಬೇಡಿಕೆ ಬೀಜ ಬರುವ ಗ್ಯಾರಂಟಿ ಇಲ್ಲ. ಹೀಗಾಗಿ ಪರ್ಯಾಯ ತೊಗರಿ, ಉದ್ದು, ಹೆಸರು ಬೆಳೆ ಬೆಳೆಯುವತ್ತ ಮುಂದಾಗಬೇಕು ಎಂದು ಕೃಷಿ ಅ ಧಿಕಾರಿಗಳು ತಮ್ಮ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.