ಚಿತ್ರದುರ್ಗ: ಜಾಗತೀಕರಣದ ಜಗತ್ತಿನಲ್ಲಿ ದೇಶ ಅಭಿವೃದ್ಧಿ ಪಥದತ್ತ ಸಾಗಬೇಕಾದರೆ ಯುವಶಕ್ತಿ ಸದೃಢರಾಗಬೇಕು ಎಂದು ಸಮಾಜಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಹೇಳಿದರು.
ನಗರದಲ್ಲಿ ಮಂಗಳವಾರ ರುಡ್ ಸೆಟ್ ಸಂಸ್ಥೆ ವಿಶ್ವ ಯುವ ದಿನದ ನಿಮಿತ್ತ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಯುವಶಕ್ತಿ ದೇಶದ ಸಂಪತ್ತಿನ ಗಣಿಯಾಗಿದೆ. ಯುವ ಜನತೆಯನ್ನು ಸರಿಯಾದ ದಾರಿಯಲ್ಲಿ ಮುನ್ನಡೆಸುವ ನಾಯಕತ್ವ ದೇಶದಲ್ಲಿದೆ ಎಂದರು. ಯಶಸ್ಸನ್ನು ಪಡೆಯಲು ದೃಢ ಪ್ರಯತ್ನ ಮಾಡಬೇಕು.
ಮಹಾತ್ಮ ಗಾಂಧೀಜಿಯವರ ಗ್ರಾಮ ಸ್ವರಾಜ್ಯ ಕಲ್ಪನೆಯಂತೆ ಸ್ವಾವಲಂಬಿ ಬದುಕನ್ನು ರೂಪಿಸಿಕೊಳ್ಳುವ ಮೂಲಕ ನಿರುದ್ಯೋಗ ಸಮಸ್ಯೆಯನ್ನು ಪರಿಹರಿಸಿಕೊಳ್ಳಬೇಕು. ಸ್ವಉದ್ಯೋಗದ ಬದುಕನ್ನು ಪ್ರೇರೇಪಿಸುವ ಉದ್ದೇಶಕ್ಕೆ ಪೂರಕವಾಗಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ರುಡ್‌ಸೆಟ್ ಸಂಸ್ಥೆಯಲ್ಲಿನ ಅಲ್ಪಾವಧಿ ತರಬೇತಿ ಕಾರ್ಯಕ್ರಮಗಳು ಪ್ರಧಾನಿ ನರೇಂದ್ರ ಮೋದಿಯವರ ಸಕಲ್ಪವಾಗಿರುವ ಆತ್ಮ ನಿರ್ಭರ ಭಾರತ ಹಾಗೂ ಸ್ವಾಬಿಮಾನದ ಬದುಕಿಗೆ ಸಹಕಾರಿ ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ:ಕೆರೆ ಒತ್ತುವರಿತೆರವಿಗೆ ಡಿಸಿ ಸೂಚನೆ
ಲೀಡ್ ಬ್ಯಾಂಕ್ ಎಲ್‌ಡಿಎಂ ಸಿ.ಬಿ. ಹಿರೇಮಠ, ಕೆನರಾ ಬ್ಯಾಂಕ್ ಮುಖ್ಯ ಪ್ರಬಂಧಕ ಟಿ. ಸಾಯಿಕುಮಾರ್, ರುಡ್ ಸೆಟ್ ಸಂಸ್ಥೆ ನಿರ್ದೇಶಕಿ ಜಿ. ಮಂಜುಳ, ಉಪನ್ಯಾಸಕಿ ಲತಾಮಣಿ, ಕಂಪ್ಯೂಟರ್, ಕಂಪ್ಯೂಟರ್ ಹಾರ್ಡ್‌ವೇರ್, ನೆಟ್‌ವರ್ಕ್ ಹಾಗೂ ಬ್ಯೂಟಿಪಾರ್ಲರ್ ತರಬೇತಿ ಸೇರಿದಂತೆ ಒಟ್ಟು 75 ಶಿಬಿರಾರ್ಥಿಗಳು, ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.